ಕೊಪ್ಪಳ (ಸೆ.01):  ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಆರಂಭವಾಗಲಿರುವ ದೇಶದ ಮೊದಲ ಆಟಿಕೆ ತಯಾರಿಕಾ ಕ್ಲಸ್ಟರ್‌ಗೆ ಅಕ್ಟೋಬರ್‌ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಇಡುವ ಸಾಧ್ಯತೆ ಇದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಕೊರೋನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ ಸಂಗಣ್ಣ ಕರಡಿ ಕನ್ನಡಪ್ರಭದ ಜೊತೆ ಮಾತನಾಡಿ, ದೇಶದ ಮೊದಲ, ಬಹುದೊಡ್ಡ ಆಟಿಕೆ ಘಟಕ ಹಾಗೂ ಆತ್ಮನಿರ್ಭರ ಭಾರತ ಯೋಜನೆಯಡಿ ಅನುಮೋದಿತ ಮೊದಲ ಘಟಕ ಇದಾಗಿರುವುದರಿಂದ ಪ್ರಧಾನಿ ಅವರನ್ನೇ ಆಹ್ವಾನಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕೋರಲಾಗುವುದು ಎಂದರು.

ಮನ್‌ ಕೀ ಬಾತ್‌ನಲ್ಲಿ ಮೋದಿ ಮುಧೋಳ ಪ್ರಸ್ತಾಪ: ಏನೀ ಶ್ವಾನ ಸ್ಪೆಷಾಲಿಟಿ?

ಈಗಾಗಲೇ ಸಿಎಂ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದಿದ್ದಾರೆ. ಯೋಜನೆಯ ಪ್ರಗತಿ ಬಗ್ಗೆ ವಿವರ ಸಂಗ್ರಹಿಸಿದ್ದಾರೆ ಎನ್ನುವುದನ್ನೂ ಅವರು ಹೇಳಿದರು.

ಅಕ್ಟೋಬರ್‌ ತಿಂಗಳಲ್ಲಿ ಕ್ಲಸ್ಟರ್‌ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದ್ದು, 2021ರ ಜೂನ್‌ನಲ್ಲಿ ಮೊದಲ ಹಂತದ ಉತ್ಪಾದನೆ ಪ್ರಾರಂಭವಾಗಲಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಯೋಜನೆ ಜಾರಿಗೊಳಿಸಿದ್ದಕ್ಕೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಕೊಪ್ಪಳದ ಹಿರಿಮೆ

ಇದು ಕೊಪ್ಪಳದ ಹಿರಿಮೆ ಎಂದೇ ಹೇಳಬೇಕು. ದೇಶದ ಮೊದಲ ಆಟಿಕೆ ಕ್ಲಸ್ಟರ್‌ ಕೊಪ್ಪಳಕ್ಕೆ ಬರುತ್ತಿರುವುದು, ಇದನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಸ್ತಾಪ ಮಾಡಿರುವುದು ನಿಜಕ್ಕೂ ಕೊಪ್ಪಳ ಜಿಲ್ಲೆಯವರಾದ ನಮಗೆ ಬಹುದೊಡ್ಡ ಹೆಮ್ಮೆ.

ಸಂಗಣ್ಣ ಕರಡಿ ಸಂಸ​ದ