ಸೈನಿಕರಂತೆ ಪೊಲೀಸರಿಗೂ ಪ್ರಾಮುಖ್ಯತೆ ಇದೆ: ರವಿಕಾಂತೇಗೌಡ
ಗಡಿ ಕಾಯುತ್ತಿರುವ ಸೈನಿಕರಂತೆ ಪೊಲೀಸ್ ಸಿಬ್ಬಂದಿಗೂ ಪ್ರಾಮುಖ್ಯತೆ ಇದೆ ಎಂದು ಕೇಂದ್ರ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅಭಿಪ್ರಾಯಪಟ್ಟರು.
ತುಮಕೂರು : ಗಡಿ ಕಾಯುತ್ತಿರುವ ಸೈನಿಕರಂತೆ ಪೊಲೀಸ್ ಸಿಬ್ಬಂದಿಗೂ ಪ್ರಾಮುಖ್ಯತೆ ಇದೆ ಎಂದು ಕೇಂದ್ರ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ 12ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲಾಖೆಯಲ್ಲಿ ಕಾರ್ಯನಿರ್ವಹಿಸುವಾಗ ಯಾವುದೇ ಟೀಕೆಗಳು ಬಂದರೂ ಅದನ್ನು ಋುಣಾತ್ಮಕವಾಗಿ ತೆಗೆದುಕೊಳ್ಳದೇ ಸಕಾರಾತ್ಮಕವಾಗಿ ಪರಿಗಣಿಸಬೇಕು. ಬಡ, ಮಧ್ಯಮ ವರ್ಗದಿಂದ ಬಂದು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವು ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರು ಬಂದಾಗ ಸೌಜನ್ಯದಿಂದ ಜನಸ್ನೇಹಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪೊಲೀಸ್ ಠಾಣೆಗಳಿಗೆ ದೂರುಗಳನ್ನು ಹೊತ್ತು ಬಡವರು, ದೀನ ದಲಿತರು ಬಂದಾಗ ಅವರ ಕಷ್ಟವನ್ನು ನಿವಾರಿಸುವ ಗಂಭೀರ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಮಹಿಳಾ ಸಬಲೀಕರಣ ಮಾಡಬೇಕಾದರೆ ನಮ್ಮನ್ನು ನಾವು ಸಶಕ್ತಗೊಳಿಸಬೇಕು, ವೃತ್ತಿ ಪರತೆಯಿಂದಲೇ ಮೆಚ್ಚುಗೆ ಗಳಿಸಬೇಕು. ಹಿರಿಯ ಅಧಿಕಾರಿಗಳು ಹಾಗೂ ಸಹದ್ಯೋಗಿಗಳ ಮೆಚ್ಚುಗೆಗೆ ಪಾತ್ರವಾಗುವಂತೆ ಕಾರ್ಯನಿರ್ವಹಿಸಬೇಕು. ಭಾರತದ ಸಂವಿಧಾನದ ಶ್ರೇಷ್ಠವಾಗಿದ್ದು, ಸಮಾನತೆ, ಭ್ರಾತೃತ್ವ, ಜಾತ್ಯತೀತ ತತ್ವವನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪೊಲೀಸ್ ತರಬೇತಿ ಶಾಲೆಗೆ ಹೆಸರು ತರುವಂತೆ ಕಾರ್ಯನಿರ್ವಹಿಸುವ ಮುಖೇನ ನಿಮಗೆ ನೀವೇ ಗೌರವ ಸೃಷ್ಟಿಸಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪ್ರಶಿಕ್ಷಾರ್ಥಿಗಳಿಗೆ ಈಜು, ಮಾರ್ಷಲ್ ಆರ್ಚ್‌್ಸ ತರಬೇತಿ ನೀಡಲಾಗಿದೆ. ಈ ಮೂಲಕ ತನಿಖಾಧಿಕಾರಿ, ಸಹಾಯಕಾಧಿಕಾರಿ ಕೆಲಸ ಮಾಡುವಷ್ಟುಪ್ರಶಿಕ್ಷಣಾರ್ಥಿಗಳು ತಯಾರಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಮಾತನಾಡಿ, ಪ್ರಶಿಕ್ಷಣಾರ್ಥಿಗಳಲ್ಲಿ ಎಂಜಿನಿಯರಿಂಗ್ ಪದವಿ, ಸ್ನಾತಕೋತ್ತರ, ಸ್ನಾತಕ ಪದವೀಧರರು ಹೆಚ್ಚಿದ್ದು, ವಿದ್ಯಾವಂತ ಸಮೂಹ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಮುಂದಾಗಿರುವುದರಿಂದ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಲು ಸಹಾಯವಾಗಿದೆ. ಎಲ್ಲ ಇಲಾಖೆಗಳಲ್ಲಿಯೂ ಮಹಿಳಾ ಪ್ರಾತಿನಿಧ್ಯ ದೊರೆಯುತ್ತಿದ್ದು, ಮಹಿಳಾ ಪ್ರಾತಿನಿಧ್ಯಕ್ಕೆ ನ್ಯಾಯ ದೊರಕಬೇಕಾದರೆ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲ ವರ್ಗದ ಸಮಸ್ಯೆ ಬಗೆಹರಿಸಲು ಅವಕಾಶ ಇರುವುದು ಪೊಲೀಸ್ ಇಲಾಖೆಗೆ ಮಾತ್ರ. ಇಂತಹ ಇಲಾಖೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗುವುದೇ ಅದೃಷ್ಟಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಸ್ವಾಮಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಿದ್ಧಾರ್ಥ ಗೋಯೆಲ್, ಡಿವೈಎಸ್ಪಿಗಳಾದ ಶ್ರೀನಿವಾಸ್, ಪರಮೇಶ್, ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿನಿಗೆ ಸರ್ವೋತ್ತಮ ಪ್ರಶಸ್ತಿ
12ನೇ ತಂಡದ ಸರ್ವೋತ್ತಮ ಪ್ರಶಸ್ತಿಯನ್ನು ಪ್ರಶಿಕ್ಷಣಾರ್ಥಿ ಅಶ್ವಿನಿ ಪವಾರ್ ತಮ್ಮದಾಗಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತರಬೇತಿ ಅವಧಿಯಲ್ಲಿ ಹೊರಾಂಗಣ, ಒಳಾಂಗಣ ಹಾಗೂ ಫೈರಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪ್ರಶಿಕ್ಷಣಾರ್ಥಿಗಳು ಮತ್ತು ಪೋಷಕರು ಫೋಟೋ ಕ್ಲಿಕ್ಕಿಸಿಕೊಂಡ ದೃಶ್ಯಗಳು ಕಂಡು ಬಂದವು.
ಪ್ರಶಿಕ್ಷಣಾರ್ಥಿಗಳಿಗೆ ಠಾಣೆ ದೇವಾಲಯ, ಚಚ್‌ರ್, ಮಸೀದಿಯಂತೆ ಪವಿತ್ರವಾದ ಜಾಗ. ಅಂತಹ ಜಾಗದಲ್ಲಿ ಪರಿಹಾರವನ್ನು ಅರಸಿ ಬರುವ ನಾಗರಿಕರು ಪೊಲೀಸರ ಮೇಲಿಟ್ಟಿರುವ ನಿರೀಕ್ಷೆಯನ್ನು ಹುಸಿಯಾಗದಂತೆ ನೋಡಿಕೊಳ್ಳಬೇಕು. ಜನರ ವಿಶ್ವಾಸ, ಗೌರವಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಬೇಕು. ಪೊಲೀಸ್ ಇಲಾಖೆ ಅತ್ಯಂತ ಜವಾಬ್ದಾರಿಯುತ ಇಲಾಖೆ. ಇಂತಹ ಪಾವಿತ್ರ್ಯತೆಯುಳ್ಳ ಇಲಾಖೆಯಲ್ಲಿ ಸದಾ ಕಾಲ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು.
ಡಾ.ಬಿ.ಆರ್. ರವಿಕಾಂತೇಗೌಡ ಕೇಂದ್ರ ವಲಯ ಐಜಿಪಿ