ಹೂವಿನಹಡಗಲಿ(ಫೆ.15): ತಾಲೂಕಿನ ತುಂಗಭದ್ರಾ ನದಿ ತೀರದ ಮೈಲಾರ-ಗುತ್ತಲ ಸೇತುವೆಯ ಕೆಳಗಡೆ ಅಕ್ರಮ ಮರಳು ಗಣಿಗಾರಿಕೆ ನಡೆಸಿ ತೆಪ್ಪಗಳ ಮೂಲಕ ಸಾಗಣೆ ಮಾಡುತ್ತಿದ್ದ ವೇಳೆ, ಅಧಿಕಾರಿಗಳು ದಾಳಿ ನಡೆಸಿದ್ದು, 27 ಕಬ್ಬಿಣ ತೆಪ್ಪಗಳು ಮತ್ತು 40 ಬಿದಿರಿನ ಬಂಬುಗಳನ್ನು ವಶಪಡಿಸಿಕೊಂಡಿದ್ದಾರೆ.

ಹತ್ತಾರು ಬಾರಿ ಹೂವಿನಹಡಗಲಿ ತಾಲೂಕಿನ ಅಧಿಕಾರಿಗಳು ಮರಳು ಅಕ್ರಮ ದಂಧೆಕೋರರ ವಿರುದ್ಧ ದಾಳಿ ಮಾಡಿ ಲಕ್ಷಾಂತರ ರುಪಾಯಿಗಳ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಹಾವೇರಿ ತಾಲೂಕಿನ ಅರಳಿಹಳ್ಳಿ, ಹುಳ್ಯಾಳ, ಕಂಚರಗಟ್ಟಿಇತರ ಗ್ರಾಮಗಳ ಮರಳು ದಂಧೆಕೋರರು ಹಾಡುಹಗಲೇ ಮರಳು ಲೂಟಿ ಮಾಡುತ್ತಿದ್ದರೂ ಹಾವೇರಿ ಜಿಲ್ಲಾಡಳಿತ ಈ ವರೆಗೂ ಜಂಟಿ ದಾಳಿಯಲ್ಲಿ ಭಾಗವಹಿಸುತ್ತಿಲ್ಲ, ಇದರಿಂದ ಹಡಗಲಿ ಭಾಗದ ಮರಳು ಅಪಾರ ಪ್ರಮಾಣದಲ್ಲಿ ಲೂಟಿಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಈ ಹಿಂದೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಹಿರಿಯ ಪೊಲೀಸ್‌ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜಂಟಿ ದಾಳಿ ಮಾಡಿದ್ದ ಸಂದರ್ಭದಲ್ಲಿ ಹಾವೇರಿ ಹಾಗೂ ರಾಣಿಬೆನ್ನೂರು ತಾಲೂಕಿನ ಹೊರ ವಲಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಜಪ್ತಿ ಮಾಡಿದ್ದರು.

ಕೂಡ್ಲಿಗಿ ಬಳಿ ಲಾರಿ ಪಲ್ಟಿ: ರಸ್ತೆ ತುಂಬಾ ಚೆಲ್ಲಾಡಿದ ಎಳನೀರು

ಈ ವರೆಗೂ ನಡೆದ ಮರಳು ಅಕ್ರಮ ದಾಳಿಯಲ್ಲಿ ಕೇವಲ ಕಬ್ಬಿಣದ ಹಾಗೂ ಬಿದಿರಿನ ತೆಪ್ಪಗಳನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಆದರೆ, ಮರಳು ಲೂಟಿ ಮಾಡುತ್ತಿರುವ ದಂಧೆಕೋರರು ಮಾತ್ರ ಸಿಕ್ಕಿಲ್ಲ. ಹೂವಿನಹಡಗಲಿ ತಾಲೂಕಿನ ಭಾಗದಿಂದ ದಾಳಿ ಮಾಡಿದಾಗ, ಹಾವೇರಿ ಜಿಲ್ಲೆಯ ಕಡೆಗೆ ನದಿಯಲ್ಲಿ ಈಜಿ ಪರಾರಿಯಾಗುತ್ತಿದ್ದಾರೆ. ಆದರಿಂದ ಇದಕ್ಕೆ ಇತಿಶ್ರೀ ಹಾಡಲು ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆದಾಗ ಮಾತ್ರ ತಕ್ಕಮಟ್ಟಿಗೆ ತಡೆಗಟ್ಟಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಹರಪನಹಳ್ಳಿ ಉಪವಿಭಾಗದ ಉಪಅಧೀಕ್ಷಕ ಹಾಲಮೂರ್ತಿರಾವ್‌ ನೇತೃತ್ವದಲ್ಲಿ ಹೂವಿನಹಡಗಲಿ ಸಿಪಿಐ ಕೆ. ರಾಮರೆಡ್ಡಿ, ಹಿರೇಹಡಗಲಿ ಪಿಎಸ್‌ಐ ದಾದಾವಲಿ ಮತ್ತು ತಂಡ ನುರಿತ ಈಜುಗಾರರೊಂದಿಗೆ ಕಾರ್ಯಾಚರಣೆ ನಡೆಸಿದರು. ಈ ವೇಳೆ ಅಕ್ರಮ ಮರಳು ಸಾಗಣೆ ಬಳಸುತ್ತಿದ್ದ . 4 ಲಕ್ಷಗಳ ಮೌಲ್ಯದ 27 ತೆಪ್ಪಗಳು ಹಾಗೂ ಇದಕ್ಕೆ ಸಂಬಂ​ಧಿಸಿದ 40 ಬಿದಿರಿನ ಬಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ತಂಡದಲ್ಲಿ ಸಿಬ್ಬಂದಿ ಅಣ್ಣಿ ಜಾತಪ್ಪ, ಶ್ರೀಶೈಲ, ಸುರೇಶ, ಪ್ರಭಾಕರ, ಅಶೋಕ, ಶಿವಪ್ಪ ಇತರರಿದ್ದರು. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.