2023 ವಿಧಾನಸಭಾ ಚುನಾವಣೆಗೆ ಕಸರತ್ತು: ರಾಯಚೂರಲ್ಲಿ ಬಿಜೆಪಿ ಸೇರಿದ ನೂರಾರು ಜನ
ರಾಯಚೂರು: ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳ ಕಾಲ ಬಾಕಿಯಿದೆ. 2023 ರಲ್ಲಿ ರಾಯಚೂರು ಜಿಲ್ಲೆ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಲು ಮಾಜಿ ಶಾಸಕ ಮಾನಪ್ಪ ವಜ್ಜಲ್ (Manappa Vajjal) ಈಗಿನಿಂದಲ್ಲೇ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು: ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳ ಕಾಲ ಬಾಕಿಯಿದೆ. 2023 ರಲ್ಲಿ ರಾಯಚೂರು ಜಿಲ್ಲೆ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಲು ಮಾಜಿ ಶಾಸಕ ಮಾನಪ್ಪ ವಜ್ಜಲ್ (Manappa Vajjal) ಈಗಿನಿಂದಲ್ಲೇ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ (State Govt) ಯೋಜನೆಗಳನ್ನು ಜನರಿಗೆ ತಿಳಿಸುತ್ತಾ 2023ರ ವಿಧಾನಸಭಾ ಚುನಾವಣೆಗಾಗಿ (Assembly Election) ಸಕಲ ಸಿದ್ಧತೆಗಳು ನಡೆಸಿದ್ದಾರೆ. ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಗಳ ಕಾರ್ಯಕರ್ತರನ್ನು ಬಿಜೆಪಿ ಅತ್ತ ಸೆಳೆಯುತ್ತಾ ಬಿಜೆಪಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಗಟ್ಟಿಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಲಿಂಗಸೂಗೂರು ವಿಧಾನಸಭಾ (Lingasaguru) ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ನ ಹಾಲಿ ಶಾಸಕ (Congress MLA) ಡಿ.ಎಸ್. ಹೂಲಗೇರಿ (D.S. Hulageri) ಅಧಿಕಾರದಲ್ಲಿ ಇದ್ದಾರೆ. ಜೆಡಿಎಸ್ ಅಭ್ಯರ್ಥಿ ಎಂದು ಗುರುತಿಸಿಕೊಂಡ ಸಿದ್ದು ಬಂಡಿ ಸಹ ಚುನಾವಣೆಗಾಗಿ ತಯಾರಿ ನಡೆಸಿದ್ದಾರೆ. ಇದರ ಮಧ್ಯೆ ಕಳೆದ ಚುನಾವಣೆಯಲ್ಲಿ ಸೋತ ಮಾಜಿ ಶಾಸಕ ಮಾನಪ್ಪ ವಜ್ಜಲ್ 2023ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಸೂಗೂರಿನಲ್ಲಿ ಕಮಲ ಅರಳಿಸಲು ಬೇಕಾದ ಎಲ್ಲಾ ತಯಾರಿ ನಡೆಸುತ್ತಿದ್ದಾರೆ.
ಅಧಿಕಾರ ಇಲ್ಲದಿದ್ದರೂ ಕ್ಷೇತ್ರದಲ್ಲಿ ಮಾನಪ್ಪ ವಜ್ಜಲ್ ಓಡಾಟ :
ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಾಸಕ ಡಿ.ಎಸ್. ಹೂಲಗೇರಿ ಅಧಿಕಾರದಲ್ಲಿ ಇದ್ದಾರೆ. ಆದ್ರೂ ಮಾಜಿ ಶಾಸಕ ಮಾನಪ್ಪ ವಜ್ಜಲ್ ಚುನಾವಣೆ ಸೋತ ಬಳಿಕ ಮನೆಯಲ್ಲಿ ಕುಳಿತುಕೊಳ್ಳದೇ ಕ್ಷೇತ್ರದಲ್ಲಿ ಸುತ್ತಾಟ ಮಾಡುತ್ತಾ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡ ನಾಯಕರನ್ನ ಬಿಜೆಪಿ ಕಡೆ ಸೆಳೆಯಲು ಮುಂದಾಗಿದ್ದಾರೆ. ಅದರ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುತ್ತಾ ಜನರ ಮನಗೆಲ್ಲುವ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ವಿವಿಧ ಪಕ್ಷಗಳ ಕಾರ್ಯಕರ್ತರು ಸಹ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಸರಳತೆ ಕಂಡು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರು ಮತ್ತು ಸಿದ್ಧಾಂತದಲ್ಲಿ ನಡೆಯವ ಪಕ್ಷ:
ಲಿಂಗಸೂಗೂರು ಪಟ್ಟಣದಲ್ಲಿ ನಡೆದ ಪಕ್ಷ ಸೇರ್ಪಡೆ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಹಲವು ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ನಮ್ಮ ರಾಜ್ಯದಲ್ಲಿ ಇರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಜೆಡಿಎಸ್ ಪಕ್ಷ ಕಾರ್ಯಕರ್ತರನ್ನು ಬೇಕು ಎಂದಾಗ ಕರೆಸಿಕೊಳ್ಳುತ್ತೆ, ಬೇಡವೆಂದಾಗ ಪಕ್ಷದಿಂದ ಉಚ್ಚಾಟನೆ ಮಾಡುತ್ತೆ, ಆದ್ರೆ ಬಿಜೆಪಿ ಕಾರ್ಯಕರ್ತರ ಮತ್ತು ಸಿದ್ಧಾಂತದಲ್ಲಿ ನಡೆಯುವ ಪಕ್ಷವಾಗಿದೆ.ಬಿಜೆಪಿ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವ ಮಾತ್ರ ಇರುತ್ತೆ. ರಾಜ್ಯದಲ್ಲಿ ರಾಜ್ಯಾಧ್ಯಕ್ಷರ ನೇತೃತ್ವ, ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವ, ಮಂಡಲದಲ್ಲಿ ಮಂಡಲ ಅಧ್ಯಕ್ಷರ ನೇತೃತ್ವ ಇರುತ್ತೆ. ತತ್ವ- ಸಿದ್ಧಾಂತದಲ್ಲಿ ನಡೆಯುವ ಏಕೈಕ ಪಕ್ಷ ಬಿಜೆಪಿ ಆಗಿದೆ. ಲಿಂಗಸೂಗೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಸರಳತೆ ಮೆಚ್ಚಿ ಕ್ಷೇತ್ರದ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ ಎಂದರು.
ಲಿಂಗಸೂಗೂರಿನಲ್ಲಿ ನಡೆದ ಕಾರ್ಯಕರ್ತರ ಪಕ್ಷ ಸೇರ್ಪಡೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮಾನಪ್ಪ ವಜ್ಜಲ್, ಪಕ್ಷದಲ್ಲಿ ಕುಟುಂಬ ರಾಜಕಾರಣವಿದೆ ಎಂಬುವುದನ್ನ ತೋರಿಸಿರುವ ಪಕ್ಷವೆಂದರೇ ಅದು ಜೆಡಿಎಸ್ ಪಕ್ಷ. ಲಿಂಗಸೂಗೂರಿನ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ನಾಗಭೂಷಣ (K. Nagabhushan) ಅವರನ್ನು ಅಮಾನತು ಮಾಡಿ ಅವಮಾನ ಮಾಡಿದೆ. ಜೆಡಿಎಸ್ ಪದಾಧಿಕಾರಿಗಳಿಗೂ ಹಾಗೂ ಕಾರ್ಯಕರ್ತರಿಗೂ ಅವಮಾನ ಆಗಿದೆ. ಹೀಗಾಗಿ ಜೆಡಿಎಸ್ ತೊರೆದು ಮಹಿಳಾ ಘಟಕ ಮತ್ತು ಎಸ್ ಸಿ ಘಟಕದ ಕಾರ್ಯಕರ್ತರು ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ. ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ಕೆ.ನಾಗಭೂಷಣ ಮತ್ತು ಅವರ ಕಾರ್ಯಕರ್ತರ ತಂಡ ಬಿಜೆಪಿಗೆ ಬಂದಿದ್ದು ನಮಗೆ ಆನೆಬಲ ಬಂದಂತೆ ಆಗಿದೆ. ನಾನು 10 ವರ್ಷದ ಅಧಿಕಾರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ನೋಡಿ ಜನರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಅಷ್ಟೇ ಅಲ್ಲದೆ ಮತದಾರರಿಗೆ ಮಾಡಿದ ತಪ್ಪಿನ ಅರಿವು ಆಗಿದೆ. ಈ ಸಲ ಲಿಂಗಸೂಗೂರು ಮತದಾರರು ನನ್ನ ಕೈಬಿಡಲ್ಲವೆಂಬ ವಿಶ್ವಾಸವಿದೆ ಎಂದರು.
ಇನ್ನೂ ಸಮಾವೇಶದಲ್ಲಿ ಲಿಂಗಸುಗೂರಿನ ಮಾಜಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಕೆ. ನಾಗಭೂಷಣ್ ಹಾಗೂ ಅವರ ಅಪಾರ ಬೆಂಬಲಿಗರು ಹಾಗೂ ಮುದಗಲ್, ಲಿಂಗಸುಗೂರು, ಚಿಕ್ಕ ಉಪ್ಪೇರಿ ಹಾಗೂ ಲಿಂಗಸೂಗೂರಿನ ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇದಿಕೆ ಮೇಲೆ ಲಿಂಗಸೂಗೂರು ಮಂಡಲ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಲೆಕ್ಕಿಹಾಳ್ ಹಾಗೂ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ಸಹ ಪ್ರಭಾರಿಗಳಾದ ಚಂದ್ರಶೇಖರ ಪಾಟೀಲ್ ಹಲಗೇರಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ರಾಜಾ ಶ್ರೀನಿವಾಸ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.