Bagalkot: ಐತಿಹಾಸಿಕ ತಾಣ ಐಹೊಳೆಯಲ್ಲಿ ಸಮಸ್ಯೆಗಳ ಸುರಿಮಳೆ..!
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆಯಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದ, ಪ್ರವಾಸಕ್ಕೆಂದು ಬಂದ ಶಾಲಾ ಮಕ್ಕಳು, ಪ್ರವಾಸಿಗರು ಪರದಾಟ
ನರಸಿಂಹಮೂರ್ತಿ
ಅಮೀನಗಡ(ಡಿ.22): ಐತಿಹಾಸಿಕ ತಾಣ ಐಹೊಳೆಯಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದ, ಪ್ರವಾಸಕ್ಕೆಂದು ಬಂದ ಶಾಲಾ ಮಕ್ಕಳು, ಪ್ರವಾಸಿಗರು ಪರದಾಡುವಂತಾಗಿದೆ. ಸಂಚಾರ ದಟ್ಟಣೆ ಒಂದೆಡೆಯಾದರೆ, ಗ್ರಾಮ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಐತಿಹಾಸಿಕ ತಾಣ ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಐಹೊಳೆಯಲ್ಲಿ ಸಮರ್ಪಕ ಶುದ್ಧ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್ ಸೌಕರ್ಯಗಳು ಇಲ್ಲದೇ ಇರುವುದರಿಂದ ಪ್ರವಾಸಿಗರು ಪರದಾಡವಂತಾಇದೆ. ವೃದ್ಧರು, ಮಹಿಳೆಯರು, ಮಕ್ಕಳು ನೀರು ಸಿಗದೇ, ಬಹಿರ್ದೆಸೆಗೂ ಹೋಗಲಾಗದೇ ಪರಿತಪಿಸುವಂತಾಗಿದೆ. ಇದರಿಂದ ಐಹೊಳೆ ಗ್ರಾಮದ ಸ್ಥಳೀಯ ಆಡಳಿತದ ಬಗ್ಗೆ ಪ್ರವಾಸಿಗರು ಹಿಡಿಶಾಪ ಹಾಕುವಂತಾಗಿದೆ. ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ. ಆದರೆ, ಮೂಲಸೌಲಭ್ಯಗಳ ಕೊರತೆಯಿಂದ ಇದಕ್ಕೆ ಕಳಂಕ ಅಂಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
BAGALKOT: ಎತ್ತಿನಹೊಳೆ ಸಂತ್ರಸ್ಥರಂತೆ ಆಲಮಟ್ಟಿ ಹಿನ್ನೀರು ಸಂತ್ರಸ್ಥರಿಗೂ ಭೂಮಿ ಸಹಿತ ಪರಿಹಾರ ಕೊಡಿ
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಶಾಲಾಮಕ್ಕಳ ಪ್ರವಾಸಗಳ ಸಂಖ್ಯೆ ಅತ್ಯಧಿಕವಾಗಿದೆ. ಇವೆರಡೂ ತಿಂಗಳಿನಲ್ಲಿ ಪ್ರತಿದಿನ ಸರಾಸರಿ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಐಹೊಳೆಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಪ್ರವಾಸಿ ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದ ಕಾರಣ ಎಲ್ಲಿ ಬೇಕೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪ್ರತಿನಿತ್ಯ ಪ್ರವಾಸಿಗರು ಹಾಗೂ ಸ್ಥಳೀಯರು ಸಂಚಾರದಟ್ಟಣೆಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಇಲ್ಲಿನ ದೇವಾಲಯದ ಸಂಕೀರ್ಣ ವ್ಯಾಪ್ತಿಯಲ್ಲಿ ಪ್ರಾಚ್ಯವಸ್ತು ಇಲಾಖೆಯ ನಿರ್ವಹಣೆಗೆ ಒಳಪಟ್ಟಒಂದು ಶುದ್ಧ ಕುಡಿಯುವ ನೀರಿನ ಘಟಕವಿದೆ. ಅದನ್ನು ಹೊರತುಪಡಿಸಿದರೆ ಪ್ರವಾಸಿಗರು ಅನಿವಾರ್ಯವಾಗಿ ಪ್ಯಾಕೇಜ್ಡ್ ನೀರಿಗೆ ಮೊರೆಹೋಗುತ್ತಿದ್ದಾರೆ. ಶೌಚಾಲಯ ಇಲ್ಲದೇ ಇರುವುದರಿಂದ ಪ್ರವಾಸಿಗರು, ಮಕ್ಕಳು ಅಂಗಡಿಗಳು, ಶಿಥಿಲ ದೇಗುಲಗಳ ಸಂದಿಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬೇಕಾದ, ಮುಜುಗರಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಇದೆ.
ವಾಹನ ನಿಲುಗಡೆ ಶುಲ್ಕವಾಗಿ ಐಹೊಳೆ ಗ್ರಾಪಂ ಪ್ರತಿ ವಾಹನಕ್ಕೆ .30 ಅನ್ನು ವಸೂಲಿ ಮಾಡುತ್ತದೆ. ಆದರೆ, ವಾಹನ ನಿಲ್ದಾಣಕ್ಕಾಗಿ ಪ್ರತ್ಯೇಕ ಸ್ಥಳವನ್ನು ಕಲ್ಪಿಸಿಲ್ಲ. ಹೀಗಾಗಿ, ರಸ್ತೆಬದಿಯಲ್ಲಿ, ಒಮ್ಮೊಮ್ಮೆ ರಸ್ತೆಯಲ್ಲೇ ವಾಹನಗಳನ್ನು ಪ್ರವಾಸಿಗರು ನಿಲ್ಲಿಸಿರುತ್ತಾರೆ. 5-6 ವಾಹನಗಳು ರಸ್ತೆಯಲ್ಲಿ ನಿಂತರೆ ಸಂಚಾರ ಸಂಪೂರ್ಣ ಬಂದಾಗಿ, ಸಂಚಾರ ದಟ್ಟಣೆ ಉಂಟಾಗುತ್ತದೆ. ಕಳೆದ ಒಂದು ವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳ ಪ್ರವಾಸದ ಬಸ್‌ಗಳು ಬಂದು ರಸ್ತೆ ಪಕ್ಕದಲ್ಲೇ ನಿಲ್ಲುತ್ತಿರುವ ಕಾರಣ, ನಿತ್ಯವೂ ಟ್ರಾಫಿಕ್ ಜಾಂ ಸಾಮಾನ್ಯವಾಗಿದೆ. ಇದರಿಂದ ಇದೇ ಮಾರ್ಗದಲ್ಲಿ ಸಂಚರಿಸುವ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು, ಸಾರಿಗೆ ವಾಹನಗಳು, ಆಂಬ್ಯುಲೆನ್ಸ್, ಶಾಲಾ ವಾಹನಗಳ ಸುಗಮಸಂಚಾರಕ್ಕೆ ಅಡ್ಡಿಯಾಗಿದೆ.
ಅಲ್ಲದೇ ಬೀದಿಬದಿ ವ್ಯಾಪಾರಸ್ಥರಿಗೆ ಯಾವುದೇ ಸೂಕ್ತ ಸ್ಥಳ ಹಂಚಿಕೆಯಾಗದ ಕಾರಣ ಅವರೂ ಕೂಡ ಅನಿವಾರ್ಯವಾಗಿ ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಮತ್ತಷ್ಟುಹೆಚ್ಚಾಗಿ ಪಾದಚಾರಿಗಳೂ, ನಾಗರಿಕರಿಗೂ ತೀವ್ರ ತೊಂದರೆಯಾಗುತ್ತಿದೆ.
ಈ ಕುರಿತು ಗ್ರಾಮದ ಪಿಡಿಒ ಅವರಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದಾಗ ಅವರ ಮೊಬೈಲ್ ಸತತ ಒಂದು ವಾರದಿಂದ ನಾಟ್ ರಿಚೇಬಲ್ ಎಂದು ಬರುತ್ತಿದೆ. ಖುದ್ದಾಗಿ ಪಂಚಾಯಿತಿಗೆ ಹೋಗಿ ವಿಚಾರಿಸಿದರೆ, ಮೀಟಿಂಗ್‌ಗೆ ತೆರಳಿದ್ದಾರೆ, ಕಚೇರಿ ಕೆಲಸಕ್ಕಾಗಿ ಹೊರಗಡೆ ಹೋಗಿದ್ದಾರೆ ಎಂಬ ಉತ್ತರ ಲಭಿಸುತ್ತಿದೆ.
ಹುನಗುಂದ ತಾಲೂಕು, ಬಾಗಲಕೋಟೆ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಐತಿಹಾಸಿಕ ಐಹೊಳೆಯಲ್ಲಿ ಇನ್ನಾದರೂ ಸೂಕ್ತ ಮೂಲಸೌಕರ್ಯ ಒದಗಿಸಿ, ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಹಾಗೂ ಶಾಸಕರು ಸೂಕ್ತ ಕ್ರಮವಹಿಸುತ್ತಾರೋ, ಇಲ್ಲವೋ ಕಾದುನೋಡಬೇಕಿದೆ.
Bagalkot: ತೇರದಾಳ ಕ್ಷೇತ್ರದ ಟಿಕೆಟ್‌ಗಾಗಿ ಹಾಲಿ ಮತ್ತು ಮಾಜಿಗಳಿಂದ ಬಿಗ್ ಫೈಟ್
ಐಹೊಳೆ ಗ್ರಾ.ಪಂ. ಪ್ರತಿ ವರ್ಷ ಲಕ್ಷಗಟ್ಟಲೆ ಹಣವನ್ನು ಪಾರ್ಕಿಂಗ್ ಫೀ ಎಂದು ಪಡೆಯುತ್ತದೆ. ಪ್ರಸಕ್ತ ಸಾಲಿನಲ್ಲಿ .2.75 ಲಕ್ಷ ಗುತ್ತಿಗೆ ನೀಡಿದೆ. ಗುತ್ತಿಗೆ ಹಣ ಮೂಲಸೌಕರ್ಯ ಒದಗಿಸಲು ಬಳಕೆ ಆಗುತ್ತಿಲ್ಲ. ಪ್ರವಾಸಿಗರಿಗರಂತೂ ಮೂಲಸೌಲಭ್ಯಗಳ ಕೊರತೆಯಿಂದ ಪರದಾಡುತ್ತಾರೆ. ಇಲ್ಲಿನ ಸುಲಭ ಶೌಚಾಲಯ ಬಂದ್ ಆಗಿ ಎಷ್ಟೋ ವರ್ಷಗಳು ಗತಿಸಿವೆ. ಅದರಲ್ಲೂ ಗ್ರಾಮದ ಸ್ಥಳಾಂತರದ ವಿಷಯ ಎಲ್ಲದಕ್ಕೂ ಅಡ್ಡಿಯಾಗಿದೆ ಅಂತ ಇತಿಹಾಸ ಸಂಶೋಧಕ, ಪ್ರವಾಸಿ ಮಾರ್ಗದರ್ಶಿ ಪರಶುರಾಮ ಗೋಡಿ ಹೇಳಿದ್ದಾರೆ.
ಐಹೊಳೆಯಲ್ಲಿನ ಅವ್ಯವಸ್ಥೆ ನೋಡಿ ಬೇಸರವಾಯಿತು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ನಮ್ಮ ಶಾಲೆಯ ಮಕ್ಕಳು ಪರದಾಡಿದರು. ಇನ್ನೊಮ್ಮೆ ನಮ್ಮ ಮಕ್ಕಳನ್ನು ಈ ಕಡೆ ಕರೆದುಕೊಂಡು ಬರುವುದಿಲ್ಲ. ಇತರರಿಗೂ ಇಲ್ಲಿನ ಅವ್ಯವಸ್ಥೆ ಬಗ್ಗೆ ತಿಳಿಸುತ್ತೇವೆ ಅಂತ ಸರ್ಕಾರಿ ಶಾಲಾ ಶಿಕ್ಷಕರಾದ ಎಸ್.ಗುರುಶಾಂತಪ್ಪ (ನೆಲಮಂಗಲ), ಶಿವರಾಮೇಗೌಡ (ಮಂಡ್ಯ), ಎನ್.ಪದ್ಮನಾಭ (ಸಾಗರ) ತಿಳಿಸಿದ್ದಾರೆ.