ಬೆಂಗಳೂರು(ಏ.26): ಕರ್ಫ್ಯೂ ನಡುವೆ ಸರಳವಾಗಿ ವಿವಾಹ ಮಾಡಿಕೊಳ್ಳಲು ತೆರಳುತ್ತಿದ್ದ ವರನನ್ನು ತಡೆದ ಪೊಲೀಸರು, ಮದುವೆ ಆಗುತ್ತಿರುವುದು ಖಚಿತ ಪಡಿಸಿಕೊಂಡ ಬಳಿಕ ಶುಭಕೋರಿ ಕಳುಹಿಸಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ವಿವಾಹ ಸಮಾರಂಭಕ್ಕೆ ಸರ್ಕಾರ ಜನರನ್ನು ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಆಡಂಬರ ಇಲ್ಲದೆ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವರನನ್ನು ಅಡ್ಡಿಪಡಿಸಿದ ಮಾಗಡಿ ರಸ್ತೆಯ ಪೊಲೀಸರು, ಕರ್ಫ್ಯೂ  ನಡುವೆ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

ಇದಕ್ಕೆ ಪ್ರತಿಕ್ರಿಯಿಸಿದ ಮಧುಮಗ, ಇಂದು ನನ್ನ ವಿವಾಹ, ದೇವಸ್ಥಾನದಲ್ಲಿ ಮದುವೆ ಆಗುತ್ತಿದ್ದೇನೆ. ನಮ್ಮ ತಂದೆಯವರೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದೇನೆ ವಿವರಿಸಿದರು. ಇದನ್ನು ಒಪ್ಪದ ಪೊಲೀಸರು ದಂಡ ವಿಧಿಸಲು ಮುಂದಾದರು. ಮೂಹೂರ್ತಕ್ಕೆ ಸಮಯ ಮೀರುತ್ತಿದೆ ಎಂದರೂ ಪೊಲೀಸರು ಕನಿಕರ ತೋರಲಿಲ್ಲ. ಬಳಿಕ ಮಧುಮಗನ ಸಂಬಂಧಿಕರು ವಿವಾಹದ ಅಹ್ವಾನ ಪತ್ರಿಕೆಯನ್ನು ತಂದು ಪೊಲೀಸರಿಗೆ ತೋರಿಸಿದರು. ವರನ ಹೆಸರನ್ನು ಖಚಿತಪಡಿಸಿಕೊಂಡ ಪೊಲೀಸರು ಶುಭಕೋರಿ ಕಳುಹಿಸಿದರು ಎಂದು ವರನ ಸಂಬಂಧಿಕರು ಮಾಧ್ಯಮಗಳಿಗೆ ವಿವರಿಸಿದರು.

ನಾಲ್ಕು ಲಕ್ಷ ನಷ್ಟ

ಕೊರೋನಾ ಎರಡನೆ ಅಲೆ ಬರುವ ಮುನ್ನ ನಿಗದಿಯಾಗಿದ್ದ ವಿವಾಹ ಕಾರ್ಯಕ್ರಮದಿಂದ ಸುಮಾರು ನಾಲ್ಕು ಲಕ್ಷ ರುಪಾಯಿ ಮುಂಗಡವಾಗಿ ವ್ಯಯ ಮಾಡಿದ್ದ ಕುಟುಂಬವೊಂದು ಕೈ ಸುಟ್ಟುಕೊಂಡಿರುವ ಘಟನೆ ನಡೆದಿದೆ. ವಿವಾಹಕ್ಕೆ ದೊಡ್ಡ ಕಲ್ಯಾಣ ಮಂಟಪ ನೋಂದಣಿ ಮತ್ತು ಮಂಟಪ ಶೃಂಗರಿಸಲು .1.20 ಲಕ್ಷ ಮುಂಗಡವಾಗಿ ವೆಚ್ಚ ಮಾಡಲಾಗಿತ್ತು. ಆದರೆ, ಏಕಾಏಕಿ 50 ಜನಕ್ಕೆ ಮೀಸಲಾಗಿಸಿದ್ದ ಪರಿಣಾಮ ಹೆಚ್ಚು ಜನ ಮದುವೆಗೆ ಬಂದಿಲ್ಲ. ಇದರಿಂದ ಒಟ್ಟು 4 ಲಕ್ಷ ನಷ್ಟ ಅನುಭವಿಸಿದಂತಾಗಿದೆ ಎಂದು ಕುಟುಂಬವೊಂದು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿತು.