ಒಂದೇ ಮಳೆಗೆ ಹಳೇ ಬೆಂಗಳೂರು - ಮೈಸೂರು ಹೆದ್ದಾರಿ ಬಣ್ಣ ಬಯಲು!
ರಾಮನಗರ ಮತ್ತು ಚನ್ನಪಟ್ಟಣ ಪ್ರದೇಶಗಳಲ್ಲಿ ಹಾದು ಹೋಗಿರುವ ಹಳೇಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಇದು ಎಷ್ಟರ ಮಟ್ಟಿಗೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದನ್ನು ಮಳೆರಾಯ ಬಯಲು ಮಾಡಿದ್ದಾನೆ.
ರಾಮನಗರ (ಮೇ.15): ಧಾರಕಾರವಾಗಿ ಸುರಿದ ಒಂದೇ ಮಳೆಗೆ ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯ ಬಣ್ಣ ಬಯಲಾಗಿದೆ. ರಾಮನಗರ ಮತ್ತು ಚನ್ನಪಟ್ಟಣ ಪ್ರದೇಶಗಳಲ್ಲಿ ಹಾದು ಹೋಗಿರುವ ಹಳೇಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಇದು ಎಷ್ಟರ ಮಟ್ಟಿಗೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದನ್ನು ಮಳೆರಾಯ ಬಯಲು ಮಾಡಿದ್ದಾನೆ. ರಾಮನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಧಾರಕಾರವಾಗಿ ಮಳೆಯಾಗಿದ್ದು, ಕೆಲವೆಡೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅದೇ ರೀತಿ ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಡಾಂಬರು ಕಿತ್ತು ಬಂದಿದ್ದು, ಗುಂಡಿಗಳು ಬಿದ್ದಿವೆ.
ಹೆದ್ದಾರಿಯಲ್ಲಿ ಮೂಲಸೌಕರ್ಯವೇ ಇಲ್ಲ: ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ನಿರ್ಮಾಣಗೊಂಡ ಬಳಿಕ ವಾಹನಗಳೆಲ್ಲವು ಆ ಹೆದ್ದಾರಿಯಲ್ಲಿ ಸಂಚಾರ ಪ್ರಾರಂಭಿಸಿದವು. ಆದರೂ ಸಾವಿರಾರು ವಾಹನಗಳು ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಲೇ ಇವೆ. ಎಕ್ಸ್‌ಪ್ರೆಸ್ ವೇ ಕಾರಣದಿಂದಾಗಿ ಬೆಂ- ಮೈ ಹಳೆಯ ಹೆದ್ದಾರಿಯನ್ನು ಕೇಳುವವರೇ ಇಲ್ಲದಂತಾಗಿತ್ತು. ಹೆದ್ದಾರಿಗೆ ಇರಬೇಕಾದ ಯಾವುದೇ ಮೂಲ ಸೌಕರ್ಯಗಳು ಇರಲಿಲ್ಲ. ಇನ್ನು ಮಳೆ ಬಂದರೆ ಸಾಕು ಹೆದ್ದಾರಿ ಪೂರ ನೀರು ತುಂಬಿಕೊಂಡು ನದಿಯಂತೆ ಹರಿಯುತ್ತತ್ತು. ಇದರಿಂದಾಗಿ ವಾಹನ ಸವಾರರು ತಮ್ಮ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೂ ಅನುದಾನದ ಕೊರತೆ ಎದುರಾಗಿತ್ತು.
ಬಹಿರಂಗ ಸವಾಲಿಗೆ ಸೂಕ್ತ ಪ್ರತ್ಯುತ್ತರ ನೀಡಿ: ಸಂಸದ ಬಿ.ವೈ.ರಾಘವೇಂದ್ರ
ರಾಷ್ಟ್ರೀಯ ಹೆದ್ದಾರಿಯಾಗಿದ್ದ ಕಾರಣ ಲೋಕೋಪಯೋಗಿ ಇಲಾಖೆ ನಿರ್ವಹಣೆ ಜವಾಬ್ದಾರಿಯಿಂದ ಹಿಂದೆ ಸರಿದಿತ್ತು. ಹೀಗಾಗಿ ಹೆದ್ದಾರಿ ಸರಿಯಾದ ನಿರ್ವಹಣೆ ಇಲ್ಲದೆ ಗುಂಡಿಮಯವಾಗಿತ್ತು. ಸಂಸದ ಡಿ.ಕೆ.ಸುರೇಶ್ ಹಳೆಯ ಹೆದ್ದಾರಿಗೆ ಡಾಂಬರೀಕರಣ ಮಾಡುವುದು ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಒಲವು ತೋರಿದರು. ಅದರಂತೆ ರಾಮನಗರ - ಚನ್ನಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿಗೆ ಡಾಂಬರೀಕರಣ ಮಾಡಿಸುವ ಕಾಮಗಾರಿಗೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಅನುಮೋದನೆ ತಂದು ಕಾಮಗಾರಿಗೆ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬೆಂಗಳೂರು ಶ್ರೀ ಚೌಡೇಶ್ವರಿ ಕಾಂಕ್ರಿಟ್ ಪ್ರೈವೆಟ್ ಲಿಮಿಟೆಡ್ ನವರು ಈ ಡಾಂಬರೀಕರಣದ ಟೆಂಡರ್ ಪಡೆದುಕೊಂಡಿದೆ.
ಮರು ಡಾಂಬರೀಕರಣಕ್ಕೆ 47.12 ಕೋಟಿ ವೆಚ್ಚ: ರಾಮನಗರ ಬಸವನಪುರದಿಂದ ಚನ್ನಪಟ್ಟಣದ ಮಳೂರುವರೆಗೆ ಹಳೇಯ ಹೆದ್ದಾರಿಯಲ್ಲಿ ಒಟ್ಟು 21.13 ಕಿಲೋ ಮೀಟರ್ ವರೆಗೆ 47.12 ಕೋಟಿ ರು.ಗಳ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಿಸುವ ಕಾರ್ಯಕ್ಕೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆಗೂ ಮುನ್ನವೇ ಸಂಸದ ಡಿ.ಕೆ.ಸುರೇಶ್ ಖುದ್ಧಾಗಿ ಚಾಲನೆ ನೀಡಿದ್ದರು. ಬಸವನಪುರದಿಂದ ಆರಂಭಗೊಂಡಿರುವ ಕಾಮಗಾರಿಯೂ ಮಳೂರುವರೆಗೆ ನಡೆದಿದ್ದು, ಮತ್ತೊಂದು ಬದಿಯ ರಸ್ತೆಯಲ್ಲಿ ಡಾಂಬರೀಕರಣ ಕಾರ್ಯ ನಡೆಯುತ್ತಿದೆ. ಕಳೆದ ಒಂದೂವರೆ ತಿಂಗಳಿನಿಂದಲೂ ರಸ್ತೆ ತೇಪೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಆದರೀಗ ಸೋಮವಾರ ರಾತ್ರಿ ಸುರಿದ ಮಳೆಗೆ ಹೆದ್ದಾರಿಯಲ್ಲಿ ಮಾಡಿರುವ ಡಾಂಬರೀಕರಣ ಕಾಮಗಾರಿಯ ಗುಣಮಟ್ಟ ಬಯಲಾಗಿದೆ. ಅರ್ಕಾವತಿ ನದಿ ಸೇತುವೆ ಸೇರಿದಂತೆ ಕೆಲವೆಡೆ ಡಾಂಬರು ಕಿತ್ತು ಬಂದಿದ್ದು, ಹೆದ್ದಾರಿಯಲ್ಲಿಯೇ ನೀರು ಸಂಗ್ರಹವಾಗಿದೆ. ಅಲ್ಲದೆ ರಸ್ತೆ ತ್ಯಾಜ್ಯವನ್ನು ಅರ್ಕಾವತಿ ನದಿಗೆ ಸುರಿಯುತ್ತಿರುವ ಆರೋಪಗಳು ಕೇಳಿ ಬರುತ್ತಿದೆ.
ಭಾರೀ ಬಿಸಿಲು: ವೀಕೆಂಡ್‌ನಲ್ಲೂ ವಿಶ್ವವಿಖ್ಯಾತ ಹಂಪಿಯತ್ತ ಸುಳಿಯದ ಪ್ರವಾಸಿಗರು!
ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹ: ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗದೆ ತಗ್ಗಿರುವ ಭಾಗದಲ್ಲಿ ಸಂಗ್ರಹವಾಗುತ್ತಿದೆ. ಹೆದ್ದಾರಿಯಲ್ಲಿ ತೇಪೆ ಹಚ್ಚುವ ಕೆಲಸ ನಡೆಯುತ್ತಿದ್ದೆಯೇ ವಿನಾಃ ವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿಲ್ಲ. ಜಾನಪದ ಲೋಕ ಹಾಗೂ ಜಿಲ್ಲಾಧಿಕಾರಿಗಳ ಮನೆ ಮುಂದೆಯೇ ಮಳೆ ನೀರು ಸಂಗ್ರಹವಾಗುತ್ತಿತ್ತು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.