Kalaburagi: ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್‌ಗೂ ಮಾನ್ಯಕೇಟಕ್ಕೂ ನಂಟು: ಮುನ್ನೆಲೆಗೆ ಬಂದ ಇತಿಹಾಸ
ಮಳಖೇಡದ ಜಯತೀರ್ಥರು ಗುಜರಾತ್ ಕರ್ಣಾವತಿ ವಿಶ್ವವಿದ್ಯಾಲಯಲ್ಲಿ 2 ವರ್ಷ ಕುಲಪತಿಗಳಾಗಿದ್ದರು
ಗುಜರಾತಿನ ಕರ್ಣಾವತಿಯಲ್ಲಿ ರಾಜ ಕಾಮದೇವ ಅರಸ ಜಯತೀರ್ಥರ ಸೇವೆ ಸ್ಮರಿಸಿ ನಿರ್ಮಿಸಿದ ಸ್ಮಾರಕವಿದೆ
ಕಲಬುರಗಿ (ಜ.18): ಕಲಬುರಗಿ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೊದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಮಠ ಮಂದಿರಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ತತ್ವಶಾಸ್ತ್ರ ಹಾಗೂ ಇತಿಹಾಸದ ಘಟನೆಗಳು ಮುನ್ನೆಲೆಗೆ ಬಂದಿವೆ. ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ಗೂ ಮತ್ತು ಕಲಬುರಗಿಯ ರಾಷ್ಟ್ರಕೂಟರ ರಾಜಧಾನಿ ಮಾನ್ಯಕೇಟಕ್ಕೂ ಇರುವ ಸಂಬಂಧದ ಬಗ್ಗೆ ತಜ್ಞರು ಚರ್ಚೆಯನ್ನು ಆರಂಭಿಸಿದ್ದಾರೆ.
ರಾಷ್ಟ್ರಕೂಟರ ರಾಜಧಾನಿ, ಕನ್ನಡದ ಮೊದಲ ಗ್ರಂಥ ಕವಿರಾಜ ಮಾರ್ಗ ಕೃತಿಕಾರ ಅಮೋಘರ್ಷ ನೃಪತುಂಗ ದೊರೆಯ ನಾಡು, ಶ್ರೀಮನ್ಯಾಯಸುಧಾ ಸೇರಿದಂತೆ ಅನೇಕ ಗ್ರಂಥಗಳ ಮೂಲಕ ದ್ವೈತ ಸಿದ್ದಾಂತವನ್ನು ಜಗತ್ತಿಗೆ ಸಾರಿ ಹೇಳಿದ ಯತಿಕುಲ ತಿಲಕ ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನ, ನ್ಯಾಯಸುಧೆ ಉದಿಸಿದ ಪುಣ್ಯತಾಣ, ಸೇಡಂ ತಾಲೂಕಿನ ಮಾನ್ಯಖೇಟ (ಈಗಿನ ಮಳಖೇಡ) ಆಗಿದೆ. ಮಾನ್ಯಕೇಟಕ್ಕೆ ಜ. 19 ರ ಗುರುವಾರ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
PM Narendra Modi: ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಶಾಸಕ ರಾಜೂಗೌಡ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ
ದೇಶದ ಗಮನ ಸೆಳೆದ ಮಾದರಿ ಕೆಲಸ: ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಬಳಸಿಕೊಂಡು ತಾಂಡಾ, ಹಟ್ಟಿ, ಹಾಡಿಗಳಲ್ಲಿರುವ ಅಲೆಮಾರಿಗಳ ಬದುಕಿಗೆ ಕಾಯಂ ಸೂರು ಒದಗಿಸುವ ಮೂಲಕ ಕಲ್ಯಾಣ ನಾಡಿನ ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್ ಹಾಗೂ ಪಕ್ಕದ ವಿಜಯಪುರ ಸೇರಿದಂತೆ ಪಂಚ ಜಿಲ್ಲೆಗಳಲ್ಲಿ ದೇಶಕ್ಕೆ ಮಾದರಿಯಾಗುವ ಕೆಲಸ ನಡಡದಿದೆ. ಈ ಮಾದರಿ ಕೆಲಸದಿಂದಾಗಿ ಕಲ್ಯಾಣ ಕರ್ನಾಟಕ ಇಡೀ ದೇಶದ ಗಮನ ಸೆಳೆದಿದೆ. ಇದರೊಂದಿಗೇ ಪ್ರಧಾನಿ ಮೋದಿ ಆಗಮಿಸುತ್ತಿರುವ ಮಳಖೇಡಕ್ಕೂ ದೂರದ ಗುಜರಾತ್ ರಾಜ್ಯಕ್ಕೂ ಬಲು ಹತ್ತಿರದ ನಂಟಿರೋದು ಸಹ ಸುದ್ದಿಗೆ ಗ್ರಾಸವಾಗಿದೆ. ಕಾಗಿಣಾ ತೀರದ ಮಳಖೇಡ ಐತಿಹಾಸಿಕವಾಗಿ ಹೇಗೆ ಹೆಸರುವಾಸಿಯೋ ಧಾರ್ಮಿಕ, ಭಾರತೀಯ ಸನಾತನ ಧರ್ಮ, ತತ್ವಶಾಸ್ತ್ರ ಕ್ಷೇತ್ರದಲ್ಲಿಯೂ ಅಷ್ಟೇ ಖ್ಯಾತಿ ಪಡೆದಂತಹದ್ದು ಆಗಿದೆ.
ಕರ್ಣಾವತಿ ವಿವಿಯಲ್ಲಿ ಕುಲಪತಿ ಆಗಿ ಸೇವೆ: ರಾಷ್ಟ್ರಕೂಟದ ಆಳ್ವಿಕೆಯ ಕಾಲದಲ್ಲಿ ಇಡೀ ದೇಶದಲ್ಲಿ ಶಿಕ್ಷಣದ ಪ್ರಸಿದ್ಧವಾಗಿದ್ದ ಸ್ಥಳದಲ್ಲಿ ಮಾನ್ಯಕೇಟವೂ ಪ್ರಮುಖ ಕೇಂದ್ರವಾಗಿತ್ತು. ಈ ವೇಳೆ ಇಲ್ಲಿನ ಹಲವು ಶಿಕ್ಷಣ ತಜ್ಷರು, ವೇದಾಂತ ಪಂಡಿತರು ದೇಶಾದ್ಯಂತ ಪರ್ಯಟನೆ ಮಾಡಿ ಶಿಕ್ಷಣ ಪ್ರಸಾರ ಮಾಡುತ್ತಿದ್ದರು. ಇಲ್ಲಿನ ಕಾಗಿಣಾ ತೀರದಲ್ಲಿರುವ, ಮಾಧ್ವ ವೇದಾಂತದ ಮೇರು ಶಿಖರವೆಂದೇ ಹೆಸರಾದ ಶ್ರೀ ಜಯತೀರ್ಥ ಯತಿಗಳು ಶತಮಾನಗಳ ಹಿಂದೆಯೇ ಗುಜರಾತ್ ರಾಜ್ಯದ ಕರ್ಣಾವತಿಯಲ್ಲಿರುವ ವಿಶ್ವ ವಿದ್ಯಾಲಯಕ್ಕೆ 2 ವರ್ಷ ಅವಧಿಗೆ ಕುಲಪತಿಗಳಾಗಿ ಸಾಕಷ್ಟು ಸಾಧನೆ ಮಾಡಿದ್ದರು. ಈಗ ಗುಜರಾತ್ ಮೂಲದ ನರೇಂದ್ರ ಮೋದಿ ಅವರು ಕಲಬುರಗಿಗೆ ಆಗಮಿಸುವ ಸಂದರ್ಭದಲ್ಲಿ ಹಿಂದಿನ ಎಲ್ಲ ಇತಿಹಾಸದ ಘಟನೆಗಳು ಸಾರ್ವಜನಿಕವಾಗಿ ಚರ್ಚೆಯ ಮುನ್ನೆಲೆಗೆ ಬಂದಿದೆ.
ಮಧ್ಯಾಹ್ನದ ನಂತರ ಮಾನ್ಯಕೇಟಕ್ಕೆ ಆಗಮನ: ನಾಳೆ ಕಲಬುರಗಿಗೆ ಆಗಮಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬೆಳಗ್ಗೆ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ (ಜಿಪಿಎಸ್-ರಿಮೋಟ್ ಆಧಾರಿತ ಜಲಾಶಯ ಗೇಟುಗಳ ಚಾಲನೆ) ವ್ಯವಸ್ಥೆ ಉದ್ಘಾಟನೆ, ಜಲಧಾರೆ, ಅಮೃತ್ ಎರಡನೇ ಹಂತದ ಅಟಲ್ ಮಿಷನ್ ಸೇರಿ 4,223 ಕೋಟಿ ರು.ಗಳ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2.10ಕ್ಕೆ ಮಳಖೇಡಕ್ಕೆ ಆಗಮಿಸಲಿದ್ದಾರೆ. ಈ ವೇಳೆ, 50 ಸಾವಿರ ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ನಂತರ ನಡೆಯುವ ಸಮಾರಂಭದಲ್ಲಿ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳ ತಾಂಡಾ ಹಾಗೂ ಹಟ್ಟಿಗಳಲ್ಲಿ ವಾಸವಿರುವ 51,900 ಬಡ ಕುಟುಂಬಗಳಿಗೆ ಏಕಕಾಲದಲ್ಲಿ ಮನೆಗಳ ಹಕ್ಕುಪತ್ರಗಳನ್ನು ವಿತರಣೆಗೆ ಚಾಲನೆ ನೀಡಲಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.