ಆನಂದ್‌ ಎಂ. ಸೌದಿ

ಯಾದಗಿರಿ [ಆ.19]: ಮಬ್ಬುಗತ್ತಲಲ್ಲಿ 3 ಕಿ.ಮೀ. ಕಲ್ಲುಮುಳ್ಳುಗಳ ದಾರಿಯಲ್ಲಿ ಸಾಗಿಬಂದ ತುಂಬು ಗರ್ಭಿಣಿಯೊಬ್ಬರು, ಉಕ್ಕಿ ಹರಿಯುತ್ತಿದ್ದ ಪ್ರವಾಹದಲ್ಲಿ ರಕ್ಷಣಾ ಪಡೆಯ ನೆರವಿನೊಂದಿಗೆ ಬೋಟ್‌ ಮೂಲಕ ದಡ ಮುಟ್ಟಿದ ಮೈನವಿರೇಳಿಸುವ ಘಟನೆ ಜಿಲ್ಲೆಯ ನೀಲಕಂಠರಾಯನ ಗಡ್ಡೆಯಲ್ಲಿ ಶನಿವಾರ ಸಂಜೆ ನಡೆದಿದೆ. 7ನೇ ಹೆರಿಗೆಯ ನಿರೀಕ್ಷೆಯಲ್ಲಿರುವ 6 ಹೆಣ್ಣು ಮಕ್ಕಳ ತಾಯಿ ಹಣುಮವ್ವ, 3 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರಿನ ಹರಿವಿದ್ದ ಕೃಷ್ಣಾ ನದಿ ದಾಟಿದ ಗಟ್ಟಿಗಿತ್ತಿ.

ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ಇರುವ ಒಂದು ಸೇತುವೆಯೂ ಮುಳುಗಿ ನೀಲಕಂಠರಾಯನ ಗಡ್ಡೆ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿತ್ತು. ಈ ವೇಳೆ ಗಡ್ಡೆಯಲ್ಲಿದ್ದ ತುಂಬು ಗರ್ಭಿಣಿ ಹಣುಮವ್ವಳ ಆರೋಗ್ಯ ಬಿಗಡಾಯಿಸುತ್ತಿದ್ದಂತೆ, ಸ್ಥಳೀಯರು ತಮ್ಮ ಸಂಬಂಧಿಕರು ಹಾಗೂ ಅಧಿಕಾರಿಗಳಿಗೆ ಫೋನಾಯಿಸಿ ಪರಿಸ್ಥಿತಿ ವಿವರಿಸಿದರು. ಹಣುಮವ್ವ ಗಡ್ಡೆಯಿಂದ ನದಿ ತೀರದವರೆಗೆ 3 ಕಿ.ಮೀ. ನಡೆದುಕೊಂಡು ಬಂದಳು. ಕೊನೆಗೆ ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದಲ್ಲಿ 2 ತಾಸು ನಡೆದ ಕಾರ್ಯಾಚರಣೆಯಲ್ಲಿ ಹಣುಮವ್ವರನ್ನು ರಕ್ಷಿಸಿ ದಡ ಸೇರಿಸಲಾಯಿತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಹಣುಮವ್ವ ತನ್ನ ತವರುಮನೆಯಾದ ಕಕ್ಕೇರಾದಲ್ಲಿ ಆಶ್ರಯ ಪಡೆದಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಜಿ ದಡ ಸೇರಿದ್ದ ಯಲ್ಲಮ್ಮ:  ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಯಲ್ಲಮ್ಮ ಗಡ್ಡಿ ಎಂಬ ತುಂಬು ಗರ್ಭಿಣಿ, ಗ್ರಾಮಸ್ಥರ ನೆರವಿನಿಂದ 2014ರ ಜು.30ರಂದು ನೀಲಕಂಠರಾಯನ ಗಡ್ಡದಿಂದ ಈಜಿ ದಡ ಸೇರಿದ್ದರು. ಬಳಿಕ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದರು.