ಶಿವಾನಂದ ಗೊಂಬಿ 

ಹುಬ್ಬಳ್ಳಿ[ಜ.03]: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳನ್ನು ಕೇಂದ್ರೀಕೃತವಾಗಿಟ್ಟುಕೊಂಡು ನಡೆಸಲಾಗುತ್ತಿರುವ ‘ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ- 2020’ ಸಮಾವೇಶಕ್ಕೆ ಭರ್ಜರಿ ತಯಾರಿ ನಡೆದಿದೆ. ಈಗಾಗಲೇ ಮುಂಬೈನಲ್ಲಿ ರೋಡ್ ಶೋ ನಡೆಸಿರುವ ರಾಜ್ಯ ಸರ್ಕಾರ, ಶೀಘ್ರದಲ್ಲೇ ಹೈದ್ರಾಬಾದ್‌ನಲ್ಲೊಂದು ರೋಡ್ ಶೋ ನಡೆಸಲು ಸಿದ್ಧತೆ ನಡೆಸಿದೆ. 

ಸುಮಾರು 40ಕ್ಕೂ ಹೆಚ್ಚು ಬಂಡವಾಳ ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹುಬ್ಬಳ್ಳಿ- ಧಾರವಾಡ ಹೆಸರಿಗಷ್ಟೇ ರಾಜ್ಯದ ಎರಡನೆಯ ದೊಡ್ಡ ನಗರವೆಂದು ಗುರುತಿಸಿಕೊಂಡಿದೆ. ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಯಾವ ಜಿಲ್ಲೆಗಳಲ್ಲೂ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಕೈಗಾರಿಕೆಗಳಿಲ್ಲ. ಇಲ್ಲಿ ಇರುವುದು ಬರೀ ಸಣ್ಣ ಕೈಗಾರಿಕೆಗಳು ಮಾತ್ರ. ಅವುಗಳಲ್ಲೂ ಸಾಕಷ್ಟು ಬಾಗಿಲು ಮುಚ್ಚಿಕೊಂಡು ಹೋಗಿವೆ. ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದರೂ ಕೈಗಾರಿಕೋದ್ಯಮಿಗಳು ಮಾತ್ರ ಇತ್ತ ಬರುತ್ತಿಲ್ಲ. ಇದ್ದ ನಾಲ್ಕೈದು ದೊಡ್ಡ ಕೈಗಾರಿಕೆಗಳು ಇಲ್ಲಿಂದ ಎತ್ತಂಗಡಿಯಾಗಿವೆ. ಎಷ್ಟೇ ಕಲಿತವರಿದ್ದರೂ ಅನಿವಾರ್ಯವಾಗಿ ಬೆಂಗಳೂರು, ಪುಣೆ, ಮುಂಬೈಗಳಿಗೆ ವಲಸೆ ಹೋಗುವುದು ಅನಿವಾರ್ಯ. ಈ ಹಿನ್ನೆಲೆ ಇಲ್ಲೇ ಕೈಗಾರಿಕೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಬಹುವರ್ಷಗಳದ್ದು. 

ಫೆ. 14ಕ್ಕೆ ಸಮಾವೇಶ: 

ಇಲ್ಲಿನ ಯುವಸಮೂಹದ ಬೇಡಿಕೆಗೆ ಸ್ಪಂದಿಸಿ ‘ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ’ ಎಂಬ ನಾಮಾಂಕಿತದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಿರುವ ಸರ್ಕಾರ, ಈ ನಿಟ್ಟಿನಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಿಯೂ ಆಗಿದೆ. ಫೆ. 14ರಂದು ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. 

ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರಕನ್ನಡ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ. ಇಲ್ಲಿನ ಭೌಗೋಳಿಕತೆ ತಕ್ಕಂತೆ ಕೈಗಾರಿಕೆಗಳನ್ನು ಇಲ್ಲಿಗೆ ಆಕರ್ಷಿಸುವಂತೆ ಮಾಡುವುದೇ ಸಮಾವೇಶದ ಉದ್ದೇಶ. ಈ ನಿಟ್ಟಿನಲ್ಲಿ ಈಗಾಗಲೇ ಮುಂಬೈನಲ್ಲಿ ರೋಡ್ ಶೋ ಕೂಡ ನಡೆಸಲಾಗಿದೆ. ಅಲ್ಲಿನ 15ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳಿಗೆ ಈ ಭಾಗದ ಸೌಲಭ್ಯಗಳ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಶೀಘ್ರದಲ್ಲೇ ಹೈದ್ರಾಬಾದ್‌ನಲ್ಲೊಂದು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಬೇರೆಡೆಯೂ ರೋಡ್ ಶೋ ನಡೆಸಿ ಸಮಾವೇಶಕ್ಕೆ ಆಹ್ವಾನಿಸಲಾಗುವುದು ಎಂದು ಮೂಲಗಳು ತಿಳಿಸುತ್ತವೆ. 

ಎಲ್ಲಿ ಸಮಾವೇಶ?: 

ಮುಂಬೈ, ಹೈದ್ರಾಬಾದ್ ಸೇರಿದಂತೆ ವಿವಿಧೆಡೆಗಳಿಂದ ಸುಮಾರು 40ಕ್ಕೂ ಅಧಿಕ ಕಂಪನಿಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ 10ಕ್ಕೂ ಹೆಚ್ಚು ದೊಡ್ಡ ದೊಡ್ಡ ಕಂಪನಿಗಳು ಭಾಗವಹಿಸುವ ಸಾಧ್ಯತೆ ಇದೆ. ಇಲ್ಲಿನ ಡೆನಿಸನ್ಸ್ ಹೋಟೆಲ್‌ನ ‘ಯಶೋಧರ ಲಾಂಜ್’ನಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದ ಯಶಸ್ವಿಗಾಗಿ ಉನ್ನತ ಅಧಿಕಾರಿಗಳ, ಕೆಲ ಸಂಘಟನೆಗಳ ತಂಡವನ್ನೂ ರಚಿಸಲಾಗಿದೆ ಎಂದು ಮೂಲಗಳು ತಿಳಿಸುತ್ತವೆ. ಒಟ್ಟಿನಲ್ಲಿ ಫೆ. 14ರಂದು ನಡೆಯಲಿರುವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸದ್ಯ ಭರ್ಜರಿ ತಯಾರಿ ನಡೆದಿರುವುದಂತೂ ಸತ್ಯ. ಆದರೆ ಸಮಾವೇಶ ಎಷ್ಟು ಜನ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿ ಎಷ್ಟು ಉದ್ಯಮಗಳು ಬರಲು ಒಪ್ಪಿಗೆ ಸೂಚಿಸುತ್ತವೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ! 

ಸೌಲಭ್ಯಗಳ ಬಗ್ಗೆ ಮನವರಿಕೆ: 

ಮೊದಲು ಇಲ್ಲಿ ಸೌಲಭ್ಯಗಳು ಅಷ್ಟಕ್ಕಷ್ಟೇ ಇದ್ದವು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಪ್ರತಿನಿತ್ಯ ಎರಡು ಕಡೆಗಳಿಂದ ಹತ್ತಾರು ವಿಮಾನಗಳ ಹಾರಾಟ ನಡೆಯುತ್ತದೆ. ನೈರುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲೇ ಇದೆ. ದೇಶದ ವಿವಿಧ ಭಾಗಗಳಿಗೆ ನೇರ ರೈಲುಗಳ ಸಂಪರ್ಕವಿದೆ. ಹೆದ್ದಾರಿ ವಿಷಯದಲ್ಲೂ ಸಾಕಷ್ಟು ಅಭಿವೃದ್ಧಿಯಾಗಿದೆ ಈ ಭಾಗ ಮುಂಬೈ- ಬೆಂಗಳೂರು, ಹುಬ್ಬಳ್ಳಿ- ವಿಜಯಪುರ- ಸೊಲ್ಲಾಪುರ, ಅಂಕೋಲಾ- ಗುತ್ತಿ ಹೀಗೆ ಮೂರ್ನಾಲ್ಕು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ರಸ್ತೆ ಸಾರಿಗೆಯಲ್ಲೂ ಸಾಕಷ್ಟು ಸೌಲಭ್ಯ ಇದೀಗ ಸಾಧ್ಯವಾಗಿದೆ. ನೀರು, ವಿದ್ಯುತ್ ಸೇರಿದಂತೆ ಯಾವೊಂದು ಸಮಸ್ಯೆಯೂ ಈಗಿಲ್ಲ. ಇದನ್ನೇ ಮೊನ್ನೆ ಮುಂಬೈ ರೋಡ್ ಶೋನಲ್ಲಿ ಅಲ್ಲಿನ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಗಳು ತಿಳಿಸುತ್ತವೆ.

ಎಷ್ಟಿದೆ ಜಾಗ? 

ಇನ್ನೂ ಮುಮ್ಮಿಗಟ್ಟಿಯಲ್ಲಿ 500 ಎಕರೆಗೂ ಹೆಚ್ಚು ಜಾಗ ಇದೆ. ಬೇಲೂರು- ಕೋಟೂರು ಬಳಿ 500 ಎಕರೆ, ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿನ ಜಾಗ ಸೇರಿದಂತೆ 1000 ಎಕರೆಗೂ ಹೆಚ್ಚಿನ ಪ್ರದೇಶ ಕೈಗಾರಿಕೆಗಳಿಗೆ ಮೀಸಲಾಗಿದೆ. ಇದೇ ರೀತಿ ಬೆಳಗಾವಿ, ಹಾವೇರಿಯಲ್ಲೂ ಸಾಕಷ್ಟು ಜಾಗ ಲಭ್ಯವಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಫೆ. 14 ರಂದು ಡೆನಿಸನ್ಸ್ ಹೋಟೆಲ್‌ನ ಪ್ರಾಂಗಣದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈ ಸಮಾವೇಶವೂ ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಹಾವೇರಿ, ಗದಗ ಸೇರಿದಂತೆ ಮತ್ತಿತರ ಕೆಲ ಜಿಲ್ಲೆಗಳ ಕೇಂದ್ರೀಕೃತ ಸಮಾವೇಶ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೈದ್ರಾಬಾದ್‌ನಲ್ಲಿ ಶೀಘ್ರವೇ ಮತ್ತೊಂದು ರೋಡ್ ಶೋ ನಡೆಯಲಿದೆ ಜಿಲ್ಲಾ ಕೈಗಾರಿಕಾ ಕೇಂದ್ರದ  ಮೋಹನ ಜಂಟಿ ನಿರ್ದೇಶಕ ಮೋಹನ  ಭರಮಕ್ಕನವರ ತಿಳಿಸಿದ್ದಾರೆ. 

ಕೇಂದ್ರ ಈ ಭಾಗದಲ್ಲಿ ಫುಡ್ ಪ್ರಾಸೆಸ್ಸಿಂಗ್ ಕಂಪನಿಗಳು, ಎಂಜಿನಿಯರಿಂಗ್ ಬೇಸ್ಡ್ ಕಂಪನಿಗಳು ಬಂದರೆ ಬಹಳ ಅನುಕೂಲ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು. ಇನ್ನು ಇದೇ ಮೊದಲ ಬಾರಿಗೆ ಇಂಥದ್ದೊಂದು ಸಮಾವೇಶ ಆಯೋಜಿಸಿರುವುದು ಸಂತಸಕರ ಸಂಗತಿ. ಹೂಡಿಕೆದಾರರು ಆಕರ್ಷಿತರಾಗಿ ಬಂದರೆ ನಿರುದ್ಯೋಗ ತಕ್ಕಮಟ್ಟಿಗೆ ತಗ್ಗಿಸಲು ಅನುಕೂಲ ಎಂದು  ಸಣ್ಣ ಕೈಗಾರಿಕೋದ್ಯಮಿ ಮೃತ್ಯುಂಜಯ ಮಠದ ಹೇಳಿದ್ದಾರೆ.