Asianet Suvarna News Asianet Suvarna News

ಬೆಂಗ್ಳೂರಲ್ಲಿ ಸಾಲು ಸಾಲು ದುರಂತ: ಗೋಡೌನ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

*  ಪಟಾಕಿ ಸ್ಫೋಟಿಸಿದ ನ್ಯೂ ತರಗುಪೇಟೆಯ ದುರ್ಘಟನೆ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು
*  ಅಕ್ರಮವಾಗಿ ಸಂಗ್ರಹಿಸಿದ್ದ ಸಿಲಿಂಡರ್‌ವಶ
*  ಘಟನೆ ಮರುಕಳಿಸಿದರೆ ಅಧಿಕಾರಿಗಳೇ ಹೊಣೆ
 

Police Raid on Godowns in Bengaluru grg
Author
Bengaluru, First Published Sep 25, 2021, 2:52 PM IST

ಬೆಂಗಳೂರು(ಸೆ.25): ನ್ಯೂ ತರಗುಪೇಟೆಯ ಪಟಾಕಿ ಗೋದಾಮಿನಲ್ಲಿ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್‌(Police) ಆಯುಕ್ತ ಕಮಲ್‌ ಪಂತ್‌ ಅವರು, ನಗರ ವ್ಯಾಪ್ತಿಯ ಎಲ್ಲ ಪಟಾಕಿ ಅಂಗಡಿಗಳು ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಿಸಿಪಿಗಳಿಗೆ ಸೂಚಿಸಿದ್ದಾರೆ.

ಇದರ ಬೆನ್ನಲ್ಲೇ ಪೊಲೀಸರು ಅಕ್ರಮ ದಾಸ್ತಾನುಗಳ ಮೇಲೆ ನಿಗಾ ವಹಿಸಿ, ತರಗುಪೇಟೆ ಸೇರಿ ಸುತ್ತಮುತ್ತಲಿನಲ್ಲಿರುವ ಗೋದಾಮುಗಳ(Godown) ಮೇಲೆ ಶುಕ್ರವಾರ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ತಮಿಳುನಾಡು ಹಾಗೂ ಇನ್ನಿತರ ಕಡೆಯಿಂದ ಕಡಿಮೆ ಬೆಲೆಗೆ ಪಟಾಕಿಗಳನ್ನು ತಂದು ಅಕ್ರಮ ದಾಸ್ತಾನು ಮಾಡುತ್ತಿರುವ ಗೋದಾಮುಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ದಸರಾ, ದೀಪಾವಳಿ ಹಬ್ಬಗಳಲ್ಲಿ ಪಟಾಕಿ ಹೊಡೆಯುವುದು ವಾಡಿಕೆ. ಇದಕ್ಕಾಗಿ ಮಾರಾಟಗಾರರ ಪಟಾಕಿಯನ್ನು ದಾಸ್ತಾನು ಮಾಡುತ್ತಾರೆ. ಎನ್‌ಟಿಪೇಟೆ, ಕಾಟನ್‌ಪೇಟೆ ಸೇರಿದಂತೆ ದಾಸ್ತಾನು ಗೋದಾಮುಗಳ ಮೇಲೆ ದಿಢೀರ್‌ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಗೋದಾಮಿಗೆ ಮಾಲೀಕರು ಪರವಾನಿಗೆ ಪಡೆದುಕೊಂಡಿದ್ದಾರಾ? ದಾಸ್ತಾನಿನಲ್ಲಿ ಅಕ್ರಮವಾಗಿ ಏನಾದರೂ ಸ್ಫೋಟಕ ಇಡಲಾಗಿದೆಯಾ ಎಂಬುದರ ಬಗ್ಗೆ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಅಕ್ರಮವಾಗಿ ಸಂಗ್ರಹಿಸಲಾಗಿದ್ದ 16 ಸಿಲಿಂಡರ್‌ ವಶ:

ಬಾಲಾಜಿ ಕಾಫಿ ಟ್ರೇಡಿಂಗ್‌ ಕಂಪನಿಯ ಮೇಲೆ ದಾಳಿಸಿದಾಗ ಮೇಲ್ನೋಟಕ್ಕೆ ಅಕ್ರಮವಾಗಿ ಇರಿಸಲಾಗಿದ್ದ 40 ಕೆಜಿ ತೂಕದ 16 ಭಾರತ್‌ ಗ್ಯಾಸ್‌ ಸಿಲಿಂಡರ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಸಂಗ್ರಹಿಸಲಾಗಿದ್ದ 16 ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಮೂಲಕ ನಡೆಯಬಹುದಾಗಿದ್ದ ಮತ್ತೊಂದು ದೊಡ್ಡ ದುರಂತವನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ತರಗುಪೇಟೆಯಲ್ಲಿ ನಿಗೂಢ ಸ್ಫೋಟ: ಮೂವರು ಸಾವು, ಗಾಯಾಳುಗಳ ಸ್ಥಿತಿ ಗಂಭೀರ

ಘಟನೆ ಮರುಕಳಿಸಿದರೆ ಅಧಿಕಾರಿಗಳೇ ಹೊಣೆ

ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಡಿಸಿಪಿ ಮೇಲ್ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಭೆಯಲ್ಲಿ ಪೊಲೀಸ್‌ ಆಯುಕ್ತರು ಪಟಾಕಿ ಗೋದಾಮಿನಲ್ಲಿ ಗುರುವಾರ ಸಂಭವಿಸಿದ್ದ ಸ್ಫೋಟದ ವಿಷಯ ಸಹ ಪ್ರಸ್ತಾಪಿಸಿದ್ದಾರೆ.
ಪ್ರತಿ ಠಾಣಾ ವ್ಯಾಪ್ತಿಯಲ್ಲಿರುವ ಪಟಾಕಿಗಳ ಅಂಗಡಿಗಳು ಹಾಗೂ ಗೋದಾಮುಗಳನ್ನು ಕೂಡಲೇ ತಪಾಸಣೆ ನಡೆಸಬೇಕು. ಪಟಾಕಿ ವ್ಯಾಪಾರಿಗಳು ಸುರಕ್ಷತಾ ನಿಯಮಗಳು ಹಾಗೂ ಪರವಾನಿಗೆ ಪಡೆದಿರುವ ಬಗ್ಗೆ ಪರಿಶೀಲಿಸಬೇಕು. ಏನಾದರೂ ಕಾನೂನು ಬಾಹಿರವಾಗಿ ಗೋದಾಮು ತೆರೆದಿದ್ದರೆ ಕ್ರಮ ಜರುಗಿಸಬೇಕು ಎಂದು ಆಯುಕ್ತರು ಹೇಳಿದ್ದಾರೆ.

ಅಲ್ಲದೆ, ಪಟಾಕಿ ಗೋದಾಮುಗಳ ಪರಿಶೀಲನೆ ಬಳಿಕ ವರದಿಯನ್ನು ಕಚೇರಿಗೆ ಕಳುಹಿಸಬೇಕು. ಇನ್ನೊಂದು ವಾರದಲ್ಲಿ ಎಲ್ಲ ಪಟಾಕಿಗಳ ಅಂಗಡಿಗಳ ತಪಾಸಣೆ ಮುಗಿಯಬೇಕು. ಮುಂದೆ ನ್ಯೂ ತರಗುಪೇಟೆ ರೀತಿಯ ಘಟನೆ ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದು ಕಮಲ್‌ ಪಂತ್‌ ಎಚ್ಚರಿಕೆ ನೀಡಿದರು ಎನ್ನಲಾಗಿದೆ.
 

Follow Us:
Download App:
  • android
  • ios