ಕಲಬುರಗಿ, (ಏ.20): ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸುಲೇಪೇಟ್‍ನಲ್ಲಿ ನಡೆಯಬೇಕಿದ್ದ ಏ. 21 ರ ಮಂಗಳವಾರ  ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ರಥಕ್ಕೆ ಲಾಕ್‌ ಮಾಡಿದ್ದಾರೆ.

ಈಗಾಗ್ಲೇ ಕಲಬುರಗಿಯಲ್ಲಿ ಲಾಕ್​ಡೌನ್​ ಮಧ್ಯೆಯೂ ಚಿತ್ತಾಪುರ ತಾಲೂಕಿನ ರಾವೂರ್, ಮತ್ತು ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ಗ್ರಾಮಸ್ಥರು ಮಾಹಿತಿ ಕೊಡದೆ ರಥೋತ್ಸವ ಕಾರ್ಯಕ್ರಮ ನಡೆಸಿದ್ದರು.

ಮುನ್ನೆಚ್ಚರಿಕಾ ಕ್ರಮವಾಗಿ ರಥವನ್ನು ಮತ್ತು ದೇವಾಲಯವನ್ನು ಸೇಡಂ ಎಸಿ ರಮೇಶ್ ಕೋಲಾರ, ಚಿಂಚೋಳಿ ತಹಶೀಲ್ದಾರ್ ಅರುಣ ಕುಲಕರ್ಣಿ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದ್ದು, ದೇವಸ್ಥಾನದಲ್ಲಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. 

ಜಾತ್ರೆ ರದ್ದುಪಡಿಸಿದ್ದಲ್ಲದೆ ರಥವನ್ನೇ ಆಚೀಚೆ ಚಲಿಸದಂತೆ ಸಂಪೂರ್ಣವಾಗಿ 'ಲಾಕ್'ಡೌನ್ ಮಾಡಿದ್ದಾರೆ. ವೀರಭದ್ರೇಶ್ವರ ಮಂದಿರ ಪ್ರಾಂಗಣದಲ್ಲಿ ಇಡಲಾಗಿರುವ ರಥಕ್ಕೆ ಬ್ಯಾರಿಕೇಡ್ ಹಚ್ಚಿ ರಥ ಒಂದಿಂಚೂ ಚಲಿಸದಂತೆ ಸೀಲ್‍ಡೌನ್ ಮಾಡಲಾಗಿದೆಯಲ್ಲದೆ .ಈ ರಥದ ಪಕ್ಕದಲ್ಲೇ ಕಳೆದ 2 ದಿನದಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ವಾರದಲ್ಲೇ ಜಿಲ್ಲೆಯ ರಾವೂರ ಹಾಗೂ ಭೂಸನೂರಲ್ಲಿ ಲಾಕ್‍ಡೌನ್ ನಡುವೆಯೇ ರಥೋತ್ಸವ ನಡೆದು ನೂರಾರು ಜನರ ಮೇಲೆ ಪ್ರಕರಣ ದಾಖಲಾಗಿದ್ದಲ್ಲದೆ ಅನೇಕ ಅಧಿಕಾರಿಗಳು ಸಸ್ಪೆಂಡ್ ಆಗಿದ್ದರು. 

ಇವೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಚಿಂಚೋಳಿ ತಾಲೂಕು ಆಡಳಿತ ಒಂದು ಹೆಜ್ಜೆ ಮುಂದೋಗಿ ದೇವಾಲಯ ಆಡಳಿತ ಮಂಡಳಿಯ ಮಾತನ್ನೇ ನಂಬಿ ಕುಳಿತುಕೊಳ್ಳದೆ ರಥವನ್ನೇ ಲಾಕ್ ಮಾಡಿಬಿಟ್ಟಿದೆ.

ರಥಕ್ಕೆ ಹಗ್ಗದಿಂದ ಬಿಗಿದು, ಬ್ಯಾರಿಕೇಡ್ ಹಾಕಿ ರಥ ಚಲಿಸದಂತೆ ಸೀಲ್ ಡೌನ್ ಮಾಡಲಾಗಿದೆ. ಸುಲೇಪೇಟ್ ವೀರಭದ್ರೇಶ್ವರ ಜಾತ್ರೆ ಜಿಲ್ಲೆಯಲ್ಲೇ ಹೆಸರುವಾಸಿಯಾಗಿತ್ತು. ಸಾವಿರಾರು ಜನ ಸೇರುವ ಜಾತ್ರೆ ಇದಾಗಿರೋದರಿಂದ ಮುಂಜಾಗ್ರತೆಯಾಗಿ ಸೇಡಂ ಎಸಿ ರಮೇಶ್ ಕೋಲಾರ, ಚಿಂಚೋಳಿ ತಹಶಿಲ್ರ್ದಾ ಅರುಣ ಕುಲ್ಕರ್ಣಿ ನೇತೃತ್ವದಲ್ಲಿ ರಥ ಹಾಗೂ ದೇವಸ್ಥಾನವನ್ನೇ ಸೀಲ್ ಡೌನ್ ಮಾಡಲಾಗಿದೆ.

ಜಾತ್ರೆ ರದ್ದುಪಡಿಸಿರುವ ಬಗ್ಗೆ ದೇವಸ್ಥಾನ ಸಮೀತಿಯ ಪರವಾಗಿ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ ತಾಲೂಕು ಆಡಳಿತಕ್ಕೆ, ಪೊಲೀಸರಿಗೆ ಮುಚ್ಚಳಿಕೆ ಪತ್ರ ಸಹ ಬರೆದು ನೀಡಿದ್ದಾರೆ.