ಅಪ್ಪಾರಾವ್ ಸೌದಿ

ಬೀದರ್(ಮೇ.04): ಚಿಕಿತ್ಸೆಯ ಅಲಭ್ಯತೆ, ಕಿತ್ತು ತಿನ್ನುತ್ತಿರುವ ಬಡತನದ ಮಧ್ಯ ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಇಲ್ಲೊಬ್ಬ ಬಡ ವಯೋವೃದ್ಧೆಯ ಕೈ ಕಾಲುಗಳು ಊದುಕೊಳ್ಳುತ್ತಿವೆ ಮಾತು ಮೌನಕ್ಕೆ ಜಾರುತ್ತಿದೆ, ಮೂವರು ಮೂಕ ಮತ್ತು ಕಿವುಡ ಮಕ್ಕಳ ಕಣ್ಣೀರು, ನರರೋಗ ಪೀಡಿತ ಮಗ, ನೌಕರಿ ಕಳೆದುಕೊಂಡು ಸಂಕಷ್ಟದಲ್ಲಿರುವ ಮಗಳ ಮುಂದೆ ಕೈಚೆಲ್ಲಿ ಸಾವಿನ ಕದ ತಟ್ಟುತ್ತಿದ್ದಾಳೆ. 

ಇಲ್ಲಿನ ಡಾ. ಅಂಬೇಡ್ಕರ್ ಕಾಲೋನಿಯಲ್ಲಿ ಭಾರತಿ ವೀರಣ್ಣ ಗುಪ್ತಾ (55) ಎಂಬ ಮಹಿಳೆಯನ್ನು ಎರಡೂ ಕಿಡ್ನಿಗಳ ವೈಫಲ್ಯ ಭಾರಿ ಅನಾರೋಗ್ಯಕ್ಕೆ ದೂಡಿದೆ. ಮನೆಯಲ್ಲಿರುವ ಮಕ್ಕಳ ಸ್ಥಿತಿಯೂ ಅತ್ಯಂತ ಸಂಕಷ್ಟದಲ್ಲಿದೆ ಕಳೆದ 6 ತಿಂಗಳ ಹಿಂದಷ್ಟೇ ಗಂಡನನ್ನು ಕಳೆದುಕೊಂಡು ಅನಾರೋಗ್ಯದಿಂದ ಜರ್ಝರಿತಳಾಗಿದ್ದಾಳೆ.

ಲಾಕ್‌ಡೌನ್‌ ಎಫೆಕ್ಟ್‌: ಕೈಯಲ್ಲಿ ದುಡ್ಡಿಲ್ಲ, ಔಷಧಿ ಸಿಗದೆ ಪುಟ್ಟ ಕಂದಮ್ಮನ ನರಳಾಟ..!

ಕೊರೋನಾ ರೋಗ ಜೀವ ಹಿಂಡುವದಂಥದ್ದಾಗಿದ್ದಷ್ಟೇ ಅಲ್ಲ ಜೀವ ಕೈಯಲ್ಲಿ ಹಿಡಿದುಕೊಂಡಿರುವವರ ಪಾಲಿಗೆ ನರಕ ಯಾತನೆಯನ್ನೇ ತಂದೊಡ್ಡಿದೆ. ಇದಕ್ಕೆ ಇದೊಂದು ಉದಾಹರಣೆ. ಡಯಾಲಿಸಿಸ್, ಚಿಕ್ಕ ಶಸ್ತ್ರ ಚಿಕಿತ್ಸೆಯ ಅತ್ಯಂತ ಅನಿವಾರ್ಯತೆ ಇರುವ ಈಕೆಗೆ ಜಿಲ್ಲೆಯಲ್ಲಿ ಚಿಕಿತ್ಸೆ ಅಲಭ್ಯವಾಗಿದೆ. ಪಕ್ಕದ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅನಿವಾರ್ಯತೆ ಎದುರಾಗಿದೆ.

ಬೀದರ್ ಜಿಲ್ಲಾಡಳಿತ ಚಿಕಿತ್ಸೆಗಾಗಿ ಅಗತ್ಯ ಸಹಕಾರ ನೀಡುತ್ತಿದ್ದರೆ ಟೀಮ್ ಯುವಾ ಔಷಧಿಗಳು ಹಾಗೂ ಪರೀಕ್ಷೆಗಳನ್ನು ಮಾಡಿಸಿ ಕಲಬುರಗಿಗೆ ಕಳುಹಿಸುವತ್ತ ಜಿಲ್ಲಾಡಳಿತದ ಸಹಯೋಗದೊಂದಿಗೆ ಶ್ರಮಿಸುತ್ತಿದೆ. ಅತ್ಯಂತ ಕಡುಬಡ ಕುಟುಂಬಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚ ಭರಿಸೋ ಆತಂಕ ಎದುರಾಗಿದೆ. ದಾನಿಗಳು ಇತ್ತ ಕಿವಿಗೊಡಬೇಕಿದೆ. 

ಬಡತನದ ಬೇಗೆ ನಮ್ಮನ್ನು ಕಿತ್ತು ತಿನ್ನುತ್ತಿದೆ. ಅಗತ್ಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಬಿಡಿಗಾಸು ಇಲ್ಲದಾಗಿದೆ. ಜಿಲ್ಲಾಡಳಿತ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ಸೇವೆ ಒದಗಿಸಿ ನಮ್ಮ ತಾಯಿಯ ಜೀವಕ್ಕೆ ಸಹಕರಿಸಿದೆ. ವಿನಯ ಮಾಳಗೆ ನೇತೃತ್ವದ ‘ಟೀಮ್ ಯುವಾ’ ನಮ್ಮ ತಾಯಿಯ ಔಷಧೋಪಚಾರ ನೋಡಿಕೊಂಡಿದೆ. ಇದೀಗ ಜೀವ ಉಳಿಸಿಕೊಳ್ಳಲು ಹೆಚ್ಚಿನ ಚಿಕಿತ್ಸೆ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಿದೆ. ಹಣಕಾಸಿನ ಸಹಾಯವನ್ನ ದಾನಿಗಳಿಂದ ಕೋರುತ್ತೇವೆ. (ಮೊ. 6361147703) ಎಂದು (ಭಾರತಿ ವೀರಣ್ಣ ಗುಪ್ತಾ ಅವರ ಮಗಳು) ವೀಣಾ ದೇವಿ ಅವರು ವಿನಂತಿ ಮಾಡಿಕೊಂಡಿದ್ದಾರೆ.