ರಾಯಚೂರು(ಜ.12): ಪೌರತ್ವ ಕಾಯ್ದೆ ಕುರಿತು ನೋಟಿಫಿಕೇಷನ್ ಆಗಿದೆ. ಆದರೆ, ಸಿಎಎ ವಿರೋಧಿಸಿ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ದೇಶದಲ್ಲಿ ಹೋರಾಟ ಮಾಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಾಕಿಸ್ತಾನದ ಭಯೋತ್ಪಾದನೆ ಮುಖವನ್ನು ವಿಶ್ವದ ಮುಂದೆ ನಿಲ್ಲಿಸುವ ಕೆಲಸ ಯಶಸ್ವಿಯಾಗಿ ನಡೆದಿದೆ. ಪಾಕ್‌ನಲ್ಲಿನ ಅಸಹಿಷ್ಣುತೆ ಹಾಗೂ ಸರ್ಕಾರ ಅಲ್ಪ ಸಂಖ್ಯಾತರ ಮೇಲಿನ ನಡೆಸಿರುವ ಧಾರ್ಮಿಕ ಅತ್ಯಾಚಾರವನ್ನು ಜಗತ್ತಿಗೆ ತೋರಿಸಲು ಅವಕಾಶ ಸಿಕ್ಕಿದೆ. ಪಾಕ್‌ನಲ್ಲಿ  ಶೇ. 22 ರಷ್ಟು ಇದ್ದ ಹಿಂದೂ ಅಲ್ಪಸಂಖ್ಯಾತರ ಜನಸಂಖ್ಯೆ ಶೇ. 2 ಕ್ಕೆ ಬಂದಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೇಶಕ್ಕೆ ಲಕ್ಷಾಂತರ ಜನ ಅಕ್ರಮವಾಗಿ ನುಸುಳಿ ಬಂದಿದ್ದಾರೆ ಅವರ ಬಗ್ಗೆ ವಿರೋಧ ಪಕ್ಷಗಳು ಚಕಾರವೆತ್ತುತ್ತಿಲ್ಲ. ಕಾಂಗ್ರೆಸ್‌ನವರು ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 
ಮಾಜಿ ಸಚಿವ ಯು.ಟಿ. ಖಾದರ್ ಪೌರತ್ವ ಕಾಯ್ದೆ ಬಂದ ನಂತರ ನಿಮಗೆ ಏನಾದರೂ ತೊಂದರೆಯಾಗಿದೆಯಾ? ನಿಮ್ಮ ಉದ್ದೇಶ ಏನೂ ಅನ್ನುವುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್‌ನವರು ಸೋಲಿನಿಂದ ಕಂಗೆಟ್ಟಿದ್ದಾರೆ. ಪ್ರಧಾನಿ ಮೋದಿ ವಿರೋಧ ಮಾಡುತ್ತ ದೇಶಕ್ಕೇ ವಿರುದ್ಧ ಮಾಡುತ್ತಿದ್ದಾರೆ. ಪಾಕಿಸ್ತಾನದ ಭಾಷೆ ಕಾಂಗ್ರೆಸ್ ಭಾಷೆ ಒಂದೇ ಆಗಿದೆ. ಯಾಕೆ ಪಾಕಿಸ್ತಾನವನ್ನು ಬೆತ್ತಲೆ ಮಾಡುವ ಅವಕಾಶಕ್ಕೆ ವಿರೋಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನ ಯಾವ ಅಲ್ಪಸಂಖ್ಯಾತರನ್ನು ಸುರಕ್ಷಿತವಾಗಿ ನೋಡಿಕೊಂಡಿದೆ. ಇದು ಪೌರತ್ವ ಕೊಡಲು ಇರುವ ಕಾನೂನು, ಕಿತ್ತುಕೊಳ್ಳುವ ಕಾನೂನು ಅಲ್ಲ ಎಂದು ಹೇಳಿದ್ದಾರೆ. 

ಕುಮಾರಸ್ವಾಮಿ ಸಿಡಿ ಬಿಡುಗಡೆ ಬಗ್ಗೆ ಪೋಲಿಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ನಡೆಯಾಗಿದೆ. ಯಾರ ಮೇಲೆ ದಾಳಿ ಮಾಡಲು ಯಾರಿಗೂ ಹಕ್ಕಿಲ್ಲ, ಪೋಲಿಸರು ಪರಿಸ್ಥಿತಿಗೆ ಅನುಗುಣವಾಗಿ ಕ್ರಮಕೈಗೊಂಡಿದ್ದಾರೆ. ಪೊಲೀಸರು ಕ್ರಮ ಕೈಗೊಂಡರೆ ಅವರ ವಿರುದ್ಧ ನಿಲ್ಲುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. 

ಆಂಧ್ರದ ಕರ್ನೂಲ್ ಜಿಲ್ಲೆಯನ್ನು ರಾಜ್ಯಕ್ಕೆ ಸೇರಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ಗಡಿ ವಿವಾದಗಳು ಬಹಳ ಇವೆ, ಅಭಿವೃದ್ಧಿ ಕಡೆ ಗಮನ ಕೊಡುವುದು ಒಳಿತು. ಜಿಡಿಪಿ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೇವೆ. ಬಜೆಟ್ ಮೂಲಕ ದೇಶ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.