ಕುಷ್ಟಗಿ(ಮೇ.16): ತಾಲೂಕಿನ ಹನಮಸಾಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಹೂಲಗೇರಿ ಗ್ರಾಮದ ಬಳಿ ಕಳೆದೆರಡು ದಿನಗಳ ಹಿಂದೆ ಯುವಕನೋರ್ವನನ್ನು ಕೊಲೆ ಮಾಡಿ ಹೂತು ಹಾಕಿದ ಘಟನೆಯ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು 24 ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಯುವಕನನ್ನು ಮಡಿವಾಳಪ್ಪ ಶಿವಪ್ಪ ಮಡಿವಾಳರ (19) ಎಂದು ಗುರುತಿಸಲಾಗಿದೆ. ಈ ಯುವಕ ಪಕ್ಕದ ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲೂಕಿನ ಬಲಕುಂದಿ ಗ್ರಾಮದವನಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಬಲಕುಂದಿ ಗ್ರಾಮದ ಮೃತ ಯುವಕ ಅಜ್ಜಿ ಫಕೀರಮ್ಮ ಮಡಿವಾಳಪ್ಪ ಮಡಿವಾಳರ ಹನಮಸಾಗರ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರು.

ಕೊರೋನಾ ಕಾಟ: ಎರಡನೇ ಪರೀಕ್ಷೆಯಲ್ಲಿಯೂ ನೆಗೆಟಿವ್‌, ಕೊಪ್ಪಳದ ಜನತೆ ನಿರಾಳ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವರಿಷ್ಠಾಧಿಕಾರಿ ಜಿ.ಸಂಗೀತಾ ಮತ್ತು ಗಂಗಾವತಿ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ರವರ ಮಾರ್ಗದರ್ಶನದ ಮೇರೆಗೆ ಕುಷ್ಟಗಿ ಸಿಪಿಐ ಜಿ.ಚಂದ್ರಶೇಖರ ಮತ್ತು ಹನಮಸಾಗರ ಪಿಎಸ್‌ಐ ಅಮರೇಶ ಹುಬ್ಬಳ್ಳಿ ಇವರ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ದುರುಗಪ್ಪ ಹಿರೇಮನಿ, ಡಿ.ಕೆ. ನಾಯಕ, ಪರಶುರಾಮ, ಬಾಳನಗೌಡ, ರವಿ ನಡುವಿನಮನಿ, ಜೈರಾಮ, ಪ್ರಶಾಂತ ಕುಂಬಾರ, ಖಾದರ ಎಚ್‌.ಸಿ. ಸೇರಿದಂತೆ ಇತರೆ ಸಿಬ್ಬಂದಿ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಪ್ರಕರಣ ಭೇದಿಸುವಲ್ಲಿ ವೈಜ್ಞಾನಿಕ ತನಿಖೆ ಕೈಗೊಂಡ 24 ಗಂಟೆಯಲ್ಲಿ ಕೊಲೆ ಮಡಿದ ಆರೋಪಿತರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ಜಗದೀಶ ಬಸವರಾಜ ಹಿರೇಮಠ (24), ಪ್ರವೀಣ ಬಸವರಾಜ ಹಿರೇಮಠ (20), ದೊಡ್ಡಪ್ಪ ಅಲಿಯಾಸ ದೊಡ್ಡಬಸವ ಶೇಖಪ್ಪ ಅಂಗಡಿ (22), ರೆಹಮಾನ್‌ ತಿರ್ಮಾನಲಿ ಮುಲ್ಲಾ (20) ಈ ಆರೋಪಿತರನ್ನು ವಿಚಾರಣೆಗೆ ಒಳಪಡಿಸಿದಾಗ ಇಳಕಲ್‌ ತಾಲೂಕಿನ ಬಲಕುಂದಿ ಗ್ರಾಮದವರೆಂದು ಆರೋಪಿತರು ತಿಳಿಸಿದ್ದು, ಮಡಿವಾಳಪ್ಪ ಶಿವಪ್ಪ ಮಡಿವಾಳರ ಎಂಬ ಯುವಕನನ್ನು ಬಲಕುಂದಿ ಗ್ರಾಮದಲ್ಲಿ ಕೊಲೆ ಮಾಡಿ ನಂತರ ಮೃತದೇಹವನ್ನು ತಾಲೂಕಿನ ಹೂಲಗೇರಿ ಗ್ರಾಮದ ಕುಂಬಾರ ಕೇರಿಯಲ್ಲಿ ಹೂಳಿರುವುದಾಗಿ ತನಿಖೆ ವೇಳೆಯಲ್ಲಿ ಒಪ್ಪಿಕೊಂಡಿರುತ್ತಾರೆ.

ಕೊಲೆ ಕೃತ್ಯಕ್ಕೆ ಬಳಸಿದ ಆಯುಧಗಳನ್ನು, ಮೃತನ ರಕ್ತಸಿಕ್ತ ಬಟ್ಟೆಗಳನ್ನು, ಶವ ಸಾಗಿಸಿದ ಮೋಟರ್‌ ಸೈಕಲ್‌ ಮತ್ತು ನಾಲ್ಕು ಮೊಬೈಲ್‌ ಫೋನ್‌​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಜಗದೀಶ ಬಸವರಾಜ ಹಿರೇಮಠ ಹಾಗೂ ಆತನ ಸಹೋದರ ಪ್ರವೀಣ ಬಸವರಾಜ ಹಿರೇಮಠ ಈ ಇಬ್ಬರ ಸಹೋದರಿಯನ್ನು ಮೃತ ಯುವಕ ಪದೇ ಪದೇ ಚುಡಾಯಿಸುತ್ತಿರುವುದಕ್ಕೆ ಕೊಲೆ ಮಾಡಲು ಕಾರಣ ನೀಡಿದ್ದು, ಮೃತ ದೇಹವನ್ನು ಅರೆಬರೆ ಹೂತಾಕಿದ್ದರಿಂದ ನಾಯಿ ನರಿಗಳು ಎಳೆದಾಡಿದಿರುವುದನ್ನು ಕಂಡ ಸಾರ್ವಜನಿಕರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಮೊಮ್ಮಗನನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಫಕೀರಮ್ಮ ಮಡಿವಾಳರ ದೂರು ದಾಖಲಿಸಿದ್ದಳು.

ಪ್ರಕರಣವನ್ನು ಭೇದಿಸಿದ 24 ಗಂಟೆಯಲ್ಲಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್‌ ತಂಡದ ಕಾರ್ಯಕ್ಕೆ ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ, ಜಿಲ್ಲಾ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿರುತ್ತಾರೆ ಎಂದು ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಸುದ್ದಿಗಾರರಿಗೆ ತಿಳಿಸಿದರು.