Bengaluru: ಸಿಲಿಕಾನ್ ಸಿಟಿಯ 5 ಪಿಎಫ್‌ಐ ಕಚೇರಿಗಳಿಗೆ ಖಾಕಿ ಬೀಗ: ಆಯುಕ್ತರ ಆದೇಶದಂತೆ ಕಾರ್ಯಾಚರಣೆ
ಕೇಂದ್ರ ನಿಷೇಧ ಹೇರಿದ ಬೆನ್ನಲ್ಲೇ ಕಾನೂನುಬಾಹಿರ ಚಟುವಟಿಕೆ (ಯುಎಪಿಎ) ಆರೋಪದಡಿ ಬೆಂಗಳೂರಿನಲ್ಲಿ ಪ್ರಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಸೇರಿದ ಐದು ಕಚೇರಿಗಳಿಗೆ ಪೊಲೀಸರು ಗುರುವಾರ ಬೀಗ ಹಾಕಿದ್ದಾರೆ.
ಬೆಂಗಳೂರು (ಸೆ.30): ಕೇಂದ್ರ ನಿಷೇಧ ಹೇರಿದ ಬೆನ್ನಲ್ಲೇ ಕಾನೂನುಬಾಹಿರ ಚಟುವಟಿಕೆ (ಯುಎಪಿಎ) ಆರೋಪದಡಿ ಬೆಂಗಳೂರಿನಲ್ಲಿ ಪ್ರಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಸೇರಿದ ಐದು ಕಚೇರಿಗಳಿಗೆ ಪೊಲೀಸರು ಗುರುವಾರ ಬೀಗ ಹಾಕಿದ್ದಾರೆ.
ಜೆ.ಸಿ.ನಗರದ ಎಸ್‌ಕೆ ಗಾರ್ಡನ್‌ನಲ್ಲಿ ಪಿಎಫ್‌ಐ ರಾಜ್ಯ ಕೇಂದ್ರ ಕಚೇರಿ, ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ಪಿಎಫ್‌ಐ ಮಾಧ್ಯಮ ಕೇಂದ್ರ, ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿ ಪಿಎಫ್‌ಐ ಸಹ ಸಂಘಟನೆಯಾದ ಎಂಪವರ್ ಆಫ್ ಇಂಡಿಯಾ ಫೌಂಡೇಷನ್ ಕಚೇರಿ, ಕ್ವಿನ್ಸ್ ರಸ್ತೆಯ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಚೇರಿ, ಟ್ಯಾನರಿ ರಸ್ತೆಯಲ್ಲಿರುವ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ) ಕಾರ್ಯಾಲಯ ಸೇರಿ ಐದು ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ.
ನಾನು ಪಿಎಫ್‌ಐ ಮೇಲಿನ ಕೇಸ್ ಹಿಂಪಡೆದಿಲ್ಲ: ಸಿದ್ದರಾಮಯ್ಯ
ಪಿಎಫ್‌ಐ ಹಾಗೂ ಅದರ ಸಹ ಸಂಘಟನೆಗಳನ್ನು ಐದು ವರ್ಷಗಳು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಬಳಿಕ ನಗರದಲ್ಲಿ ನಿಷೇಧಿತ ಸಂಘಟನೆಗಳಿಗೆ ನಿರ್ಬಂಧಿಸಲು ಆಯುಕ್ತರಿಗೆ ಡಿಸಿಪಿಗಳು ವರದಿ ಸಲ್ಲಿಸಿದರು. ಈ ವರದಿ ಆಧರಿಸಿ ಯುಎಪಿಎ ಕಾಯ್ದೆಯಡಿ ಪಿಎಫ್‌ಐ ಸಂಘಟನೆಗಳಿಗೆ ಬೀಗ ಹಾಕುವಂತೆ ಆಯುಕ್ತರು ಆದೇಶಿಸಿದ್ದರು. ಅಂತೆಯೇ ಗುರುವಾರ ಮಧ್ಯಾಹ್ನ ಐದು ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ.
ಪಿಎಫ್‌ಐ ಕಚೇರಿಗಳಲ್ಲಿ ಮಹಜರ್: ಇತ್ತೀಚೆಗೆ ರಾಜ್ಯದ ವಿವಿಧೆಡೆ ಬಂಧಿಸಿದ್ದ ಪಿಎಫ್‌ಐ ಸಂಘಟನೆಯ 15 ಮಂದಿ ಪ್ರಮುಖ ಮುಖಂಡರನ್ನು ಪ್ರತ್ಯೇಕವಾಗಿ ಕರೆದೊಯ್ದು ಪೂರ್ವ ವಿಭಾಗದ ಪೊಲೀಸರು ಗುರುವಾರ ಮಹಜರ್ ನಡೆಸಿದ್ದಾರೆ. ಬೆಂಗಳೂರಿನ ಬೆನ್ಸಿನ್ ಟೌನ್ ಹಾಗೂ ಹೆಬ್ಬಾಳದ ಮನೋರಾಯನಪಾಳ್ಯದ ಪಿಎಫ್‌ಐ ಕಚೇರಿಗಳಲ್ಲಿ ತನಿಖಾ ತಂಡ ಮಹಜರ್ ನಡೆಸಿದೆ. ಅಲ್ಲದೆ ಮಂಗಳೂರು, ಮೈಸೂರು, ಕಲುಬರಗಿ, ಶಿವಮೊಗ್ಗ ಹಾಗೂ ಕೊಪ್ಪಳ ಸೇರಿ 9 ಜಿಲ್ಲೆಗಳಲ್ಲಿ ಕೂಡಾ ಪಿಎಫ್‌ಐ ಕಚೇರಿಗಳಲ್ಲಿ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಎಫ್‌ಐ ಸಂಘಟನೆಯಲ್ಲಿ ಆಶ್ರಫ್ ಪ್ರಮುಖ ಪಾತ್ರ: ಇನ್ನು ದೆಹಲಿಯಲ್ಲಿ ಬಂಧಿಸಿ ಕರೆ ತಂದ ಮಂಗಳೂರಿನ ಎಂ.ಕೆ.ಆಶ್ರಫ್ ಪಿಎಫ್‌ಐ ಸಂಘಟನೆಯಲ್ಲಿ ಬಹುಮುಖಪಾತ್ರ ವಹಿಸಿದ್ದು, ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲಿ ಸಹ ಕೋಮು ಗಲಭೆ ಸೃಷ್ಟಿಸಲು ಆತ ಯತ್ನಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪಿಎಫ್‌ಐ ಸಹ ಸಂಘಟನೆ ಸಿಎಫ್‌ಐನ (ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯ) ಸಂಸ್ಥಾಪಕರ ಪೈಕಿ ಆಶ್ರಫ್ ಕೂಡಾ ಒಬ್ಬನಾಗಿದ್ದ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತವಾದವನ್ನು ಬೋಧಿಸಿ ಸಂಘಟನೆಗೆ ಆತ ಸೆಳೆಯುತ್ತಿದ್ದ. ಈ ಯುವಕರನ್ನು ಬಳಸಿಕೊಂಡು ಸಮಾಜದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡಲು ಹಾಗೂ ಕೋಮು ಗಲಭೆ ಸೃಷ್ಟಿಸುವುದು ಆತನ ಸಂಚಾಗಿತ್ತು. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿ ಇತರೆ ರಾಜ್ಯಗಳಲ್ಲಿ ಸಹ ಆಶ್ರಫ್ ಸಂಪರ್ಕ ಜಾಲ ಹೊಂದಿದ್ದ ಎಂದು ತಿಳಿದು ಬಂದಿದೆ.
ಹಿಂದುಗಳ ಹತ್ಯೆ ಮಾಡುವ ಪಿಎಫ್‌ಐ ನಿಷೇಧ ಸರಿ: ಸಚಿವ ಕೋಟ
ಪಿಎಫ್‌ಐ ಆಸ್ತಿ ಜಪ್ತಿ ಪ್ರಕ್ರಿಯೆ ಆರಂಭ: ಪಿಎಫ್‌ಐ ಸಂಘಟನೆಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಪರಿಶೀಲಿಸಿ ಜಪ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಆಸ್ತಿ ಮುಟ್ಟುಗೋಲು ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಇನ್ನುಮುಂದೆಯೂ ಆ ಸಂಘಟನೆಯ ಪ್ರತಿಯೊಬ್ಬ ಸದಸ್ಯನ ಚಲನವಲನದ ಮೇಲೆ ಕಣ್ಣಿಡಲಾಗುತ್ತದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.