ಭಾರತದ ವಿದೇಶಾಂಗ ನೀತಿಯು ಹಿಂದೆ ರಕ್ಷಣಾತ್ಮಕವಾಗಿತ್ತು. ಈಗ ತೀಕ್ಷ್ಮ​ವಾ​ಗಿದೆ: ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ 

ರಾಮ​ನ​ಗರ(ಆ.14): 40 ವರ್ಷಗಳ ಹಿಂದೆ ನಾನು ವಿದೇಶಾಂಗ ಸೇವೆಗೆ ಸೇರಿಕೊಂಡಾಗ ಜಾಗತಿಕ ಮಟ್ಟದಲ್ಲಿ ಭಾರತದ ದನಿಯೇ ಇರಲಿಲ್ಲ. ಆದರೀಗ ಪ್ರಧಾನಿ ಮೋದಿಯವರ ದಕ್ಷ ನಾಯಕತ್ವದಿಂದ ನಮ್ಮ ದನಿಗೆ ಅಭೂತಪೂರ್ವ ಬೆಲೆ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿ​ದರು. ಹಾರೋ​ಹಳ್ಳಿ ಸಮೀ​ಪದ ಜೈನ್‌ ವಿವಿ ಆವರಣದಲ್ಲಿ ಶನಿವಾರ ನಡೆದ ಹರ್‌ ಘರ್‌ ತಿರಂಗಾ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತ​ನಾ​ಡಿದ ಅವರು, ಎಂಟು ವರ್ಷಗಳಿಂದ ಈಚೆಗೆ ನಮ್ಮ ಯೋಗ, ಆಹಾರ, ಅಧ್ಯಾತ್ಮ, ಸಂಸ್ಕೃತಿ ಹಾಗೂ ಪರಂಪರೆಗಳಿಗೆ ವಿಶ್ವ ಮಟ್ಟದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಿದೆ ಎಂದರು.

ವಿದೇಶಾಂಗ ನೀತಿಯು ದೇಶದ ಜನರ ದಿನನಿತ್ಯದ ಬದುಕಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಇದರಲ್ಲಿ ಭಾರತೀಯರ ಹಿತಾಸಕ್ತಿ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ನಾವು ತಾಳುವ ನಿಲುವು ನಿರ್ಣಾಯಕ ಪಾತ್ರ ವಹಿಸುತ್ತವೆ.

ಕಾರ್ಯಕರ್ತನ ಮನೆಯಲ್ಲಿ ನೆಲದ ಮೇಲೆ ಊಟ ಮಾಡಿದ ಕೇಂದ್ರ ಸಚಿವ ಜೈಶಂಕರ್‌

ಮೋದಿ ಅವರ ನಾಯಕತ್ವವು ಜಗತ್ತಿಗೇ ಗೊತ್ತಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಜಗತ್ತಿನ ನಾನಾ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 70 ಲಕ್ಷ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್‌ ಕರೆತರಲಾಗಿದೆ. ವಿದೇಶಗಳಲ್ಲಿ ಓದುತ್ತಿರುವ 12 ಲಕ್ಷ ಭಾರತೀಯ ವಿದ್ಯಾರ್ಥಿಗಳ ಹಿತರಕ್ಷಣೆ ಮಾಡಲು ಸಾಧ್ಯವಾಗಿದೆ ಎಂ​ದರು.

ಪರಸ್ಪರ ಬೆಸೆದುಕೊಂಡಿರುವ ಜಗತ್ತಿನಲ್ಲಿ ವಿದೇಶಾಂಗ ಸಚಿವರು ದೇಶದ ಹೂಡಿಕೆ, ತಂತ್ರಜ್ಞಾನ, ಮಧುರ ಬಾಂಧವ್ಯ, ಸಹಭಾಗಿತ್ವ, ಸಹಕಾರ ಇತ್ಯಾದಿ ಗಮನಕ್ಕೆ ತೆಗೆದುಕೊಂಡು ಹೆಜ್ಜೆ ಇಡಬೇಕಾದ್ದು ಮುಖ್ಯ. ಉಕ್ರೇನ್‌-ರಷ್ಯಾ ಯುದ್ಧದ ಸಮಯದಲ್ಲಿಯೂ ನಾವು ಕಡಿಮೆ ಬೆಲೆಗೆ ತೈಲೋತ್ಪನ್ನ ಪಡೆದುಕೊಂಡಿರುವುದು ಇದಕ್ಕೆ ಸೂಕ್ತ ನಿದರ್ಶನ ಎಂದರು.

ಭಾರತದ ವಿದೇಶಾಂಗ ನೀತಿಯು ಹಿಂದೆ ರಕ್ಷಣಾತ್ಮಕವಾಗಿತ್ತು. ಈಗ ತೀಕ್ಷ್ಮ​ವಾ​ಗಿದೆ. ಕೊರೋನಾ ಕಾಲದಲ್ಲಿ ದೇಶದ ಶಕ್ತಿ ಸಾಮರ್ಥ್ಯ ಕಂಡು ದೊಡ್ಡ ದೊಡ್ಡ ದೇಶಗಳು ಕೂಡ ಬೆರಗಾಗಿವೆ ಎಂದು ಪ್ರಧಾನಿ ಮೋದಿ​ರ​ವರ ನಾಯ​ಕ​ತ್ವ​ವನ್ನು ಜೈಶಂಕರ್‌ ಗುಣ​ಗಾನ ಮಾಡಿ​ದ​ರು.

ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಮಾತ​ನಾ​ಡಿ, ಪ್ರಧಾನಿ ಮೋದಿ ಅವರ ನಾಯಕತ್ವದಡಿ ರಾಜ್ಯದಲ್ಲಿ ಎನ್‌ಇಪಿ ಜಾರಿಯಾಗುತ್ತಿದೆ. ಗುಣಮಟ್ಟದ ಶಿಕ್ಷಣ ನಮ್ಮಲ್ಲಿ ಇದ್ದು, ಉಚಿತವಾಗಿ ಅತ್ಯುತ್ತಮ ಕೋರ್ಸ್‌ ಕಡ್ಡಾಯವಾಗಿ ಕಲಿಸಲಾಗುತ್ತಿದೆ ಎಂದರು.

ಜೈಶಂಕರ್‌ ಅವರಂತಹ ಪ್ರತಿಭಾವಂತರು ವಿದೇಶಾಂಗ ಸಚಿವರಾಗಿರುವುದು ದೇಶದ ಸುದೈವ. ಇಂತಹ ಸಮರ್ಥರಿಂದ ಭಾರತದ ದಿಕ್ಕುದೆಸೆಯೇ ಬದಲಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌, ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿ​ಕಾ​ರಿ ಸಂತೋಷ್‌ ಬಾಬು, ​ವಿ​ಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಜೈನ್‌ ವಿವಿ ಸ್ಥಾಪಕ ಚೆನ್‌ ರಾಜ ಜೈನ್‌ ಇದ್ದರು.

ಸಚಿವ ಜೈಶಂಕರ್‌ ಮೇಲೆ ಹೂ ಮಳೆ ಸುರಿಸಿ ಜೈಕಾರ

ಚೆನ್ನಮ್ಮಮಾದಯ್ಯ ಕನ್ವೆಷನ್‌ ಹಾಲ್‌ನಿಂದ ಹಾರೋ​ಹಳ್ಳಿ ಸರ್ಕಲ್‌ವರೆಗೆ 1ಕಿ.ಮೀ ದೂರ ವಿದೇ​ಶಾಂಗ ವ್ಯವ​ಹಾ​ರ​ಗಳ ಸಚಿವ ಜೈಶಂಕರ್‌ ಪಾದ​ಯಾತ್ರೆ ನಡೆ​ಸಿ​ದರು. ಪಾದಯಾತ್ರೆ ಉದ್ದಕ್ಕೂ ಭಾರತ್‌ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ಹರ್ಷದಿಂದ ಸಾಗಿದ ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಸಚಿವ ಜೈಶಂಕರ್‌ ಮೇಲೆ ಜೆಸಿಬಿಗಳಿಂದ ಹೂ ಮಳೆ ಸುರಿಸಿ ಜೈಕಾರ ಕೂಗಿದರು. ಪಾದಯಾತ್ರೆ ಮಧ್ಯದಲ್ಲಿ ಸನ್ಮಾನ ಮಾಡಿದರು.

ಹಾರೋ​ಹಳ್ಳಿ ಸರ್ಕಲ್‌ ಬಳಿ ನಿರ್ಮಿ​ಸಿದ್ದ ವೇದಿ​ಕೆ​ಯ ಬಳಿಕ ಜೈಶಂಕರ್‌ ದೇಶಕ್ಕೆ ಸಮರ್ಥ ನಾಯಕತ್ವ ಹಾಗೂ ಪ್ರಬಲ ರಾಜಕೀಯ ಇಚ್ಚಾಸಕ್ತಿ ಬೇಕಿದೆ. ಆ ಎರಡು ಅಂಶಗಳನ್ನು ಹೊಂದಿ​ರುವ ಪ್ರಧಾನಿ ಮೋದಿ ಅವರನ್ನು ಬೆಂಬ​ಲಿ​ಸು​ವಂತೆ ಮನವಿ ಮಾಡಿ​ದ​ರು.

2024ರ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಮಾಸ್ಟರ್‌ ಪ್ಲಾನ್‌: ಏನದು ಹೊಸ ಕಾರ್ಯತಂತ್ರ?

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಜತೆಗೆ ಪ್ರಬಲವಾಗಿ ಕಟ್ಟುತ್ತಾರೊ ಅವರನ್ನು ಬೆಂಬಲಿಸಬೇಕು. ಮೋದಿ ಅವರಲ್ಲಿನ ಸಮರ್ಥ ನಾಯಕತ್ವ ಹಾಗೂ ರಾಜಕೀಯ ಇಚ್ಛಾಶಕ್ತಿಗೆ ನಾವು ಅವರನ್ನು ಬೆಂಬಲಿಸಬೇಕಿದೆ ಎಂದ​ರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಪ್ರಗತಿ ಜತೆಗೆ ಆತನಿಗೆ ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದೆ ಎಂದ​ರು.

ಮುದ್ರಾ, ಅಯುಷ್ಮಾನ್‌ ನಂತಹ ಕಾರ್ಯಕ್ರಮ ಮೂಲಕ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಮೋದಿ ನೀಡಿದ್ದ ಭರವಸೆ ಈಡೇರಿಸುತ್ತಿದ್ದಾರೆ. ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರವನ್ನು ಬೆಂಬಲಿಸಬೇಕು ಎಂದು ಜೈಶಂಕರ್‌ ಮನವಿ ಮಾಡಿ​ದರು. ಪಾದಯಾತ್ರೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ವಿಧಾನ ಪರಿ​ಷತ್‌ ಸದಸ್ಯ ಅ.ದೇ​ವೇ​ಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯ​ದರ್ಶಿ ಅಶ್ವತ್ಥ್‌ ನಾರಾ​ಯ​ಣ​ಗೌಡ, ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ರೇಷ್ಮೆ ಕೈಗಾ​ರಿಕಾ ನಿಗಮ ಅಧ್ಯಕ್ಷ ಗೌತಮ್‌ ಗೌಡ, ರಾಮ​ನ​ಗರ ನಗ​ರಾ​ಭಿ​ವೃದ್ಧಿ ಪ್ರಾಧಿ​ಕಾರ ಮಾಜಿ ಅಧ್ಯಕ್ಷ ಮುರ​ಳೀ​ಧರ್‌ ಮತ್ತಿ​ತ​ರರು ಪಾದ​ಯಾ​ತ್ರೆ​ಯಲ್ಲಿ ಪಾಲ್ಗೊಂಡಿ​ದ್ದರು.