ಬೆಂಗಳೂರು [ಫೆ.29]:  ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಕುರಿತ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ’ ಎಂಬ ಫಲಕ ಹಿಡಿದುಕೊಂಡಿದ್ದ ಆರೋಪಿ ಆದ್ರ್ರಾಗೆ ತನಿಖೆಯ ಈ ಹಂತದಲ್ಲಿ ಜಾಮೀನು ಮಂಜೂರು ಮಾಡದಂತೆ ಎಸ್‌.ಜೆ. ಪಾರ್ಕ್ ಪೊಲೀಸರು ನ್ಯಾಯಾಲಯದ ಮುಂದೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಜಾಮೀನು ಕೋರಿ ಆದ್ರ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ನಗರದ 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿರುವ ಪೊಲೀಸರ ಪರ ವಕೀಲರು, ‘ಅರ್ಜಿದಾರರು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವುದು, ಸರ್ಕಾರ ವಿರುದ್ಧ ಗದ್ದಲವೆಬ್ಬಿಸಿದ ಆರೋಪ ಎದುರಿಸುತ್ತಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ಸೃಷ್ಟಿಸಲು ಪ್ರಯತ್ನ ಮಾಡಿರುವ ಆರೋಪವಿದೆ.ಅಲ್ಲದೆ, ತನಿಖೆ ಪ್ರಗತಿಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು’ ಎಂದು ಕೋರಿದ್ದಾರೆ.

ಹತ್ಯೆ ಸಂಚು: ಮಂಗಳೂರು ಖಾಝಿ ಬೆನ್ನಿಗೆ ನಿಂತ ಗೃಹಮಂತ್ರಿ ಬೊಮ್ಮಾಯಿ...

ಇದಕ್ಕೂ ಮುನ್ನ ವಾದ ಮಂಡಿಸಿದ ಆದ್ರ್ರಾ ಪರ ವಕೀಲ ಬಿ.ಎನ್‌.ಜಗದೀಶ್‌, ಅರ್ಜಿದಾರರ ವಿರುದ್ಧ ಗಂಭೀರವಾದ ಆರೋವಿಲ್ಲ. ಮೂರು ವರ್ಷ ಮಾತ್ರ ಶಿಕ್ಷೆಯಾಗುವಂತಹ ಆರೋಪವಾಗಿದೆ. ಅಲ್ಲದೆ, ಮ್ಯಾಜಿಸ್ಪ್ರೇಟ್‌ ಅವರು ಜಾಮೀನು ನೀಡಬಹುದಾದ ಪ್ರಕರಣವಾಗಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿ ನ್ಯಾಯಾದೀಶರು ವಿಚಾರಣೆಯನ್ನು ಶನಿವಾರ (ಫೆ.29)ಕ್ಕೆ ಮುಂದೂಡಿತು.