ನಾಪತ್ತೆಯಾಗಿದ್ದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯನ್ನು ಸಾಮಾಜಿಕ ಜಾಲತಾಣದಲ್ಲಿನ ಫೋಟೋದಿಂದ ಪತ್ತೆ ಹಚ್ಚಿ ಆಕೆಯ ಪೋಷಕರ ಮಡಿಲಿಗೆ ಆಟೋ ಚಾಲಕರೊಬ್ಬರು ಸುರಕ್ಷಿತವಾಗಿ ಸೇರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು(ಜ.10): ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯನ್ನು ಸಾಮಾಜಿಕ ಜಾಲತಾಣದಲ್ಲಿನ ಫೋಟೋದಿಂದ ಪತ್ತೆ ಹಚ್ಚಿ ಆಕೆಯ ಪೋಷಕರ ಮಡಿಲಿಗೆ ಆಟೋ ಚಾಲಕರೊಬ್ಬರು ಸುರಕ್ಷಿತವಾಗಿ ಸೇರಿಸಿದ ಘಟನೆ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಕೆಂಗುಂಟೆಯ ನಿವಾಸಿ ಬಾಲಕಿ ಕಣ್ಮರೆಯಾಗಿದ್ದು, ಬಾಲಕಿಯನ್ನು ರಕ್ಷಿಸಿದ ಆಟೋ ಚಾಲಕ ಸೋಮಶೇಖರ್‌ ಅವರನ್ನು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಅಭಿನಂದಿಸಿದ್ದಾರೆ.

ಎರಡು ದಿನಗಳ ಹಿಂದೆ ಶಾಲೆಗೆ ಚಕ್ಕರ್‌ ಹಾಕಿ ಮಾಲ್‌ಗೆ ಸ್ನೇಹಿತರ ಜತೆ ಬಾಲಕಿ ತೆರಳಿದ್ದಳು. ಈ ವಿಚಾರ ಗೊತ್ತಾಗಿ ಶಾಲೆಯ ಪ್ರಾಂಶುಪಾಲರು, ಶಾಲೆಗೆ ಆಕೆಯ ಪೋಷಕರನ್ನು ಕರೆಸಿ ಬುದ್ಧಿಮಾತು ಹೇಳಿದ್ದರು. ಇದರಿಂದ ಬೇಸರಗೊಂಡ ಆಕೆ, ಮನೆ ಬಿಟ್ಟು ಹೋಗಿದ್ದಳು. ಮಗಳ ಪತ್ತೆಗೆ ಹುಡುಕಾಡಿದ ಪೋಷಕರು, ಕೊನೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸ್ಯಾಂಟ್ರೋ ರವಿ ಪತ್ನಿ ಬಂಧಿಸಿದ್ದ ಇನ್‌ಸ್ಟೆಕ್ಟರ್‌ಗೆ ಕುತ್ತು..!

ಆಟೋ ಚಾಲಕನ ಸಮಯಪ್ರಜ್ಞೆಯಿಂದ ಅಂತಿಮವಾಗಿ ಬಾಲಕಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾರೆ. ಆಟೋ ಚಾಲಕ ಸೋಮಶೇಖರ್‌ ಕಾರ್ಯವನ್ನು ಶ್ಲಾಘಿಸಿದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಅವರು, ತಮ್ಮ ಕಚೇರಿಗೆ ಕರೆಸಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಈ ವೇಳೆ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್‌ಪೆಕ್ಟರ್‌ ರಾಮಮೂರ್ತಿ ಇದ್ದರು.

ವಾಟ್ಸಾಪಿಂದ ಬಾಲಕಿ ನಾಪತ್ತೆಯ ಮಾಹಿತಿ

ಬಾಲಕಿ ಕಾಣೆಯಾಗಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಪ್ರಚಾರವಾಗಿತ್ತು. ಈ ಫೋಟೋ ನೋಡಿದ್ದ ಆಟೋ ಚಾಲಕ ಸೋಮಶೇಖರ್‌ ಅವರು, ಗೊರಗುಂಟೆ ಪಾಳ್ಯ ದ ಬಸ್‌ ನಿಲ್ದಾಣದಲ್ಲಿ ಬಾಲಕಿಯನ್ನು ಸೋಮವಾರ ನೋಡಿದ್ದಾರೆ. ಕೂಡಲೇ ವಾಟ್ಸ್‌ ಆ್ಯಪ್‌ನಲ್ಲಿ ಸ್ನೇಹಿತರಿಂದ ಬಂದಿದ್ದ ಪೋಟೋಗೂ ಬಾಲಕಿ ಸಾಮ್ಯತೆ ಪತ್ತೆ ಹಚ್ಚಿದ ಅವರು, ಕೂಡಲೇ ವಾಟ್ಸ್‌ ಆ್ಯಪ್‌ನಲ್ಲಿ ಬಾಲಕಿ ಪೋಷಕರ ಮೊಬೈಲ್‌ ನಂಬರ್‌ ಹುಡುಕಿ ಕರೆ ಮಾಡಿದ್ದಾರೆ.