ಕಲಬುರಗಿ(ಅ.5): ಟ್ರಾಕ್ಟರ್‌ವೊಂದು ಮಗುಚಿ ಬಿದ್ದ ಪರಿಣಾಮ ಚಾಲಕ ಸಾವು ಬದುಕಿನ ನಡುವೆ ಒದ್ದಾಡುತ್ತಿರುವ ವೇಳೆ ಪೊಲೀಸರು ಮಾನವೀಯತೆ ಮೆರೆದು ಆಸ್ಪತ್ರೆಗೆ ದಾಖಲಿದ ಘಟನೆ ಜಿಲ್ಲೆಯ ಸೇಡಂ ಪಟ್ಟಣದ ಕೋಡ್ಲಾ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.

ಸಂಜೆ ಭಾರಿ ಮಳೆ ಸುರಿಯುತ್ತಿರುವ ವೇಳೆಯಲ್ಲಿ ಪುರಸಭೆ ಗುತ್ತಿಗೆದಾರನ  ಬಳಿ ಕೆಲಸ ಮಾಡುತ್ತಿದ್ದ ಆಕಾಶ ಬಟಗೇರಾ (26) ಎಂಬಾತ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಟ್ರಾಕ್ಟರ್ ಚಲಾಯಿಸುತ್ತಿರುವಾಗ ಟ್ರಾಕ್ಟರ್ ಮಗುಚಿ ಆತ ಸಿಲುಕಿಕೊಂಡಿದ್ದ. ನಂತರ ಸ್ಥಳದಲ್ಲೇ ಇದ್ದ ಕೆಲವರು ಚಾಲಕ ಮೃತಪಟ್ಟಿರಬಹುದು ಎಂದು ಆತನನ್ನು ಹೊರಕ್ಕೆ ತೆಗೆದು ರಸ್ತೆಯ ಮೇಲೆ ಮಲಗಿಸಿದ್ದರು.

ಮಾಹಿತಿ ಅರಿತ ಪಿಎಸ್ಐ ಸುಶೀಲಕುಮಾರ ಮತ್ತು ಪಿಸಿ ವಿಠ್ಠಲರೆಡ್ಡಿ ಸ್ಥಳಕ್ಕೆ ತೆರಳಿದಾಗ ಯುವಕ ಇನ್ನೂ ಜೀವಂತ ಇರುವುದನ್ನು ಕಂಡು ಅಂಬುಲೆನ್ಸ್ ಗಾಗಿ ಕಾಯದೆ ತಮ್ಮ ಸರ್ಕಾರಿ ವಾಹನದಲ್ಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದು, ಯುವಕ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಸರಿಯಾದ ಸಮಯಕ್ಕೆ ಚಾಣಾಕ್ಷತನ ಮೆರೆದು ಯುವಕನನ್ನು ಬದುಕಿಸಿದ ಪಿಎಸ್ಐ ಸುಶೀಲಕುಮಾರ ಮತ್ತು ಪಿಸಿ ವಿಠ್ಠಲರೆಡ್ಡಿ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.