Asianet Suvarna News Asianet Suvarna News

ರಾಜಕೀಯ ಚದುರಂಗದಾಟ: ತಾನೆ ಹೆಣೆದೆ ಬಲೆಯಲ್ಲಿ ಬಿಜೆಪಿ ವಿಲ ವಿಲ..!

ವಿಶ್ವನಾಥ ರೆಡ್ಡಿಯನ್ನು ವರಿಷ್ಠರು ಸ್ವಾಗತಿಸಿದ್ದೇ 7 ಬಿಜೆಪಿ ಜಿಪಂ ಸದಸ್ಯರ ಬಂಡಾಯಕ್ಕೆ ಕಾರಣ| ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತ ಹೊಂದಿದ್ದರೂ ಅವಿಶ್ವಾಸ ಮಂಡಿಸುವುದಕ್ಕೆ ಅಗತ್ಯ ಸಂಖ್ಯಾ ಬಲ ಇರಲಿಲ್ಲ| ಜಿಲ್ಲಾ ಪಂಚಾಯಿತಿ ರಾಜಕೀಯ ಬೆಳವಣಿಗೆ ಭಾರಿ ಕುತೂಹಲ|

Political Drama in Koppal Jilla Panchayat
Author
Bengaluru, First Published May 15, 2020, 11:46 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.15): ಕಾಂಗ್ರೆಸ್‌ನಲ್ಲಿ ರೆಬೆಲ್‌ ಆಗಿದ್ದ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರನ್ನು ಬಿಜೆಪಿ ನಾಯಕರು ಸದಸ್ಯರ ಗಮನಕ್ಕೆ ತರದೆ ತೆರೆಮರೆಯಲ್ಲಿಯೇ ಸ್ವಾಗತಿಸಿದ್ದೇ ಅದೇ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯರ ಮುನಿಸು, ಈಗ ನಡೆಯುತ್ತಿರುವ ರಾಜಕೀಯ ಚದುರಂಗದಾಟಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಗೊಂದಲ ಆಂತರಿಕ ಒಪ್ಪಂದದ ವಿರುದ್ಧ ಸಿಡಿದೆದ್ದಿದ್ದ ವಿಶ್ವನಾಥ ರೆಡ್ಡಿ ಮಾತೃ ಪಕ್ಷದಲ್ಲೇ ಇದ್ದರೂ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು ಶುರು ಮಾಡಿದ್ದರು. ಬಿಜೆಪಿ ಜೊತೆ ಸೇರಿ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ಎಂದೇ ಎಲ್ಲೆಡೆ ವ್ಯಾಖ್ಯಾನಿಸಲಾಗುತ್ತಿತ್ತು.

ಕೊರೋನಾ ಮಧ್ಯೆಯೂ ರಾಜಕೀಯ: BJPಗೆ ಶಾಕ್‌ಗೆ ಕೊಟ್ಟ ಆಪರೇಷನ್‌ ಹಸ್ತ..!

ಜಿಲ್ಲಾ ಪಂಚಾಯತಿಯಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತ ಹೊಂದಿದ್ದರೂ ಅವಿಶ್ವಾಸ ಮಂಡಿಸುವುದಕ್ಕೆ ಅಗತ್ಯ (ಎರಡರಲ್ಲಿ  ಮೂರರಷ್ಟು ಸದಸ್ಯರ ಬಲ) ಸಂಖ್ಯಾ ಬಲ ಇರಲಿಲ್ಲ. ಹೀಗಾಗಿ ಬಿಜೆಪಿ ಸದಸ್ಯರ ಬೆಂಬಲ ಸಿಕ್ಕರೆ ಕಾಂಗ್ರೆಸ್‌ ಅವಿಶ್ವಾಸ ಮಂಡಿಸಲು ಸಾಧ್ಯವಿಲ್ಲ ಎಂದು ವಿಶ್ವನಾಥ ರೆಡ್ಡಿ ನಂಬಿದ್ದರು. ಬಿಜೆಪಿ ನಾಯಕರ ಜೊತೆ ಅತ್ಯಾಪ್ತತೆ ಹೊಂದಿದ್ದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವಿರುದ್ಧ ಮುನಿಸಿಕೊಂಡು ಕನಕಗಿರಿ ಶಾಸಕ, ಬಿಜೆಪಿಯ ಬಸವರಾಜ ದಡೇಸ್ಗೂರು ಅವರೊಂದಿಗೆ ಸುತ್ತಾಡಲು ಶುರು ಮಾಡಿದರು. ಬಿಜೆಪಿಯ ಜಿಲ್ಲಾ ನಾಯಕರು ಸಹ ಕಾಂಗ್ರೆಸ್‌ ತೆಕ್ಕೆಯಿಂದ ಜಿಪಂ ತೆಗೆದುಕೊಳ್ಳಲು ವಿಶ್ವನಾಥ ರೆಡ್ಡಿ ಅವರ ಬೆಂಬಲಕ್ಕೆ ನಿಲ್ಲುವ ನಿರ್ಧಾರಕ್ಕೆ ಬಂದಿದ್ದರೆನ್ನಲಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ಬಿಜೆಪಿ ಜಿಪಂ ಸದಸ್ಯರ ಜೊತೆ ಪಕ್ಷದ ನಾಯಕರು ಹಾಗೂ ಅಧ್ಯಕ್ಷ ವಿಶ್ವನಾಥ ರೆಡ್ಡಿ ಚರ್ಚಿಸಿಲ್ಲ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿಯ 7 ಸದಸ್ಯರು ಕಾಂಗ್ರೆಸ್‌ ಜೊತೆ ರಹಸ್ಯ ಚರ್ಚೆ ನಡೆಸಿ ಅವಿಶ್ವಾಸ ನಿರ್ಣಯ ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ವಿಶ್ವನಾಥ ರೆಡ್ಡಿ ಕಾರ್ಯ ವೈಖರಿ ಕುರಿತು ಕಾಂಗ್ರೆಸ್‌, ಬಿಜೆಪಿ ಸದಸ್ಯರಲ್ಲಿ ಮೊದಲಿನಿಂದಲೂ ಅಸಮಾಧಾನ ಇತ್ತು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷದ ಜಿಪಂ ಸದಸ್ಯರು ಹಲವಾರು ಗೌಪ್ಯ ಸಭೆ ನಡೆಸಿದ್ದರು. ಇದೆಲ್ಲ ಗೊತ್ತಿದ್ದೂ ಬಿಜೆಪಿ ನಾಯಕರು ವಿಶ್ವನಾಥ ರೆಡ್ಡಿ ಬೆನ್ನಿಗೆ ನಿಂತಿದ್ದು, ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದುದು ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೇ ದಾಳ ಮಾಡಿಕೊಂಡ ಕಾಂಗ್ರೆಸ್‌ ನಾಯಕರು, ಜಿಪಂ ಸದಸ್ಯರು ಅತೃಪ್ತ ಬಿಜೆಪಿ ಜಿಪಂ ಸದಸ್ಯರನ್ನು ತನ್ನತ್ತ ಸೆಳೆದುಕೊಂಡು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದು, ಅರ್ಜಿ ಸಲ್ಲಿಸಿದ್ದಾರೆ. ಸಮಯ ನಿಗದಿ ಮಾಡಬೇಕಾಗಿದೆ.

ಕಾನೂನು ಸಮರ:

ಈ ನಡುವೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ ಕಾನೂನು ಸಮರಕ್ಕೆ ಮುಂದಾಗುವ ತಯಾರಿ ನಡೆಸಿದ್ದಾರೆ. ಅವಿಶ್ವಾಸಕ್ಕೆ ಅವಕಾಶವೇ ಇಲ್ಲ. ಜಿಲ್ಲಾ ಪಂಚಾಯಿತಿ ಕಾಯ್ದೆ ತಿದ್ದುಪಡಿಯ ಪ್ರಕಾರ ಕನಿಷ್ಠ ಮೂರು ವರ್ಷ ಅವಿಶ್ವಾಸ ಮಾಡುವಂತಿಲ್ಲ. ಇತ್ತಿಚೆಗೆ ತಿದ್ದುಪಡಿಯಾಗಿದ್ದರೂ ಅದು ಈ ಅವಧಿಗೆ ಅನ್ವಯವಾಗುವುದಿಲ್ಲ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕಂತೂ ಕೊಪ್ಪಳ ಜಿಲ್ಲಾ ಪಂಚಾಯಿತಿ ರಾಜಕೀಯ ಬೆಳವಣಿಗೆ ಭಾರಿ ಕುತೂಹಲಕ್ಕಂತೂ ಕಾರಣವಾಗಿದೆ.
 

Follow Us:
Download App:
  • android
  • ios