ಬೆಂಗಳೂರು[ಮಾ.23]: ಕೊರೋನಾ ವೈರಸ್‌ ಭೀತಿ ಹೆಚ್ಚಳ ಹಾಗೂ ಪ್ರಯಾಣಿಕರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ರಾಜ್ಯದಲ್ಲಿ ಬಸ್‌ ಕಾರ್ಯಾಚರಣೆ ಮಾಡುವ ಬಗ್ಗೆ ಖಾಸಗಿ ಬಸ್‌ ಆಪರೇಟರ್‌ಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಕಳೆದ ಎರಡು ವಾರಗಳಿಂದ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿದೆ. ರಾಜಧಾನಿಯಿಂದ ವಿವಿಧ ಊರುಗಳಿಗೆ ತೆರಳುವವರು ಹಾಗೂ ರಾಜಧಾನಿಗೆ ಬರುವ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ಆಪರೇಟರ್‌ಗಳು ನಷ್ಟ ಅನುಭವಿಸುತ್ತಿದ್ದಾರೆ. ಪ್ರಯಾಣಿಕರಿಲ್ಲದೆ ಬಸ್‌ ಕಾರ್ಯಾಚರಣೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ನಗರದ ಖಾಸಗಿ ಬಸ್‌ ಆಪರೇಟರ್‌ ರಮೇಶ್‌ ಹೇಳಿದರು.

ಸಂಪೂರ್ಣ ರಾಜ್ಯ ಲಾಕ್‌ಡೌನ್‌ಗೆ ಹಿಂದೇಟು ಏಕೆ?

ಕೊರೋನಾ ವೈರಸ್‌ ಭೀತಿಯೀಂದ ಪ್ರಯಾಣಿಕರ ಸಂಖ್ಯೆ ಕುಸಿದಿರುವುದು ನಿಜ. ಹಾಗೆಂದು ಬಸ್‌ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಸೋಮವಾರದಿಂದ ಬಸ್‌ ಕಾರ್ಯಾಚರಣೆ ಮಾಡಲಿದ್ದೇವೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ನಗರದ ಮತ್ತೊಬ್ಬ ಖಾಸಗಿ ಬಸ್‌ ಆಪರೇಟರ್‌ ತನ್ವೀರ್‌ ತಿಳಿಸಿದರು.

ಚಾಲಕರ ವಿವೇಚನೆಗೆ

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಆಟೊ, ಆ್ಯಪ್‌ ಆಧಾರಿತ ಟ್ಯಾಕ್ಸಿ, ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸೋಮವಾರದಿಂದ ಸೇವೆ ನೀಡುವುದು ಅಥವಾ ಬಿಡುವುದು ಚಾಲಕರ ವಿವೇಚನೆಗೆ ಬಿಟ್ಟಿದ್ದೇವೆ. ಈಗಾಗಲೇ ಪ್ರಯಾಣಿಕರಿಲ್ಲದೆ ಚಾಲಕರ ದುಡಿಮೆ ಕುಸಿದಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಚಾಲಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಬಹುದು. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಚಾಲಕ ಸಮುದಾಯಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಒಲಾ, ಉಬರ್‌ ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ ಒತ್ತಾಯಿಸಿದರು.

ಧಾರವಾಡ: ಐಸೋಲೇಶನ್‌ ವಾರ್ಡ್‌ನಲ್ಲಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರು

ಪ್ಯಾಕೇಜ್‌ ಘೋಷಿಸಿ

ಪ್ರವಾಸೋದ್ಯಮ ಹಾಗೂ ಬಾಡಿಗೆ ವಾಹನಗಳು ಈಗಾಗಲೇ ಬಹುತೇಕ ಸೇವೆ ಸ್ಥಗಿತಗೊಳಿಸಿವೆ. ಕೊರೋನಾ ವೈರಸ್‌ ಭೀತಿಯಿಂದ ಸಾರಿಗೆ ಉದ್ಯಮ ತೀವ್ರ ಕುಸಿತ ಕಂಡಿದೆ. ಇದರಿಂದ ಚಾಲಕ ಹಾಗೂ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಬರುವವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ಸಾರಿಗೆ ವಾಹನ ಚಾಲಕರು ಹಾಗೂ ಮಾಲೀಕರ ನೆರವಿಗೆ ಧಾವಿಸಬೇಕು. ದೆಹಲಿ, ಕೇರಳ, ಅರುಣಾಚಲ ಪ್ರದೇಶ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಆಗ್ರಹಿಸಿದರು.