ಡ್ರಗ್ಸ್ ಮಾಫಿಯಾ: ನಶೆಯಲ್ಲೇ ಸಿಕ್ಕಿಬಿದ್ದ ಕಿಶೋರ್ ಗೆಳತಿ
ಡ್ಯಾನ್ಸರ್ ಕಿಶೋರ್ ಶೆಟ್ಟಿ ಸಂಪರ್ಕದಲ್ಲಿದ್ದ ಯುವತಿ ಅರೆಸ್ಟ್| ಡ್ರಗ್ಸ್ ಆರೋಪಿ ಕಿಶೋರ್ ಶೆಟ್ಟಿಯ ಸ್ವಾಬ್ ಪರೀಕ್ಷೆ ನಡೆಸಲಾಗಿದ್ದು, ಅದು ನೆಗೆಟಿವ್ ಬಂದಿದೆ| ಬೇರೆ ಸೆಲೆಬ್ರಿಟಿಗಳು ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ|
ಮಂಗಳೂರು(ಸೆ.23): ಡ್ರಗ್ಸ್ ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಸಂಪರ್ಕದಲ್ಲಿದ್ದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯುವತಿಯನ್ನು ಸೋಮವಾರ ವಶಕ್ಕೆ ಪಡೆಯಲಾಗಿದೆ. ಆಕೆ ನಶೆಯಲ್ಲಿದ್ದ ಕಾರಣ ವಿಚಾರಣೆ ನಡೆಸಲಾಗಿಲ್ಲ. ಆಕೆಯ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದ್ದು, ಡ್ರಗ್ಸ್ ಸೇವನೆಗೆ ಸಂಬಂಧಿಸಿ ಪಾಸಿಟಿವ್ ವರದಿ ಬಂದಿದೆ. ಇದರ ಹಿಂದಿನ ಡ್ರಗ್ಸ್ ನಂಟು ಹಾಗೂ ಜಾಲದ ಬಗ್ಗೆ ವಿಸ್ತೃತವಾದ ತನಿಖೆ ನಡೆಯುತ್ತಿದೆ. ಪ್ರಸಕ್ತ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಎಲ್ಲವನ್ನೂ ಹೇಳಲಾಗದು ಎಂದು ತಿಳಿಸಿದರು.
ಡ್ರಗ್ ಕೇಸ್ : ಕಿಶೋರ್, ಅಕೀಲ್ ಪೊಲೀಸ್ ಕಸ್ಟಡಿಗೆ
ಡ್ರಗ್ಸ್ ಆರೋಪಿ ಕಿಶೋರ್ ಶೆಟ್ಟಿಯ ಸ್ವಾಬ್ ಪರೀಕ್ಷೆ ನಡೆಸಲಾಗಿದ್ದು, ಅದು ನೆಗೆಟಿವ್ ಬಂದಿದೆ. ಈ ಜಾಲವನ್ನು ಭೇದಿಸಲು ಮೂರು ಪೊಲೀಸ್ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಬೇರೆ ಸೆಲೆಬ್ರಿಟಿಗಳು ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಈಗ ಡ್ರಗ್ಸ್ ಸೇವನೆಯಲ್ಲಿ ಸಿಕ್ಕಿಬಿದ್ದಿರುವ ಯುವತಿ ಮೂಲತಃ ಮಣಿಪುರದವಳು. ಈಕೆ ಕಿಶೋರ್ ಶೆಟ್ಟಿ ಜೊತೆ ಪಾರ್ಟಿ ಮಾಡುತ್ತಿದ್ದಳು. ಡ್ರಗ್ಸ್ ಸೇವಿಸುತ್ತಿದ್ದಾಗಲೇ ಈಕೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ದಿನಪೂರ್ತಿ ನಶೆಯಲ್ಲೇ ಇದ್ದ ಕಾರಣ ಈಕೆಯ ತನಿಖೆಯನ್ನು ಪೊಲೀಸರು ವಿಳಂಬವಾಗಿ ನಡೆಸಬೇಕಾಗಿದೆ.