ರಾಮಕೃಷ್ಣ ದಾಸರಿ

ರಾಯಚೂರು(ಡಿ.07): ಚಳಿಗಾಲದ ಸಮಯದಲ್ಲಿ ಗ್ರಾಪಂಗಳಿಗೆ ಸಾರ್ವಜನಿಕ ಚುನಾವಣೆ ಘೋಷಣೆಯಾಗಿರುವುದು ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳ ಮೂಲಕ ಪೈಪೋಟಿಯ ಕಾವನ್ನುಂಟು ಮಾಡಿದೆ.

ಸ್ಥಾನಿಕ ಪ್ರತಿಷ್ಠೆ, ಜಾತಿ, ಸಮುದಾಯದಲ್ಲಿ ಏಳಿಗೆ, ರಾಜಕೀಯ ಬಲಾ-ಬಲಗಳ ನಡುವೆ ಜರುಗುತ್ತಿರುವ ಗ್ರಾಪಂ ಎಲೆಕ್ಷನ್‌ಗಳು ಜೋರು ಪಡೆಯುತ್ತಿವೆ. ಗ್ರಾಮಗಳಲ್ಲಿರುವ ಅಗಸೆ ಕಟ್ಟೆ, ದೇವಸ್ಥಾನ, ಮಂದಿರಗಳ ಆವರಣ, ಶಾಲೆ-ಕಾಲೇಜು ಮೈದಾನಗಳು, ಹೋಟೆಲ್‌ಗಳೆಲ್ಲಿ ಯಾರು ಯಾರು ಎಲ್ಲಿಂದ ಟಿಕೆಟ್‌ ಪಡೆದು ನಿಲ್ಲುತ್ತಿದ್ದಾರೆ. ಯಾವ ಪಕ್ಷ ಅವರಿಗೆ ಟಿಕೆಟ್‌ ಕೊಡುತ್ತಿದೆ, ಅವರ ಹಿಂದೆ ಯಾರಿದ್ದಾರೆ ಅವರು ಗೆದ್ದರೆ-ಸೋತರೆ ಮುಂದೇನು ಹೀಗೆ ಹತ್ತು ಹಲವು ರೀತಿಯಲ್ಲಿ ಚರ್ಚೆಗಳು ಸಾಗಲಾರಂಭಿಸಿವೆ.

ಜಿಲ್ಲೆಯಲ್ಲಿ ಎಲೆಕ್ಷನ್‌:

ರಾಯಚೂರು ಜಿಲ್ಲೆಯಲ್ಲಿ ಒಟ್ಟು 179 ಗ್ರಾಪಂಗಳಿವೆ ಅದರಲ್ಲಿ 176 ಗ್ರಾಪಂಗಳಿಗೆ ಚುನಾವಣೆ ನಡೆಯುತ್ತಿದ್ದು 3 ಗ್ರಾಪಂಗಳಿಗೆ ಕಾರಣಾಂತರಗಳಿಂದ ಚುನಾವಣೆ ಘೊಷಣೆಯಾಗಿಲ್ಲ. ಉಳಿದಂತೆ ಏಳು ತಾಲುಕುಗಳ 176 ಗ್ರಾಪಂಗಳ ಪೈಕಿ ಡಿ.22 ರಂದು 96 ಹಾಗೂ ಡಿ.27 ಕ್ಕೆ 80 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.

ಸಿಂಧನೂರು: ಹಸೆಮಣೆ ಏರಬೇಕಿದ್ದ ಮದುಮಗ ಅಕಾಲಿಕ ನಿಧನ

ಮೊದಲ ಹಂತದಲ್ಲಿ (ಡಿ.22 ರಂದು) ರಾಯಚೂರು ತಾಲೂಕಿನ 34, ದೇವದುರ್ಗದ 31, ಮಾನ್ವಿಯ 17 ಮತ್ತು ಸಿರವಾರದ 14 ಗ್ರಾಪಂಗಳು ಸೇರಿ ಒಟ್ಟು 96 ಗ್ರಾಪಂಗಳಿಗೆ ಅದೇ ರೀತಿ ಎರಡನೇ ಹಂತದಲ್ಲಿ (ಡಿ.27 ರಂದು) ಲಿಂಗಸುಗೂರಿನ 29, ಸಿಂಧನೂರಿನ 30 ಮತ್ತು ಮಸ್ಕಿಯ 21 ಸೇರಿ ಒಟ್ಟು 80 ಗ್ರಾಪಂಗಳಿಗೆ ಚುನಾವಣೆ ಜರುಗಲಿದೆ. ಮೊದಲ ಹಂತದ ಚುನಾವಣೆಗೆ ಸೋಮವಾರದಿಂದ ಅಧಿಸೂಚನೆ ಹೊರಡಿಸಲಿದ್ದು ಇದಾದ ಬಳಿಕ ನಾಮಪತ್ರಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಿಕೊಡಲಾಗುವುದು.

ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 1,265 ಒಟ್ಟು ಮೂಲ ಮತಗಟ್ಟೆಗಳನ್ನು 428 ಸಹಾಯಕ ಮತಗಟ್ಟೆಗಳು ಸೇರಿ ಒಟ್ಟು 1,693 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಏಳು ತಾಲೂಕುಗಳಲ್ಲಿ 5,52,684 ಪುರುಷರು, 5,75,290 ಮಹಿಳೆಯರು ಮತ್ತು 142 ಇತರರು ಸೇರಿ ಒಟ್ಟು 11,28,116 ಮತದಾರರು ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಸಿದ್ಧರಾಗಿದ್ದಾರೆ.

ಆಕಾಂಕ್ಷಿಗಳಿಂದ ಫುಲ್‌ ಪಾರ್ಟಿ:

ಚುನಾವಣೆಗೆ ನಿಂತು ಸ್ಥಾನಿಕ ಮಟ್ಟದಲ್ಲಿ ಅಧಿಕಾರ ನಡೆಸುವ ಆಶೆಯನ್ನು ಹೊಂದಿರುವ ಆಕಾಂಕ್ಷಿಗಳು ಈಗಾಗಲೇ ತಮ್ಮ ಆಪ್ತರು, ಬೆಂಬಲಿಗರು, ಅಭಿಮಾನಿಗಳು ಹಾಗೂ ಕುಲಸ್ಥರನ್ನು ಕೂಡಿಸಿಕೊಂಡು ಫುಲ್‌ ಪಾರ್ಟಿ ಮಾಡುತ್ತಿದ್ದಾರೆ. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಮೀಪದಲ್ಲಿರುವ ಡಾಭಾ, ರೆಸ್ಟೋರೆಂಟ್‌, ಬಾರ್‌,ಹೋಟೆಲ್‌ಗಳು ತುಂಬಿ ತುಳುಕುತ್ತಿದ್ದು, ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ಹಳ್ಳಿಗಳಲ್ಲಿಯ ರಾಜಕೀಯದ ಕಾವು ಚಳಿಗಾಲವನ್ನೇ ಮರೆಸುವಂತೆ ಮಾಡುವ ಲಕ್ಷಣಗಳು ಎಲ್ಲೆಡೆ ಗೋಚರಿಸಿವೆ.