Asianet Suvarna News Asianet Suvarna News

ಧಾರವಾಡದಲ್ಲಿ ಬರೀ ತಗ್ಗು-ಗುಂಡಿಗಳ ದರ್ಶನ

  • ಧಾರವಾಡದಲ್ಲಿ ಬರೀ ತಗ್ಗು-ಗುಂಡಿಗಳ ದರ್ಶನ
  • ಮಯೂರ ರೆಸಾರ್ಚ್‌ ಎದುರು, ಹಳಿಯಾಳ ನಾಕಾ ವೃತ್ತ ಸೇರಿ ಹಲವೆಡೆ ಹದಗೆಟ್ಟಿವೆ ರಸ್ತೆಗಳು
  • ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಅಥವಾ ಆಡಳಿತ ಯಂತ್ರದ ವಿಫಲತೆಯೋ?
Potholes on Dharwad roads traffic problems rav
Author
First Published Oct 21, 2022, 1:25 PM IST | Last Updated Oct 21, 2022, 1:25 PM IST

ವಿಶೇಷ ವರದಿ

ಧಾರವಾಡ (ಅ.21) : ಜನಪ್ರತಿನಿಧಿಗಳ ನಿರ್ಲಕ್ಷ್ಯವೋ, ಆಡಳಿತ ಯಂತ್ರದ ವಿಫಲತೆಯೋ ಅಥವಾ ಧಾರವಾಡ ಜನತೆಯೇ ದುರಾದೃಷ್ಟವೋ ಗೊತ್ತಿಲ್ಲ...! ಧಾರವಾಡದ ಪ್ರಮುಖ ರಸ್ತೆಗಳು ಬರೀ ತಗ್ಗು-ಗುಂಡಿಗಳಿಂದ ಕೂಡಿದ್ದು ನಿತ್ಯ ಸಂಚಾರಕ್ಕೆ ಜನರು ಪರದಾಡುವಂತಾಗಿದೆ. ಧಾರವಾಡದ ಕೋರ್ಚ್‌ ವೃತ್ತದಿಂದ ರೈಲ್ವೆ ನಿಲ್ದಾಣ, ಜ್ಯುಬಿಲಿ ವೃತ್ತದಿಂದ ಕರ್ನಾಟಕ ಕಾಲೇಜ್‌ ಸೇರಿದಂತೆ ಕೆಲವೇ ಕೆಲವು ರಸ್ತೆಗಳನ್ನು ಹೊರತುಪಡಿಸಿ ಇನ್ನುಳಿದ ಪ್ರಮುಖ ರಸ್ತೆಗಳ ಸ್ಥಿತಿ ಹೇಳತೀರದು. ಆ ರಸ್ತೆಯಲ್ಲಿ ಸಂಚರಿಸಿದವರಿಗೆ ಆ ಸಂಕಟ ಗೊತ್ತಾಗಲಿದೆ. ರಸ್ತೆ ರಿಪೇರಿ, ನಿರ್ಮಾಣಕ್ಕೆ ಮಳೆ ನೆಪ ಹೇಳುವ ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ನಿತ್ಯ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ರಸ್ತೆ ಸುಧಾರಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿಲ್ಲ.

ಯಾಮಾರಿದ್ರೆ ಯಮಲೋಕ; ಧಾರವಾಡ ಗ್ರಾಮೀಣ ರಸ್ತೆಗಳು ಗುಂಡಿಮಯ

ಬಿಆರ್‌ಟಿಎಸ್‌ ನವಲೂರು ಸೇತುವೆ ಕಾರ್ಯ ಪ್ರಗತಿಯಲ್ಲಿದ್ದು ಸೇತುವೆ ಕೆಳಗೆ ಸಂಚಾರಕ್ಕೆ ಅವಕಾಶ ಕೊಡಲಾಗಿದೆ. ಸೇತುವೆ ಕೆಳಗಿನ ಮಯೂರ ಹೋಟೆಲ್‌ ಎದುರಿಗಿನ ರಸ್ತೆಯಲ್ಲಿ ಹೊಂಡದ ರೂಪದ ತೆಗ್ಗುಗಳಿವೆ. ಸಣ್ಣ ಕಾರು, ಬೈಕ್‌ ತಗ್ಗುಗಳಲ್ಲಿ ಹತ್ತಿ ಇಳಿಯದಷ್ಟುರಸ್ತೆ ಕೆಟ್ಟಿದೆ. ಕೆಂಪು ಮಣ್ಣು ಹಾಕಿದ್ದು ಧೂಳೇಳುತ್ತಿದೆ. ಮಳೆ ಬಂದರೆ ನೀರು ತುಂಬಿದ ಹೊಂಡಗಳಾಗುತ್ತಿವೆ. ಜತೆಗೆ ಬಿಆರ್‌ಟಿಎಸ್‌ ಬಸ್‌, ಕಾರು-ಬಸ್‌, ಬೈಕ್‌ ಎಲ್ಲ ವಾಹನಗಳು ಅತಿ ಕಿರಿದಾದ ಹದಗೆಟ್ಟರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗುತ್ತಿವೆ. ಬೈಕ್‌ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಮಹಾನಗರ ಪಾಲಿಕೆ ಕಚೇರಿಯಿಂದ ಜಿಲ್ಲಾಸ್ಪತ್ರೆ ವರೆಗೆ ರಸ್ತೆ ನಿರ್ಮಾಣಕ್ಕೆ . 2.25 ಕೋಟಿ ವೆಚ್ಚದ ಟೆಂಡರ್‌ ಪ್ರಕ್ರಿಯೆ ಮುಗಿದು, ಜುಲೈ ತಿಂಗಳಲ್ಲಿಯೇ ವರ್ಕ್ ಆಡರ್‌ ಆಗಿದೆ. ದಾಸನಕೊಪ್ಪ ಕ್ರಾಸ್‌ನಿಂದ ಕೆಲಗೇರಿ ಕ್ರಾಸ್‌ ವರೆಗೆ ಸಿಮೆಂಟ್‌ ರಸ್ತೆ ಸಹ ಟೆಂಡರ್‌ ಆಗಿದೆ. ಶಾಸಕ ಅರವಿಂದ ಬೆಲ್ಲದ ಅವರು ಪೂಜೆಗೆ ಸಮಯ ನೀಡದ ಹಿನ್ನೆಲೆಯಲ್ಲಿ ತಿಂಗಳುಗಟ್ಟಲೇ ವಿಳಂಬವಾಗುತ್ತಿದೆ. ಚುನಾವಣೆ ಸಮೀಪ ಬರುತ್ತಿದ್ದಂತೆ ಪೂಜೆ ಮಾಡಲು ಯೋಜನೆ ಹಾಕಿದ್ದಾರೋ ಅಥವಾ ಶೇ. 40ರಷ್ಟುಕಮಿಷನ್‌ ಬಂದಿಲ್ಲವೆಂದು ವಿಳಂಬ ಮಾಡುತ್ತಿದ್ದಾರೋ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸುತ್ತಿದ್ದಾರೆ.

ಕರ್ನಾಟಕ ಕಾಲೇಜು ವೃತ್ತದಿಂದ ದಾಸನಕೊಪ್ಪ ಸರ್ಕಲ್‌ ವರೆಗಿನ 200 ಮೀಟರ್‌ ರಸ್ತೆಯ ಪೈಕಿ ಬರೀ 100 ಮೀಟರ್‌ ಮಾತ್ರ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ಕೋರ್ಚ್‌ ವೃತ್ತದಿಂದ ಎಸ್‌ಬಿ ವರೆಗಿನ 100 ಮೀಟರ್‌ ಪೈಕಿ 50 ಮೀಟರ್‌ ಮಾತ್ರ ಮಾಡಲಾಗಿದೆ. ಎರಡೂ ರಸ್ತೆಗಳಲ್ಲಿ ಕಾಂಕ್ರೀಟ್‌ ರಸ್ತೆಯ ಮುಕ್ತಾಯದ ಹಂತವನ್ನು ವೈಜ್ಞಾನಿಕವಾಗಿ ಮುಕ್ತಾಯ ಮಾಡದಿರುವುದು ವಾಹನ ಸವಾರರಿಗೆ ಕಾಂಕ್ರೀಟ್‌ ರಸ್ತೆಯಿಂದ ಡಾಂಬರ್‌ ರಸ್ತೆಗೆ ಇಳಿಯುವಾಗ ಬೆಟ್ಟಇಳಿದ ಅನುಭವವಾಗುತ್ತಿದೆ. ಇನ್ನು, ಪಾಲಿಕೆ ಕಚೇರಿಯಿಂದ ಜಿಲ್ಲಾಸ್ಪತ್ರೆ, ತೇಜಸ್ವಿನಿ ನಗರ, ಸಂಗೊಳ್ಳಿ ರಾಯಣ್ಣ ನಗರ, ಹಳಿಯಾಳ ನಾಕಾ ವೃತ್ತ, ಐಸ್‌ ಫ್ಯಾಕ್ಟರಿಯಿಂದ ಹಳಿಯಾಳ ನಾಕಾ ವೃತ್ತ, ಶಿವಳ್ಳಿ, ಬ್ಯಾಹಟ್ಟಿ-ಹೆಬಸೂರ, ಕಲಘಟಗಿ ರಸ್ತೆಗಳ ಸ್ಥಿತಿ ಹೇಳತೀರದು. ಜತೆಗೆ ಇತ್ತೀಚಿಗಷ್ಟೇ ಅಭಿವೃದ್ಧಿಗೊಂಡ ನಾರಾಯಣಪುರ, ಉದಯನಗರ, ಸಾಧನಕೇರಿ ರಸ್ತೆಗಳು ಈಗಾಗಲೇ ತಗ್ಗು-ಗುಂಡಿ ಬಿದ್ದಿವೆ. ಇದರಲ್ಲಿ ಕಳಪೆ ಕಾಮಗಾರಿ ಕಾಣುತ್ತಿದ್ದು ಸೂಕ್ತ ತನಿಖೆ ನಡೆಸಬೇಕು. ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.

ದುಡ್ಡು ಇಸ್ಕಂಡು ಇಟ್ಕಂಡ್ರೆ ಗುಂಡಿ ಮುಚ್ಚೋರು ಯಾರು?

ಧಾರವಾಡ ಸೇರಿದಂತೆ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ವ್ಯಾಪ್ತಿಯ ಬಹುತೇಕ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳ ದುರಸ್ತಿಗೆ ಸರ್ಕಾರ ಶಾಸಕರಿಗೆ . 50 ಕೋಟಿ ಅನುದಾನ ನೀಡಿದೆ. ಆದರೆ, ಹು-ಧಾ ಸೇರಿ ಜಿಲ್ಲೆಯ ಯಾವದೊಂದು ರಸ್ತೆ ಸಂಚಾರಕ್ಕೆ ಸುವ್ಯವಸ್ಥಿತವಾಗಿಲ್ಲ. ರಸ್ತೆ ಹಾಳಾಗಲು ಕಳಪೆ ಕಾಮಗಾರಿ, ಜನಪ್ರತಿನಿಧಿಗಳ ಭ್ರಷ್ಟಾಚಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಪಿ.ಎಚ್‌. ನೀರಲಗೇರಿ ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios