ಗೋಕಾಕ [ನ.17]:  ಗೋಕಾಕ ಉಪಚುನಾವಣೆಯಿಂದ ಹಿಂದೆ ಸರಿಯಲು ಹಣ ಪಡೆಯಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರು ಗಳಗಳನೆ ಅತ್ತ ಘಟನೆ ನಡೆದಿದೆ. ಮಾತ್ರವಲ್ಲ, ತಮ್ಮ ಬೆಂಬಲಿಗರ ನಡುವೆಯೇ ಎರಡು ಬಿಂದಿಗೆ ನೀರನ್ನು ಮೈಮೇಲೆ ಹಾಕಿಕೊಂಡು, ತಮ್ಮ ಮನೆ ದೇವರು ಸಂಗಮನಾಥನ ಮೇಲೆ ಪ್ರಮಾಣವನ್ನೂ ಮಾಡಿದ್ದಾರೆ.

ತಮ್ಮ ರಾಜಕೀಯ ಮುಂದಿನ ನಡೆ ಕುರಿತು ಬಿಜೆಪಿ ಮುಖಂಡ ಅಶೋಕ ಪೂಜಾರಿ ಶನಿವಾರ ಅಭಿಮಾನಿಗಳೊಂದಿಗೆ ಚಿಂತನ ಮಂಥನ ಸಭೆ ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ನನ್ನನ್ನು ಬುಕ್‌ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅಪ್ಪಿ ತಪ್ಪಿಯೂ ನಾನು ಯಾರಿಂದಲೂ ಹತ್ತು ಪೈಸೆಯನ್ನು ತೆಗೆದುಕೊಂಡಿಲ್ಲ ಎಂದು ದೇವರು ಮುಟ್ಟಿಪ್ರಮಾಣ ಮಾಡುತ್ತೇನೆ ಎಂದು ಕಣ್ಣೀರು ಹಾಕಿದರು. ಮಾತ್ರವಲ್ಲ, ನಾನು ಎಂದಿಗೂ ಹೊಂದಾಣಿಕೆ ಹಾಗೂ ಸೆಟ್ಟಿಂಗ್‌ ರಾಜಕಾರಣಿಯಲ್ಲ ಎಂದೂ ಸ್ಪಷ್ಟಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂರು ಚುನಾವಣೆಗಳಲ್ಲಿ 30 ಎಕರೆ ಹೊಲ ಮಾರಿ, ಕೋಟ್ಯಂತರ ಸಾಲ ಮಾಡಿಕೊಂಡಿದ್ದೇನೆ. ನಾನಾ ಗೊಂದಲಗಳ ನಡುವೆಯೂ ಸಾಕಷ್ಟುಜನರು ಬಂದಿದ್ದೀರಿ. ಇದು ಸಾಂಕೇತಿಕವಾದ ಸಭೆ ಮಾತ್ರ. ಒಂದು ವೇಳೆ ಸಾಕಷ್ಟುಜನರನ್ನು ಸೇರಿಸಬೇಕು ಎಂದು ಅಂದುಕೊಂಡಿದ್ದರೆ ಸಾಕಷ್ಟುಜನರನ್ನು ಕೂಡಿಸಬಹುದಿತ್ತು. ಹಣ ಇಲ್ಲದೆ ಸಾಕಷ್ಟುಜನರನ್ನು ಕೂಡಿಸುವ ಶಕ್ತಿ ತಮಗಿದೆ ಎಂದ ಅವರು, ಬೆಂಬಲಿಗರು, ಕಾರ್ಯಕರ್ತರ ತೀರ್ಮಾನದಂತೆ ಮುಂದಿನ ನಡೆ ನನ್ನದಾಗಿರುತ್ತದೆ ಎಂದು ಹೇಳಿದರು.

ಸಭೆಯ ನಂತರ ಗೋಕಾಕನ ದೇವಸ್ಥಾನಕ್ಕೆ ತೆರಳಿದ ಅಶೋಕ ಪೂಜಾರಿ ಅವರು ಅಲ್ಲಿ ಕಾರ್ಯಕರ್ತರ ನಡುವೆಯ ಎರಡು ಬಿಂದಿಗೆ ನೀರನ್ನು ಮೈಮೇಲೆ ಸುರಿದುಕೊಂಡರು. ಈ ವೇಳೆ ಗಳಗಳನೇ ಅತ್ತ ಅವರು, ನಾನು ಯಾರಿಂದಲೂ ಹಣ ಪಡೆದುಕೊಂಡಿಲ್ಲ. ಹೊಂದಾಣಿಕೆಯನ್ನೂ ಮಾಡಿಕೊಂಡಿಲ್ಲ. ಇಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಕಣ್ಣೀರು ಹಾಕಿದರು.