ಯಾದಗಿರಿ: ಗ್ಯಾಸ್ ಏಜೆನ್ಸಿ ಪ್ರಭಾವಕ್ಕೆ ಮಣಿಯಿತೇ ಪೊಲೀಸ್?
15 ಜನರ ಬಲಿ ಪಡೆದ ದೋರನಹಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ, ಗ್ಯಾಸ್ ಏಜೆನ್ಸಿಗೆ ಕ್ಲೀನ್ ಚಿಟ್: ದೂರುದಾರನೇ ಆರೋಪಿ. ಸತ್ತವರಿಗೆ ಕೋಟ್ಯಂತರ ರು.ಗಳ ಇನ್ಸೂರೆನ್ಸ್ ನೀಡಬೇಕಾಗುತ್ತದೆಂದು ಪ್ರಭಾವಿ ಕೈವಾಡ.
ಯಾದಗಿರಿ(ಜ.07): ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಕ್ಯಾಂಪಿನ ಮನೆಯೊಂದರಲ್ಲಿ, ಕಳೆದ ವರ್ಷ ಫೆ.25ರಂದು ಸಂಭವಿಸಿದ್ದ ಭೀಕರ ಅಡುಗೆ ಅನಿಲ ಸೋರಿಕೆಯಿಂದಾದ ಅಗ್ನಿ ಅನಿಲ ದುರಂತದಲ್ಲಿ, ಗ್ಯಾಸ್ ಏಜೆನ್ಸಿ ವಿರುದ್ಧ ದೂರು ದಾಖಲಾದರೂ, ನೊಂದವರಿಗೆ ನ್ಯಾಯ ಕೊಡಿಸಬೇಕಾದ ಖಾಕಿಪಡೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ದೂರು ನೀಡಿದ ಸಂತ್ರಸ್ತರನ್ನೇ ದೋಷರನ್ನಾಗಿಸಿ, ಏಜೆನ್ಸಿಗೆ ಕ್ಲೀನ್ ಚಿಟ್ ನೀಡಿದೆ ಎಂಬ ಆರೋಪಗಳು ಇಲ್ಲೀಗ ಕೇಳಿಬರುತ್ತಿವೆ.
ಇಂಡಿಯನ್ ಕಂಪನಿಯ, ಶಹಾಪುರದ ವಿಜಯ ಗ್ಯಾಸ್ ಏಜೆನ್ಸಿಯಿಂದ ಈ ಸಿಲಿಂಡರ್ ಗ್ರಾಹಕರಿಗೆ ನೀಡಿತ್ತಾದರೂ, ಇದರ ಮಾಲೀಕತ್ವದಲ್ಲಿರುವ ಪ್ರಭಾವಿಗಳ ‘ಕೈ’ವಾಡದಿಂದಾಗಿ ಗ್ಯಾಸ್ ಏಜೆನ್ಸಿಯ ಪರ ಅಧಿಕಾರಿಗಳು ವರದಿ ಬರೆದು, ದುರಂತದ ಕುರಿತ ದೂರು ನೀಡಿದ್ದ ಸಾಹೇಬಗೌಡ ಎಂಬಾತನ ಮೇಲೆಯೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿ, ದೂರು ದಾಖಲಿಸಿರುವುದು ಅಚ್ಚರಿ ಮೂಡಿಸಿದೆ ಎಂಬುದಾಗಿ ನೊಂದ ದೋರನಹಳ್ಳಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕಳಪೆ ಗುಣಮಟ್ಟದ ಸಿಲಿಂಡರ್ ನೀಡಿದ್ದರಿಂದ ಹೀಗಾಗಿದೆ, ಇದು ಎಲ್ಲರಿಗೂ ಗೊತ್ತಿದ್ದ ವಿಚಾರ. ಆದರೆ, ಈ ದುರಂತದಲ್ಲಿ ಸತ್ತವರಿಗೆ ಕಂಪನಿ ಮತ್ತೆಲ್ಲಿ ಕೋಟ್ಯಂತರ ರುಪಾಯಿಗಳ ಪರಿಹಾರ ನೀಡಬೇಕಾದೀತೋ ಎಂಬ ಕಾರಣಕ್ಕೆ ಇಡೀ ಪ್ರಕರಣವನ್ನೇ ಬದಲಿಸಲು ಹೊರಟಂತಿದೆ ಎಂದು ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೇಕಾಂತ ಎ. ಪಾಟೀಲ್ ಶಂಕೆ ವ್ಯಕ್ತಪಡಿಸಿದರು.
ನ್ಯಾ. ಸದಾಶಿವ ಆಯೋಗ ವರದಿ ಗೌಪ್ಯ ಜಾರಿ ಆರೋಪ, ಸಿಡಿದೆದ್ದ ಬಂಜಾರ ಸಮುದಾಯ
ಈ ದುರಂತದಲ್ಲಿ ನೊಂದವರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರು ಹಾಗೂ ಅಧಿಕಾರಿಗಳು ಕಂಪನಿಯ ಪರವಾಗಿ ವಶೀಲಿ ನಡೆಸುತ್ತಿದ್ದು, ವರದಿಯನ್ನು ತಿರುಚಲು ಹೊರಟಿದ್ದಾರೆ. ದುರಂತದಲ್ಲಿ ತಾಯಿ ಹಾಗೂ ಅಳಿಯನನ್ನು ಕಳೆದುಕೊಂಡ ದೂರುದಾರ ಸಾಹೇಬಗೌಡ ವಿರುದ್ಧವೇ ಇಲ್ಲಿ ಆರೋಪಿ ಎಂದು ದೂರು ದಾಖಲಿಸಿ, ಪ್ರಕರಣಕ್ಕೆ ತೇಪೆ ಸಾರಿಸಲು ಹೊರಟಂತಿದೆ. ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಶುಕ್ರವಾರ ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮೇಕಾಂತ ಪಾಟೀಲ್ ತಿಳಿಸಿದರು.
ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ ಈ ಗ್ಯಾಸ್ ಏಜೆನ್ಸಿ ವಿರುದ್ಧ ಕಳಪೆ ಮಟ್ಟದ ಸಿಲಿಂಡರ್ ಸರಬರಾಜು ಮಾಡಿದ ಆರೋಪವಿದೆ. ಘಟನೆಯ ನಂತರ ಈ ಬಗ್ಗೆ ಎಲ್ಲ ವರದಿಗಳಿವೆ. ಸ್ಥಳ ಪರಿಶೀಲನೆ ಹಾಗೂ ಸಿಎಂ ಭೇಟಿ ವೇಳೆ ಎಲ್ಲವನ್ನೂ ಈ ಬಗ್ಗೆ ಅವರೇ ವಿವರಿಸಿದ್ದಾರೆ. ಹೀಗಿರುವಾಗ, ಈಗ ಏಜೆನ್ಸಿ ಪರ ಮೃದು ಧೋರಣೆ ಅನುಮಾನಕ್ಕೆ ಕಾರಣವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ದೋರನಹಳ್ಳಿ ಗ್ರಾಮದ ಷಣ್ಮುಖಪ್ಪ ದೂರಿದರು.
ಈ ಪ್ರಕರಣ ನ್ಯಾಯಾಂಗ ತನಿಖೆ ಒಪ್ಪಿಸಬೇಕು, ಮೃತ ಕುಟುಂಬಗಳಿಗೆ ಕಂಪನಿಯಿಂದ ಪರಿಹಾರ ನೀಡಿಸಬೇಕು ಸೇರಿದಂತೆ ಇನ್ನಿತರ ಕೋರಿಕೆಗಳ ಈಡೇರಿಸಲು ಆಗ್ರಹಿಸಿ ಜ.10ರಂದು ಜಿಲ್ಲಾಡಳಿತ ಕಚೇರಿಯೆದುರು ಪ್ರತಿಭಟನೆಗೆ ಗ್ರಾಮಸ್ಥರು ನಿರ್ಧರಿಸಿದ್ದಾರೆ ಎಂದು ಹೇಳಿದರ ಲಕ್ಷ್ಮೇಕಾಂತ ಪಾಟೀಲ್, ಸಾವು-ನೋವಿನ ಆಘಾತ ಅನುಭವಿಸಿದ ಕುಟುಂಬಸ್ಥರಿಗೆ ಚಾಜ್‌ರ್‍ಶೀಟ್ ವರದಿ ಮತ್ತಷ್ಟೂಆಘಾತ ಮೂಡಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಮ್ಮಣಗೌಡ ಜೋಳದ, ಸಂಗಣ್ಣ ಮಲಗೊಂಡ, ಷಣ್ಮುಖಪ್ಪ ಸಾಹು, ಮಲ್ಲಿಕಾರ್ಜುನ ಮನಗನಾಳ್, ಕೆ.ತಿರುಪತಿ, ಮಹಾವೀರ ಲಿಂಗೇರಿ, ವಿಜಯಕುಮಾರ್, ಮೊಹ್ಮದ್ ಕಲೀಮುದ್ದೀನ್, ನಿಂಗಪ್ಪ ಹೊನಿಗೇರಾ ಮುಂತಾದವರಿದ್ದರು.
ಸಿಲಿಂಡರ್ ಸೋರಿಕೆ: ಬೆಂಕಿ ಅವಘಡದಲ್ಲಿ ಬೆಂದವರು
ಬಾಲಕಿ ಸೇರಿದಂತೆ 15 ಜನ ಅಮಾಯಕರ ಜೀವ ಪಡೆದ ಹಾಗೂ 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಳಿಸಿದ ಈ ದುರಂತ ಕಳೆದ ವರ್ಷದ ಕರಾಳ ಘಟನೆಗಳಲ್ಲೊಂದು. ಫೆ.25, 2022ರಂದು ಸಾಹೇಬಗೌಡ ಹೇರುಂಡಿ ಎಂಬುವವರ ಸೊಸೆಯ ಸೀಮಂತ ಕಾರ್ಯಕ್ರಮದ ವೇಳೆ ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿ, ಕ್ಷಣಾರ್ಧದಲ್ಲೇ ಇವರೆಲ್ಲರೂ ಬೆಂಕಿಗಾಹುತಿಯಾಗಿದ್ದರು. ಸ್ಥಳದಲ್ಲೇ ಕೆಲವರು ಸುಟ್ಟು ಕರಕಲಾದರೆ, ಇನ್ನುಳಿದವರನ್ನು ಕಲಬುರಗಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದ ವಿವಿಧ ಆಸ್ಪತ್ರೆಗಳಲ್ಲಿ ಅನೇಕರನ್ನು ಚಿಕಿತ್ಸೆಗೆ ದಾಖಲಿಸಿದ್ದರೂ, ಅಲ್ಲೂ ಕೂಡ ಸಾವು ನೋವುಗಳ ಸಂಖ್ಯೆ ಹದಿನೈದರ ಗಡಿ ತಲುಪಿತ್ತು.
ಸುರಪುರ: ಕ್ರಿಶ 11ನೇ ಶತಮಾನದ ಕನ್ನಡ ಶಿಲಾಶಾಸನ ಪತ್ತೆ
ಘಟನೆಯ ತೀವ್ರತೆ ಅರಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಶಾಸಕರುಗಳಾದ ವೆಂಕಟರೆಡ್ಡಿ ಮುದ್ನಾಳ್, ರಾಜೂಗೌಡ ಸೇರಿದಂತೆ ಅನೇಕರು ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದ ಪರಿಹಾರ ನೀಡಿದ್ದರು. ರಾಜ್ಯಾದ್ಯಂತ ಸದ್ದು ಮಾಡಿದ್ದ ಈ ದುರಂತದ ಕುರಿತು ಅನೇಕರು ಕಣ್ಣೀರಾಗಿದ್ದರು. ಸೀಮಂತ ಕಾರ್ಯಕ್ರಮದ ಸಂಭ್ರಮದಲ್ಲಿದ್ದ ಮನೆಯಲ್ಲಿ ಹೆಣಗಳ ರಾಶಿ ಹರಡಿ, ಸೂತಕದ ಛಾಯೆ ಆವರಿಸಿತ್ತು. ತಿಂಗಳುಗಳ ಕಾಲ ಅನೇಕರು ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದರು. ಗಾಯಗೊಂಡವರ ಚಿಕಿತ್ಸೆಗೆ ಸರ್ಕಾರದಿಂದಲೇ ವೆಚ್ಚ ಭರಿಸುವುದಾಗಿ ಸರ್ಕಾರ ಹೇಳಿತ್ತು. ಅಂದಿನ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಗಾಯಾಳುಗಳ ಚಿಕಿತ್ಸೆಗೆ ನೆರವಾಗುವಲ್ಲಿ ಶ್ರಮಿಸಿದ್ದರು. ಶಾಮಿಯಾನಾದ ಕೆಳಗಡೆ ಎಲ್ಲರೂ ಕುಳಿತಿದ್ದ ವೇಳೆ, ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಆವರಿಸಿದಾಗ, ಕುಳಿತಿದ್ದವರ ಮೇಲೆ ಶಾಮಿಯಾನಾ ಬಿದ್ದು, ಅದರ ನೈಲಾನ್ ಪರದೆಯಡಿ ಸಿಲುಕಿದ ಅನೇಕರು ಬೆಂದು ಹೋಗಿದ್ದರು.
ಕಳಪೆ ಗುಣಮಟ್ಟದ ಸಿಲಿಂಡರ್ ನೀಡಿದ್ದೇ ಈ ಸೋರಿಕೆಗೆ ಕಾರಣ ಎಂದು ಆಗ ಹೇಳಲಾಗಿ, ಏಜೆನ್ಸಿಯ ಹನುಮಂತರಾಯ ಗೌಡ ಪಾಟೀಲ್ ಹಾಗೂ ಅಣವೀರಯ್ಯ ಮಠ ಎನ್ನುವವರ ವಿರುದ್ಧ ದೂರು (0030/2022) ದಾಖಲಿಸಿದ್ದರು.
ಈ ಗ್ಯಾಸ್ ಏಜೆನ್ಸಿ ವಿರುದ್ಧ ಕಳಪೆ ಮಟ್ಟದ ಸಿಲಿಂಡರ್ ಸರಬರಾಜು ಮಾಡಿದ ಆರೋಪವಿದೆ. ದುರ್ಘಟನೆಯ ನಂತರ ಈ ಬಗ್ಗೆ ಎಲ್ಲ ವರದಿಗಳಿವೆ. ಸ್ಥಳ ಪರಿಶೀಲನೆ ಹಾಗೂ ಸಿಎಂ ಭೇಟಿ ವೇಳೆ ಎಲ್ಲವನ್ನೂ ಈ ಬಗ್ಗೆ ಅವರೇ ವಿವರಿಸಿದ್ದಾರೆ. ಹೀಗಿರುವಾಗ, ಈಗ ಏಜೆನ್ಸಿ ಪರ ಮೃದು ಧೋರಣೆ ಅನುಮಾನಕ್ಕೆ ಕಾರಣವಾಗಿದೆ ಅಂತ ದೋರನಹಳ್ಳಿ ಗ್ರಾಮಸ್ಥ ಷಣ್ಮುಖಪ್ಪ ಸಾಹು ತಿಳಿಸಿದ್ದಾರೆ.