ಮಲ್ಲಯ್ಯ ಪೋಲಂಪಲ್ಲಿ 

ಶಹಾಪುರ(ಸೆ.28): ಎಲ್ಲಿ ನೋಡಿದರೂ ಕಸ ಕಡ್ಡಿಗಳ ರಾಶಿ, ಕಾಲಿಟ್ಟಲ್ಲೆಲ್ಲ ರಜ್ಜು-ಗೊಜ್ಜು. ಮೂಗು ಮುಚ್ಚಿಕೊಂಡೇ ಇಲ್ಲಿ ಸಂಚರಿಸಬೇಕು. ಆಯತಪ್ಪಿ ಬಿದ್ದರೆ ಕೊಚ್ಚೆ ಕೊಳಚೆ ಗಳ ಮಧ್ಯೆ ಬಿದ್ದು ಈಜಾಡಿ ಬರಬೇಕಾದ ಅನಿವಾರ್ಯತೆ. ನೂರಕ್ಕೂ ಹೆಚ್ಚು ಹಂದಿಗಳು, ಕ್ರಿಮಿ ಕೀಟಗಳ ತಾಣ. ತರಕಾರಿ ಖರೀದಿಸಲು ಬಂದವರಿಗೆ ಡೆಂಘೀ ಇಲ್ಲಿ ಫ್ರೀ..! 

ಇದು ಶಹಾಪೂರದ ತರಕಾರಿ ಮಾರ್ಕೆಟ್.. ಅಲ್ಲಲ್ಲ, ಚರಂಡಿ ಮಾರ್ಕೆಟ್.. ದಿನನಿತ್ಯ ಲಕ್ಷಾಂತರ ಜನರಿಗೆ ಸಾಕ್ಷಿಯಾಗುವ ಶಹಾಪುರದ ಕಾಯಿಪಲ್ಯೆ ಮಾರ್ಕೆಟ್ ಅನ್ನೋದು ಚರಂಡಿಗಿಂತಲೂ ಭೀಕರ- ಅಸಹ್ಯಕರ. ಮಾರಾಟ ಮಾಡುವವರು ಹಾಗೂ ಖರೀದಿಸುವವರಿಗೆ ಇಲ್ಲಿನ ವಾತಾವರಣ ಬೇಡವಾದರೂ, ಇದು ಅನಿವಾರ್ಯದಂತಿದೆ. ಸ್ವಚ್ಛಮೇವ ಜಯತೇ ಅನ್ನೋ ಸ್ಲೋಗನ್ ಇಲ್ಲಿ ತದ್ವಿರುದ್ಧ. ದುಡ್ಡು ಕೊಟ್ಟು ಕಾಯಿಪಲ್ಯೆ ಖರೀದಿ ಜೊತೆಗೆ ಸಾಂಕ್ರಾಮಿಕ ರೋಗಗಳನ್ನೂ ಆಹ್ವಾನಿಸಿ ದಂತಾಗುತ್ತಿದೆ ಇಲ್ಲಿನ ಜನರ ದುಸ್ಥಿತಿ. ಹಾಗೆ ನೋಡಿದರೆ, ಎಲ್ಲೆಡೆ ತರಕಾರಿ ಮಾರುಕಟ್ಟೆಗಳು ಗೌಜು ಗದ್ದಲದಿಂದ ಕೂಡಿರುತ್ತಾದರೂ, ಶಹಾಪುರದಷ್ಟು ಹೊಲಸು ಮತ್ತೆಲ್ಲೂ ಸಿಗಲಿಕ್ಕಿಲ್ಲವೇನೋ ಎಂಬಂತಿದೆ. 
ಹಂದಿಗೂಡಿನ ಪಕ್ಕ, ತುಂಬಿ ಹರಿಯುತ್ತಿರುವ ಚರಂಡಿಗಳ ಮಧ್ಯೆಯೇ ಕುಳಿತು ತರಕಾರಿ ಮಾರುವವರು ಹಾಗೂ ಖರೀದಿಸುವರು ಇಲ್ಲಿ ಕಾಣಸಿಗುತ್ತಾರೆ. ಸ್ವಚ್ಛತೆ ಅನ್ನೋದು ಇಲ್ಲಿ ಮರೀಚಿಕೆಯಾಗಿದೆ. ದಿನಂಪ್ರತಿ ಸ್ವಚ್ಛತೆ ಬಗ್ಗೆ ಭಾಷಣ ಮಾಡುವ ನಗರಸಭೆ ಸ್ವಚ್ಛತಾ ಸಿಬ್ಬಂದಿಗೆ ಇದು ಕಾಣದಿರುವುದು ವಿಚಿತ್ರ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಮಳೆ ಬಂದಾಗಂತಲೂ ಇಲ್ಲಿನ ಪರಿಸ್ಥಿತಿ ಘನ ಘೋರ. ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದರಿಂದ ಇಡೀ ಮಾರುಕಟ್ಟೆಯ ಮೇಲ್ಭಾಗಕ್ಕೆಲ್ಲ ಹೊಲು ನೀರು ಬಂದು ಸೇರಿ, ಅಲ್ಲಿನ ಪ್ರಾಂಗಣ ಕೆರೆಯಂಗಳದಂತೆ ಭಾಸವಾಗುತ್ತದೆ. ಕೊಳಚೆ ನೀರಿನ ಮಧ್ಯೆಯೇ ತರಕಾರಿ, ಹಣ್ಣು ಹಂಪಲುಗಳು, ದಿನಸಿ ವಸ್ತುಗಳು ಸೇರಿದಂತೆ ಅನೇಕವು ಇಲ್ಲಿ ವ್ಯಾಪಾರ ವಹಿವಾಟು ನಡೆಸುತ್ತವೆ. 

ಸ್ವಚ್ಛತೆಗೆ ಆದ್ಯತೆ ಇಲ್ಲ

ಸ್ವಚ್ಛತೆಗೆ ಆದ್ಯತೆ ನೀಡಬೇಕು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡ ದಂತಾಗಬಾರದು ಎಂದೆಲ್ಲಾ ಹೇಳುತ್ತಾರಾದರೂ, ಅಧಿಕಾರಿಗಳ ಪಾಲಿಗೆ ಅದು ಕೇವಲ ಕಾಗದದಲ್ಲಿನ ದಾಖಲೆ ಮಾತ್ರ. ಕಾಟಾಚಾರಕ್ಕೆಂಬಂತೆ ಸ್ವಚ್ಛತಾ ಅಭಿಯಾನದ ದಿನ ದಂದು ಮಾತ್ರ ಪೊರಕೆ ಹಿಡಿದುಕೊಂಡು ಫೋಟೋಕ್ಕೆ ಫೋಸು ಕೊಡುವ ಆಡಳಿತ ವರ್ಗಕ್ಕೆ ದಿನಂಪ್ರತಿ ಇಲ್ಲಿನ ಅವ್ಯವಸ್ಥೆ ಕಣ್ಣಿಗೆ ಕಾಣದಿರುವುದು ಸೋಜಿಗ. ನಗರಸಭೆ ಕಚೇರಿಯಿಂದ ಕೇವಲ 200  ಮೀಟರ ಗಳಿಗಿಂತಲೂ ಸಮೀಪದಲ್ಲೇ ಇರುವ ಈ ಮಾರ್ಕೆಟ್ಟಿನ ದುಸ್ಥಿತಿ ಅಲ್ಲಿನ ಜವಾಬ್ದಾರಿಯುತರಿಗೆ ಗೊತ್ತಿಲ್ಲವೆಂದರೆ, ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ.

ಈ ಬಗ್ಗೆ ಮಾತನಾಡಿದ ಶಹಾಪುರದ ಕಾರ್ಮಿಕ ಮುಖಂಡ ನಿಂಗಣ್ಣ ನಾಟೇಕರ್ ಅವರು, ಮಳೆಗಾಲದಲ್ಲಿ ಈ ಮಾರುಕಟ್ಟೆ ಕೆಸರಿನ ಗದ್ದೆಯಂತಾಗುತ್ತದೆ. ಸಂಬಂಧಪಟ್ಟ ಇಲಾಖೆಯವರು ಈ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಬೇಕು. ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಶಹಾಪುರ ನಗರಸಭೆಯ ಪೌರಾಯುಕ್ತ ಬಸವರಾಜ ಶಿವಪೂಜೆ ಅವರು, ನನ್ನ ಗಮನಕ್ಕೆ ಬಂದಿದೆ. ನಾನು ಈ ಕೂಡಲೇ ತರಕಾರಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಮಾಡಲು ಕ್ರಮ ಕೈಗೊಳ್ಳುತ್ತೇನೆ, ಬ್ಲೀಚಿಂಗ್ ಪೌಡರ್ ಹಾಕಿಸುತ್ತೇನೆ ಎಂದು ತಿಳಿಸಿದ್ದಾರೆ.  

ಕಾಯಿಪಲ್ಯೆ ತರಲು ಮಾರುಕಟ್ಟೆಗೆ ಬರಬೇಕೆಂದರೆ ಗಲೀಜು ನೋಡಿ ವಾಂತಿ ಬರ್ತದ. ಗಲೀಜಿನಲ್ಲಿ ಕುಂತು ತರಕಾರಿ ಮಾರುತ್ತಾರೆ, ಸ್ವಚ್ಛತೆ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಮಾರುಕಟ್ಟೆ ಒಂದು ಸಲ ಸುತ್ತಾಡಿ ನೋಡಲಿ ಎಂದು ಗ್ರಾಹಕ ಬಾಷುಮಿಯಾ ಅವರು ಹೇಳಿದ್ದಾರೆ. 

ರೊಕ್ಕ ಕೊಟ್ಟು ರೋಗಗಳನ್ನ ಖರೀದಿ ಮಾಡುವ ಸ್ಥಿತಿ ಬಂದಿದೆ. ಕಾಲಿಡಲಿಕ್ಕೂ ಆಗದಷ್ಟು ಈ ಮಾರುಕಟ್ಟೆ ಗಲೀಜಾಗಿದೆ. ಇಂಥ ಹೊಲಸು ಮ್ಯಾಲೆ ಕುಳಿತ ದ್ವಾಮಿ ತರಕಾರಿ ಮ್ಯಾಲೆ ಬಂದು ಕುಳಿತು ರೋಗಗಳು ಬರತಾವ ಎಂದು ಮತ್ತೊಬ್ಬ ಗ್ರಾಹಕ ಖಾಸೀಂ ಅಲಿ ಅವರು ಹೇಳಿದ್ದಾರೆ.