ಧಾರವಾಡ(ಏ.12): ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಪಿಂಚಣಿ ಸೇರಿ ಪೋಸ್ಟ್‌ ಬ್ಯಾಂಕ್‌ನಲ್ಲಿರುವ ವಿವಿಧ ಸಾಮಾಜಿಕ ಯೋಜನೆಗಳಿಗೆ ಜಮೆಯಾದ ಹಣ ತೆಗೆಯಲಾಗದೆ, ಇನ್ಶುರೆನ್ಸ್‌ ಕಂತು ಮತ್ತಿತರ ಯೋಜನೆಗಳ ಕಂತು ಕಟ್ಟಲಾಗದೆ ಪರದಾಡುತ್ತಿರುವ ಗ್ರಾಹಕರಿಗಾಗಿ ಅಂಚೆ ಇಲಾಖೆ ವಿನೂತನ ಪ್ರಯತ್ನವೊಂದಕ್ಕೆ ಕೈಹಾಕಿದೆ. 

ಧಾರವಾಡ ಹಾಗೂ ಬಾಗಲಕೋಟೆಯಲ್ಲಿ ಪೋಸ್ಟ್‌ ಆಫೀಸ್‌ ಆನ್‌ ವ್ಹೀಲ್‌ ಎಂಬ ಸೇವೆ ಆರಂಭಿಸಿದೆ. ರಾಜ್ಯದಲ್ಲೇ ಮೊದಲು ಎನ್ನಬಹುದಾದ ಈ ಯೋಜನೆಯಡಿ ಪೋಸ್ಟ್‌ ಆಫೀಸ್‌ ಬ್ಯಾಂಕ್‌ ಜನರ ಮನೆ ಬಾಗಿಲಿಗೆ ಬರಲಿದೆ.

ಲಾಕ್‌ಡೌನ್‌: ಆಚೆ ಬರಬೇಡಿ ಮನೆ ಬಾಗಿಲಿಗೇ ಬರಲಿದೆ ಪೋಸ್ಟ್‌ ಆಫೀಸ್‌!

ಅಂಚೆ ಕಚೇರಿ ವಾಹನವೊಂದರಲ್ಲಿ 4ಜಿ ಡೊಂಗಲ್‌, ಕಂಪ್ಯೂಟರ್‌, ಯುಪಿಎಸ್‌ ಸೇರಿ ಸುವ್ಯವಸ್ಥಿತ ಸಾಧನಗಳೊಂದಿಗೆ ಊರೂರು ಸುತ್ತುವ ಐವರು ಅಂಚೆ ಸಿಬ್ಬಂದಿ ಎಸ್‌ಬಿ ಖಾತೆಗೆ ಹಣ ಜಮೆ, ವಿತ್‌ ಡ್ರಾ, ಪೋಸ್ಟಲ್‌ ಲೈಫ್‌ ಇನ್ಶುರೆನ್ಸ್‌ ಕಂತು ಕಟ್ಟುವುದು, ಸೋಶಿಯಲ್‌ ಸೆಕ್ಯುರಿಟಿ ಪೆನ್ಷನ್‌, ಸುಕನ್ಯಾ ಸಮೃದ್ಧಿ ಯೋಜನೆ ಹಣ ಜಮೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. 

ಅಲ್ಲದೆ, ಯಾವುದೇ ಬ್ಯಾಂಕ್‌ನಲ್ಲಿರುವ ಹಣವನ್ನು ಆಧಾರ್‌ ಎನೇಬಲ್‌ ಪೇಮೆಂಟ್‌ ಸಿಸ್ಟಂ(ಎಇಪಿ) ಮೂಲಕ ಪಡೆಯುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮನಿಯಾರ್ಡರ್‌ ಕಳುಹಿಸಲೂ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.