ಬೆಳಗಾವಿ(ಆ.02):ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ತೀವ್ರ ಅನಾರೋಗ್ಯದಿಂದ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಮಾರುತಿ ಅಣ್ಣಪ್ಪ ರಾಗಿಪಾಟೀಲ (77) ಮೃತ ವ್ಯಕ್ತಿ. ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2014 ರಲ್ಲಿ ಜಿವಾವಧಿ ಶಿಕ್ಷೆಗೆ ಗುರಿಯಾಗಿದ್ದನು.

ಜೈಲು ಸೇರುವ ಮೊದಲಿನಿಂದ ಮೇಲಿಂದ ಮೇಲೆ ಅನಾರೋಗ್ಯಕ್ಕೆ ಒಳಗಾಗಿದ್ದ. ನಂತರ ಜೈಲಿನಲ್ಲಿಯೂ ವಿಚಿತ್ರವಾಗಿ ವರ್ತಿಸುತ್ತಿದ್ದ. ಅನಾರೋಗ್ಯಕ್ಕೀಡಾದ ಸಮಯದಲ್ಲಿ ಜೈಲು ಅಧಿಕಾರಿಗಳೇ ಚಿಕಿತ್ಸೆ ಕೊಡಿಸುತ್ತಾ ಬಂದಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಮೂರು ತಿಂಗಳವರೆಗೆ ಪೆರೋಲ್‌ ಮೇಲೆ ತಮ್ಮ ಗ್ರಾಮಕ್ಕೆ ತೆರಳಿದ್ದನು. ಮರಳಿ ಜೈಲಿಗೆ ಜೈಲು ಅಧಿಕಾರಿಗಳೇ ಆ್ಯಂಬುಲೆನ್ಸ್‌ ಮೂಲಕ ಕರೆ ತಂದಿದ್ದರು.

ಜೈಲಲ್ಲಿ ಸೆಲ್ಫಿ ಕ್ಲಿಕ್ಕಿಸಿ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ ಕೈದಿ!

ಸದ್ಯ ಕೊರೋನಾ ಹಾವಳಿ ಹೆಚ್ಚಾಗಿದ್ದರಿಂದ ಅಧಿಕಾರಿಗಳು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದರು. ಕೊರೋನಾ ನೆಗೆಟಿವ್‌ ವರದಿ ಬಂದಿತ್ತು. ಅಲ್ಲದೇ ಈತನಿಗೆ ವಯೋ ಸಹಜ ಕಾಯಿಲೆಗಳಿಂದ ತೀವ್ರ ಅಸ್ವಸ್ತನಾಗಿದ್ದ. ಶನಿವಾರ ಆರೋಗ್ಯದಲ್ಲಿ ಏರುಪೇರು ಕಾಣುತ್ತಿದ್ದಂತೆ ಜೈಲು ಅಧಿಕಾರಿಗಳು ತಕ್ಷಣ ನಗರದ ಜಿಲ್ಲಾಸ್ಪತ್ರೆಗೆ ಕರೆತರುವ ವೇಳೆ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ನಗರದ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.