Asianet Suvarna News Asianet Suvarna News

ವಿಜಯಪುರ: ವಿಚಾರಣಾಧೀನ ಕೈದಿ ಅನುಮಾನಾಸ್ಪದ ಸಾವು

ವಿಚಾರಣಾಧೀನ ಕೈದಿಯೊಬ್ಬ ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ಸಾವು| ಆಲಮಟ್ಟಿ ಪೊಲೀಸ್‌ ಠಾಣೆಯಲ್ಲಿ ಬಸಪ್ಪನಿಗೆ ಪೊಲೀಸರಿಂದ ಚಿತ್ರಹಿಂಸೆ ಆರೋಪ| ಬಹು ಅಂಗಾಂಗ ವೈಫಲ್ಯ ಕಾರಣ| 

Prisoner of Inquiry Suspicious dies at Hospital in Vijayapuragrg
Author
Bengaluru, First Published Oct 7, 2020, 3:05 PM IST

ವಿಜಯಪುರ(ಅ.07): ವಿಚಾರಣಾಧೀನ ಕೈದಿಯೊಬ್ಬ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಅಸುನೀಗಿದ್ದಾನೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಬಸಪ್ಪ ಸಂಜೀವಪ್ಪ ತಳವಾರ (32) ಮೃತಪಟ್ಟ ವಿಚಾರಣಾಧೀನ ಕೈದಿ. ಈತ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ವಾಸಿಸುತ್ತಿದ್ದ.

ಕಳ್ಳತನ ಆರೋಪದ ಮೇರೆಗೆ ಆಲಮಟ್ಟಿ ಪೊಲೀಸರು ಬಸಪ್ಪನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದರು. ಸೆ.28ರಂದು ಪೊಲೀಸರು ಬಸಪ್ಪನನ್ನು ವಿಜಯಪುರದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಆತ ಎರಡು ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡು ಅನಾರೋಗ್ಯಕೀಡಾಗಿದ್ದ. ಹೀಗಾಗಿ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಸೋಮವಾರ ರಾತ್ರಿ 8.30ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ವಿಜಯಪುರದ ಬಳಿ ಭೀಕರ ಅಪಘಾತ: ಅಂಜನಾದ್ರಿ ಬೆಟ್ಟಕ್ಕೆ ಹೊರಟ್ಟಿದ್ದ ಮೂವರು ಭಕ್ತರ ದುರ್ಮರಣ

ಪೊಲೀಸರ ವಿರುದ್ಧ ಆರೋಪ:

ಆಲಮಟ್ಟಿ ಪೊಲೀಸ್‌ ಠಾಣೆಯಲ್ಲಿ ಬಸಪ್ಪನಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ಆ ಕಾರಣಕ್ಕಾಗಿ ಆತ ಅನಾರೋಗ್ಯಕ್ಕೀಡಾಗಿದ್ದಾನೆ. ಚಿಕಿತ್ಸೆ ಫಲಿಸದೇ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆತನ ಸಾವಿಗೆ ಪೊಲೀಸರೇ ಕಾರಣ ಎಂದು ಬಸಪ್ಪನ ಸಹೋದರ ಹನಮಂತ ತಳವಾರ ಆರೋಪಿಸಿದ್ದಾರೆ.

ನಮ್ಮ ಅಣ್ಣ ಈ ರೀತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಸಂಶಯ ಮೂಡಿಸಿದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ಹೋರಾಟ ಕೂಡ ನಡೆಸುತ್ತೇವೆ ಎಂದಿದ್ದಾರೆ. ನಮ್ಮ ಅಣ್ಣನ ಸಾವು ಸಂಶಯಾಸ್ಪದವಾಗಿದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಬಹು ಅಂಗಾಂಗ ವೈಫಲ್ಯ ಕಾರಣ:

ಅನಾರೋಗ್ಯದಿಂದಾಗಿ ವಿಚಾರಣಾಧೀನ ಕೈದಿ ಬಸಪ್ಪ ತಳವಾರ ಎಂಬುವನನ್ನು ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆತ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಐ.ಜೆ. ಮ್ಯಾಗೇರಿ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
 

Follow Us:
Download App:
  • android
  • ios