ನಮಗೆ ಕುಡಿಯಲು ವಿಷ ನೀರೇ ಗತಿನಾ?ಶ್ರೀರಾಮುಲುಗೆ ಯಾದಗಿರಿ ಜನತೆ ಪ್ರಶ್ನೆ
ತಾಂಡಾ ಜನರ ಜೀವ ಹಿಂಡುತಿದೆ ಜೀವಜಲ ಏವೂರು ದೊಡ್ಡ ತಾಂಡಾ ಜನರ ಹೀನಾಯ ಬದುಕು | ವಿವಿಧ ಅಂಗವಿಕಲತೆಗಳಿಗೆ ಬಲಿಯಾಗುತ್ತಿರುವ ಜನ | ಜೀವಜಲದಲ್ಲಿ ವಿಷ; ಬುದ್ಧಿಮಾಂದ್ಯ, ಅಂಗವಿಕಲತೆಯೇ ಹೆಚ್ಚು | ಇದ್ದೂ ಇಲ್ಲದಂತಾದ ಶುದ್ಧ ಕುಡಿವ ನೀರಿನ ಘಟಕ | ವಿಷ ನೀರೇ ಕುಡಿದು ಬದುಕುವ ಅನಿವಾರ್ಯತೆ|
ಆನಂದ್ ಎಂ. ಸೌದಿ
ಯಾದಗಿರಿ[ಜ.03]: ಜೀವಜಲ ಇಲ್ಲಿನ ಜನರ ಜೀವ ಹಿಂಡುತಿದೆ. ನೀರು ಕುಡಿದರೂ ಕಷ್ಟ, ಕುಡಿಯದಿದ್ದರೆ ಬದುಕು ಇನ್ನೂ ಕಷ್ಟ. ನೀರಿನಲ್ಲಿನ ವಿಷಕಾರಿ ಅಂಶಗಳಿಂದಾಗಿ ಬುದ್ಧಿ ಮಾಂದ್ಯತೆ, ಅಂಗವೈಕಲ್ಯತೆ, ಚರ್ಮರೋಗ, ಮೂಳೆ ಸವೆತ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಇಲ್ಲಿನ ಜನರು ಬಲಿಯಾಗುತ್ತಿರುವುದು ನಿಜಕ್ಕೂ ಆಘಾತಕಾರಿ.
ಶುದ್ಧ ಕುಡಿಯುವ ನೀರು ಕುಡಿಯಬೇಕೆಂದರೆ ಇಲ್ಲದು ಗಗನಕುಸುಮ. ಜಿಲ್ಲೆಯ ಸುರಪುರ ತಾಲೂಕಿನ ಏವೂರು ದೊಡ್ಡ ತಾಂಡಾ ಜನರ ದುಸ್ಥಿತಿಯಂತೂ ಹೇಳತೀರದು. ಶಹಾಪುರ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಏವೂರು ಪಂಚಾಯ್ತಿಯ ಏವೂರು ದೊಡ್ಡ ತಾಂಡಾದಲ್ಲಿ ಸುಮಾರು 2 ಸಾವಿರ ಜನರು ವಾಸಿಸುತ್ತಿದ್ದಾರೆ. ಆರ್ಸೆ ನಿಕ್ ಹಾಗೂ ಫ್ಲೋರೈಡ್ ಅಂಶಯುಕ್ತ ನೀರು ಇಲ್ಲಿನ ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಇಲ್ಲಿನ ಬಹುತೇಕರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾಲುಗಳಲ್ಲಿನ ಶಕ್ತಿ ಕಳೆದುಕೊಂಡ ಐದನೇ ತರಗತಿಯ ಸೋನಾ ಹಾಗೂ ಪೂಜಾ ರಾಠೋಡ್, ನಿಲ್ಲಲ್ಲಿಕ್ಕಾಗದೇ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವಸಂತ ರಾಠೋಡ್, ದೃಷ್ಟಿಹೀನ ಸೋಮ್ಲಿಬಾಯಿ ಹಾಗೂ ಮೂಳೆ ಸವಕಳಿಯಿಂದ ಸುಭಾಸ್ ಹೀಗೆ ಈ ಊರಿನ ಒಂದಲ್ಲವೊಂದು ಮನೆಯಲ್ಲಿ ಅಂಗವೈಕಲ್ಯ ಹಾಗೂ ಬುದ್ಧಿಮಾಂದ್ಯತೆಯುಳ್ಳವರು ಕಾಣ ಸಿಗುವುದು ಆಘಾತಕಾರಿ ಅಂಶ. ಕ್ಯಾನ್ಸರ್ ಸಹ ಈ ಭಾಗದಲ್ಲಿ ಸರ್ವೇ ಸಾಮಾನ್ಯ ಎಂದೆನಿಸಿದೆ.
ಐದು ವರ್ಷಗಳ ಹಿಂದೆ ಮನೋಜ್ ಜೈನ್ ಜಿಲ್ಲಾಧಿಕಾರಿ ಹಾಗೂ ಪೊಮ್ಮಾಲ ಸುನಿಲ್ ಕುಮಾರ್ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾಗ ಇಲ್ಲಿಗೆ ಬಂದು ಪರಿಶೀಲಿಸಿದ್ದರು. ವೈದ್ಯಕೀಯ ತಪಾಸಣೆ ಕ್ಯಾಂಪ್ ಸಹ ಆಯೋಜಿಸಿ ಇಲ್ಲಿನ ಜನರಿಗೆ ನೆರವಾಗುವ ಬಗ್ಗೆ ಭರವಸೆ ನೀಡಿದ್ದರು. ಶುದ್ಧ ಕುಡಿಯುವ ನೀರಿನ ಘಟಕವನ್ನೂ ಅಲ್ಲಿ ಸ್ಥಾಪಿಸಲಾಗಿತ್ತು. ಕೆಲವು ಬೋರವೆಲ್‌ಗಳನ್ನು ಬಳಸದಂತೆ ಕೆಂಪು ಗುರುತಿಸಿ, ಜನರಿಗೆ ತಿಳಿಹೇಳುವ ಪ್ರಯತ್ನವೂ ಮಾಡಲಾಗಿತ್ತು. ಅಂಗವಿಕಲರಿಗೆ ಉಪಕರಣಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವ ಬಗ್ಗೆ ಆಗ ನೀಡಿದ್ದ ಭರವಸೆ ಐದು ವರ್ಷಗಳಿಂದಲೂ ಹಾಗೆ ಇರುವುದು ಇಲ್ಲಿನ ಅಧಿಕಾರಿಗಳ ಇಂದಿನ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ.
ಆಘಾತ ವ್ಯಕ್ತಪಡಿಸಿದ್ದ ದೆಹಲಿ ವೈದ್ಯರ ತಂಡ:
ಆದರೆ, ಈ ಅಧಿಕಾರಿಗಳು ವರ್ಗಾವಣೆಗೊಂಡ ಕೆಲವೇ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕುಂಟುತ್ತಾ ಸಾಗಿತು. ವಿದ್ಯುತ್ ಹಾಗೂ ಮೂಲ ವ್ಯವಸ್ಥೆಯಿಲ್ಲದೆ ಆರ್‌ಓ ಪ್ಲಾಂಟ್‌ನಿಂದ ನೀರು ಬಾರದೆ ಜನರು ಮತ್ತೆ ಅತಂತ್ರಕ್ಕೀಡಾದರು. ಬದುಕಲು ನೀರು ಬೇಕು. ಶುದ್ಧ ಕುಡಿಯುವ ನೀರಿನ ಘಟಕ ವಂತೂ ಮೂಲೆ ಸೇರಿದ ಮೇಲೆ ಬದುಕಲು ವಿಷಕಾರಿ ನೀರು ಕುಡಿಯುವ ಅನಿವಾರ‌್ಯತೆ ಇಲ್ಲಿನವರದ್ದಾಗಿತ್ತು. ಈ ಕೆಲವು ತಿಂಗಳ ಹಿಂದಷ್ಟೇ ಇಲ್ಲಿಗೆ ಅಖಿಲ ಭಾರತ ವೈದ್ಯರ ತಂಡವೊಂದು ಬಂದು ಎರಡು ದಿನಗಳ ಇಲ್ಲಿನ ಆರೋಗ್ಯ ತಪಾಸಣೆ ನಡೆಸಿ, ಶುದ್ಧ ಕುಡಿಯುವ ನೀರು ಪ್ರಮುಖ ಕಾರಣ ಎಂದು ಷರಾ ಬರೆದಿಟ್ಟು, ಜಿಲ್ಲಾಡಳಿತಕ್ಕೆ ಒಪ್ಪಿಸಿತ್ತು.
ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಗಮನಕ್ಕೂ ಇದನ್ನು ತರಲಾಗಿತ್ತು. ಆದರೆ, ಇಂದಿಗೂ ಇಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಕಳೆದೆರಡು ತಿಂಗಳ ಹಿಂದಷ್ಟೇ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ‘ಕನ್ನಡಪ್ರಭ’ ಕಚೇರಿಯಲ್ಲಿ ನಡೆಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲೂ ಇಲ್ಲಿನ ಆರ್‌ಓ ಪ್ಲಾಂಟ್ ಬಗ್ಗೆ ದೂರು ಬಂದಿತ್ತು. ಆರ್‌ಓ ಪ್ಲಾಂಟ್‌ಗಳ ರಿಪೇರಿಗಾಗಿ ಅಂಬ್ಯಲೆನ್ಸ್ ರೀತಿಯ ದುರಸ್ತಿ ವಾಹನದ ಬಗ್ಗೆ ಅವರು ಘೋಷಿಸಿದ್ದಾದರೂ, ಆ ವ್ಯವಸ್ಥೆ ಇದ್ದೂ ಸತ್ತಂತಿದೆ. ಕೇವಲ ಗುರಿ ಸಾಧನೆ ಹಾಗೂ ಪ್ರಶಸ್ತಿಗಾಗಿ ಮಾತ್ರ ಘೋಷಣೆಗಳನ್ನು ಮಾಡುತ್ತಿರುವಂತಿದೆ ಆಡಳಿತದ ಆದೇಶಗಳು. ಪಂಚಾಯತ್‌ರಾಜ್ ಇಲಾಖೆ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಗುಣಮಟ್ಟ ಪ್ರಯೋಗಾಲಯದಲ್ಲಿ ಪರೀಶೀಲಿಸಿದಾಗ, ಸುರಪುರ ತಾಲೂಕಿನ 20 ಗ್ರಾಮಗಳಲ್ಲಿ ಆರ್ಸೆನಿಕ್ ಅಂಶ ಹಾಗೂ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಫ್ಲೋರೈಡ್ ಸಮಸ್ಯೆ ಕಾಡುತ್ತಿರುವುದು ಪತ್ತೆಯಾಗಿತ್ತು.
ಆರ್‌ಓ ಪ್ಲಾಂಟ್ ಕೆಟ್ಟಿದೆ. ಮೇಲಧಿಕಾರಿಗಳಿಗೆ ವರದಿ ಒಪ್ಪಿಸಲು ದುರಸ್ತಿ ಮಾಡಿದ್ದೇವೆಂದು ಸುಳ್ಳು ಹೇಳುತ್ತಾರಷ್ಟೇ. ಶುದ್ಧ ಕುಡಿಯುವ ನೀರು ಇಲ್ಲದ್ದರಿಂದ ವಿಷಕಾರಿ ನೀರನ್ನೇ ಕುಡಿದು ಬದುಕುವ ಅನಿವಾರ್ಯತೆಯಿದೆ ಎಂದು ಏವೂರು ದೊಡ್ಡ ತಾಂಡಾ ಗ್ರಾಮಸ್ಥ ತುಳಜಾರಾಮ್ ಅವರು ಹೇಳಿದ್ದಾರೆ .
ಚೆನ್ನಾಗಿ ಓಡಾಡುತ್ತಿದ್ದ ನಮಗೆ ಏನಾಗುತ್ತದೋ ಗೊತ್ತಿಲ್ಲ. ಕಾಲುಗಳಲ್ಲಿನ ಶಕ್ತಿಯೇ ಉಡುಗಿ ಹೋಗಿ ನಾವೆಲ್ಲ ವಿವಿಧ ರೀತಿಯ ಅಂಗವಿಕಲತೆಗೆ ತುತ್ತಾಗುತ್ತೇವೆ ಎಂದು ಏವೂರು ದೊಡ್ಡ ತಾಂಡಾ ನಿವಾಸಿ ವಸಂತ ರಾಠೋಡ್ ಅವರು ಹೇಳಿದ್ದಾರೆ.