ಐಎಸ್‌ಡಿ ಇನ್‌ಸ್ಪೆಕ್ಟರ್‌ ಮನೆ ಸೇರಿದಂತೆ ಅವರ ಸಹೋದರರ ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು 

ಆನೇಕಲ್‌(ಸೆ.25): ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಜಮೀನೊಂದರ ದಾಖಲೆಯನ್ನು ನಕಲು ಮಾಡಿ ಮಾರಾಟ ಮಾಡಿದ್ದಾರೆ ಎಂಬ ಅರೋಪದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ತೋಗೂರು ಗ್ರಾಮ ಪಂಚಾಯಿತಿಯ ಬಸವನಪುರದಲ್ಲಿ ಐಎಸ್‌ಡಿ ಇನ್‌ಸ್ಪೆಕ್ಟರ್‌ ಮನೆ ಸೇರಿದಂತೆ ಅವರ ಸಹೋದರರ ಮನೆಯ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬಸವಪುರ ನಿವಾಸಿ, ವಕೀಲ ಪ್ರವೀಣ್‌, ಇವರ ಸಹೋದರರಾದ ಗ್ರಾಮ ಪಂಚಾಯಿತಿ ಅನಿಲ್‌ ಕುಮಾರ್‌, ಇನ್‌ಸ್ಪೆಕ್ಟರ್‌ ಕಿಶೋರ್‌ ಕುಮಾರ್‌ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ. ಗ್ರಾಮಾಂತರ ಅಧೀಕ್ಷಕ ಲಕ್ಷ್ಮೇನಾರಾಯಣ್‌ ಹಾಗೂ ವ್ಯಾಪ್ತಿಯ ಜಿಗಣಿ, ಅತ್ತಿಬೆಲೆ, ಸೂರ್ಯನಗರ, ಹೆಬ್ಬಗೋಡಿ ಠಾಣೆಯ ವೃತ್ತ ನಿರೀಕ್ಷಕರ ತಂಡ ದಾಳಿ ನಡೆಸಿತು.

ಗಾಂಜಾ ಮಾಫಿಯಾದಿಂದ ದಾಳಿ: ಕಲಬುರಗಿ ಇನ್ಸ್‌ಪೆಕ್ಟರ್‌ ಗಂಭೀರ..!

ಸಹೋದರರು ಆನೇಕಲ್‌ ತಾಲೂಕಿನ ರಾಚಮಾನಹಳ್ಳಿ ಹಾಗೂ ಎಂ.ಮೇಡಿಹಳ್ಳಿಯ ಸರ್ವೆ ನಂಬರ್‌ಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದಾರೆ ಎಂದು ಶ್ರೀಧರ್‌ ಎಂಬುವವರು ದೂರು ನೀಡಿದ್ದರು. ಇದರ ಆಧಾರದ ಮೇಲೆ ವಕೀಲ ಮಂಜುನಾಥ, ಆಯುಷ್‌, ಚಂದ್ರಮೋಹನ್‌, ಶ್ರೀನಿವಾಸ್‌ ಪೃಥ್ವಿನ್‌, ನಿರ್ಮಲ್‌ದೌಲತ್‌, ಶಿವಪುತ್ರ ತಂಗ ಎಂಬುವವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು. ಪೃಥ್ವಿನ್‌ ಹೇಳಿಕೆ ಆಧರಿಸಿ ಸಹೋದರರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್‌ ಬಾಲದಂಡೆ ಮಾರ್ಗದರ್ಶನದಲ್ಲಿ ಅರೋಪಿಗಳ ವಿಚಾರಣೆ ನಡೆಸಿದಾಗ ಇನ್‌ಸ್ಪೆಕ್ಟರ್‌ ಕಿಶೋರ್‌ ಹೆಸರು ಕೇಳಿ ಬಂದು ಸಚ್‌ರ್‍ ವಾರೆಂಟ್‌ ಹೊರಡಿಸಲಾಗಿತ್ತು. ಸುಮಾರು 4 ಗಂಟೆ ತಪಾಸಣೆ ನಡೆಸಿದ ಪೊಲೀಸರ ತಂಡ ಕಂದಾಯ ಅಧಿಕಾರಿಗಳನ್ನು ಕರೆಸಿಕೊಂಡು ಸ್ಥಳ ಮಹಜರು ನಡೆಸಿದರು.

ತೋಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್‌ ಕುಮಾರ್‌ ಮಾತನಾಡಿ, ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ. ನಾವು ಕಾನೂನನ್ನು ಗೌರಸುತ್ತೇವೆ. ನಮ್ಮ ಮನೆಗೆ ಪೊಲೀಸ್‌ ಅಧಿಕಾರಿಗಳು ಬಂದು ನೋಟಿಸ್‌ ತೋರಿಸಿದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ನಮ್ಮ ಅಣ್ಣ ಕಿಶೋರ್‌ಕುಮಾರ್‌ ಅವರು ಡಿವೈಎಸ್ಪಿ ಕಚೇರಿಗೆ ತೆರಳಿ ಹೇಳಿಕೆ ನೀಡಿ ಅವಶ್ಯಕತೆ ಇದ್ದಲ್ಲಿ ಬರುವುದಾಗಿ ತಿಳಿಸಿದ್ದಾರೆ. ಏನೂ ತಿರುಳಿಲ್ಲದ ಈ ಪ್ರಕರಣದಲ್ಲಿ ಐದಾರು ಇನ್‌ಸ್ಪೆಕ್ಟರ್‌, ಸಿಬ್ಬಂದಿ, ಹತ್ತಾರು ವಾಹನಗಳು ಬಂದು ನಾವು ಹುಟ್ಟಿಬೆಳೆದ ಊರಿನಲ್ಲಿ ನಮ್ಮ ಗೌರವಕ್ಕೆ ಕುಂದು ಬರುವಂತೆ ಮಾಡಿರುವುದು ನೋವಿನ ಸಂಗತಿಯಾಗಿದೆ. ಕಾನೂನು ರೀತ್ಯ ನ್ಯಾಯ ಪಡೆಯುವುದಾಗಿ ಹೇಳಿದರು.