ದೇವರಾಜು ಕಪ್ಪಸೋಗೆ

ಚಾಮರಾಜನಗರ [ಸೆ.02]:  ಕರುನಾಡಿನ ಕೆಲ ಭಾಗಗಳಲ್ಲಿ ಮಾತ್ರ ವಾಸ ಮಾಡುವ ಗೌರಿ ಮೇದಾರ ಜನಾಂಗದವರನ್ನು ಗೌರಿ ಬಿಟ್ಟರೆ ನಮ್ಮ ಮೊರೆಯನ್ನು ಕೇಳುವವರಾರ‍ಯರು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಅರಣ್ಯ ಪ್ರದೇಶ ಇದ್ದ ಹಿನ್ನೆಲೆ ಚಾಮರಾಜನಗರ, ಮಹದೇಶ್ವರ ಬೆಟ್ಟಸುತ್ತಮುತ್ತಲ ಪ್ರದೇಶದಲ್ಲಿ ಗೌರಿ ಮೇದಾರ ಜನಾಂಗದವರು ಬಿದಿರು ಉತ್ಪನ್ನ ತಯಾರಿಕೆ, ಕುಲ ಕಸುಬನ್ನಾಗಿ ಮಾಡಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಬಿದಿರಿರುವ ಉತ್ಪನ್ನಗಳ ತಯಾರಿಕೆಗೆ ಬೇಕಾದ ಕಿರು ಬಿದಿರು ಮಹದೇಶ್ವರ ಬೆಟ್ಟದಲ್ಲಿ ಹೇರಳವಾಗಿ ದೊರೆಕುತ್ತಿದ್ದು ಮತ್ತು ಚಾಮರಾಜನಗರ ಜಿಲ್ಲೆಯು ರೇಷ್ಮೆ ಉದ್ಯಮದಲ್ಲಿ ರಾಜ್ಯದಲ್ಲೇ ಹಿಂದೆ ಉತ್ತಮ ಹೆಸರು ಮಾಡಿದ್ದು.

ಸುಮಾರು ಹತ್ತಾರು ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಉದ್ಯಮ ಕ್ಷೀಣಿಸುತ್ತಾ ಬಂದಿದೆ, ಇದರ ಬೆನ್ನಲ್ಲೇ ಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಬೆಳಯಲಾಗುತ್ತಿದ್ದ ಕಿರುಬಿದಿರನ್ನು ಅರಣ್ಯ ಇಲಾಖೆಯವರು ಮೇದಾರ ಜನಾಂಗದವರಿಗೆ ನೀಡುವುದನ್ನು ನಿಲ್ಲಿಸಿರುವುದು ಹಾಗೂ ಮಹದೇಶ್ವರ ಬೆಟ್ಟಅರಣ್ಯವನ್ನು ವನ್ಯಧಾಮವನ್ನಾಗಿ ಘೋಷಣೆ ಮಾಡಿರುವುದು ಮೇದಾರರ ಕೈ ಕಟ್ಟಿಹಾಕಿದಂತಾಗಿದೆ.

ಹಬ್ಬಕ್ಕೆ ಮಾತ್ರ ಬಿದಿರಿನ ಬೇಡಿಕೆ:

ಮಹದೇಶ್ವರ ಬೆಟ್ಟಅರಣ್ಯದ ಕಿರು ಬಿದಿರಿನಿಂದ ತಯಾರು ಮಾಡಲಾದ ಬಿದಿರಿನ ಉತ್ಪನ್ನಗಳಿಗೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಸಾಕಷ್ಟುಬೇಡಿಕೆ ಇತ್ತು. ಹೀಗಾಗಿ ಮಹದೇಶ್ವರ ಬೆಟ್ಟಹಾಗೂ ಚಾಮರಾಜನಗರಕ್ಕೆ ಬಂದ ಹೊರಗಿನವರು ಬಿದಿರು ಉತ್ಪನ್ನಗಳನ್ನು ಖರೀದಿ ಮಾಡಿಯೇ ಹೋಗುತ್ತಿದ್ದರು. ಈಗ ಅರಣ್ಯ ಇಲಾಖೆ ಕಿರು ಬಿದಿರನ್ನು ಮೇದಾರರಿಗೆ ನೀಡುವುದನ್ನು ನಿಲ್ಲಿಸಿರುವುದರಿಂದ ಲೋಡ್‌ಗೆ .20 ಸಾವಿರ ಸಿಗುತ್ತಿದ್ದ ಬಿದಿರನ್ನು ಕೊಡಗಿನಿಂದ .30ರಿಂದ 35 ಸಾವಿರ ಕೊಟ್ಟು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೂ, ಕಿರು ಬಿದಿರು ದೊರೆಯದಂತಾಗಿದ್ದು, ಉದ್ಯಮಕ್ಕೆ ಈಗ ಸಂಪೂರ್ಣ ಹೆಬ್ಬಿದಿರನ್ನೇ ಅವಲಂಬಿಸಬೇಕಾಗಿದೆ. ಅದು ಬಿದಿರಿನ ಉತ್ಪನ್ನಗಳಿಗೆ ಗೌರಿ ಹಬ್ಬದ ವೇಳೆ ಮಾತ್ರ ಬೇಡಿಕೆ ಇದ್ದು, ಈ ವೇಳೆ ಮಾತ್ರ ಈ ಜನಾಂಗಕ್ಕೆ ಉದ್ಯೋಗ ಸಿಗುವಂತಾಗಿದೆ. ಉಳಿದ ವೇಳೆ ಬಿದಿರಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿರುವುದರಿಂದ ಅದಕ್ಕಿಂತ ಕಡಮೆ ದರದಲ್ಲಿ ಮಾರುಕಟ್ಟೆಗೆ ಪ್ಲಾಸ್ಟಿಕ್‌ನ ಆಕರ್ಷಕ ವಸ್ತುಗಳು ಮಾರುಕಟ್ಟೆಗೆ ಬಂದಿರುವುದರಿಂದ ಬಿದಿರು ಉತ್ಪನಗಳಿಗೆ ಹೊಡೆತ ಬಿದ್ದಿದೆ.

ಮೊರಕ್ಕೆ ಬೇಡಿಕೆ:

ಪ್ರತಿ ವರ್ಷ ಗೌರಿ ಹಬ್ಬ ಬಂತೆಂದರೇ ನಾರಿಯರು ಬಾಗಿನ ಅರ್ಪಿಸುವ ಚಾಮರಾಜನಗರ ಜಿಲ್ಲೆಯಲ್ಲಿ ತಯಾರು ಮಾಡುವ ಮೊರೆಗೆ ಬೇಡಿಕೆ ಬರುತ್ತದೆ. ಈ ವೇಳೆ ಬೆಂಗಳೂರಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ಮೊರಕ್ಕೆ ಬೇಡಿಕೆ ಬರುತ್ತದೆ. ಈ ಸಂದರ್ಭದಲ್ಲಿ ಒಂದು ತಿಂಗಳು ಕಾಲ ಬಿಡುವಿಲ್ಲದೆ. ಗೌರಿ ಮೇದಾರ ಜನಾಂಗದವರು ಮೊರ ಮಾಡುವ ಕಾಯಕದಲ್ಲಿ ನಿರತರಾಗುತ್ತಾರೆ. ಉಳಿದ ವೇಳೆ ಇವರ ಮೊರೆ ಕೇಳುವವರಿಲ್ಲದೆ. ಬೇರೆ ಬೇರೆ ಕೆಲಸ ಹುಡುಕಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ.

ಬೇರೆ ಕಸುಬುಗೊತ್ತಿಲ್ಲ:

ಹಿಂದೆ ಚಾಮರಾಜನಗರ ಜಿಲ್ಲೆಯಲ್ಲೇ ರೇಷ್ಮೆ ಉದ್ಯಮ ಚೆನ್ನಾಗಿ ನಡೆಯುತ್ತಿದ್ದರಿಂದ ರೇಷ್ಮೆ ಉದ್ಯಮ ನಡೆಸಲು ಬಿದಿರಿನ ಉತ್ಪನ್ನಗಳಾದ ಚಂದ್ರಿಕೆ, ತಟ್ಟೆ, ಸೊಪ್ಪಿನ ಗೂಡೆ, ಕಣ್ಣಿನ ತಟ್ಟೆಗೆ ವರ್ಷವಿಡಿ ಬೇಡಿಕೆ ಇತ್ತು. ಇದರಿಂದಾಗಿ ಗೌರಿ ಮೇದಾರರಿಗೆ ಕೈ ತುಂಬಾ ಕೆಲಸ ಸಿಗುತ್ತಿತ್ತು. ಕುಲ ಕಸುಬು ಚೆನ್ನಾಗಿ ನಡೆಯುತ್ತಿತ್ತು. ಈಗ ಹತ್ತಾರು ವರ್ಷಗಳಿಂದ ರೇಷ್ಮೆ ಉದ್ಯಮ ಕ್ಷೀಣಿಸುತ್ತಾ ಬಂದಂತೆಲ್ಲಾ ಮೇದಾರರ ಕುಲ ಕಸುಬಿಗೂ ಹೊಡೆತ ಬಿದ್ದ ಪರಿಣಾಮ ಆ ಜನಾಂಗದವರು ಕುಲಕಸುಬು ಬಿಟ್ಟು ಬಿಟ್ಟು ಗಾರೆ, ಕೂಲಿ ಕೆಲಸ ಅವಲಂಭಿಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಹಿಂದಿನಿಂದಲೂ ಕುಲ ಕಸುಬು ಕಲಿತವರು ಮಾತ್ರ, ಬೇರೆ ಕಸುಬು ಬಾರದಿರುವುದರಿಂದ ಅದನ್ನೇ ಇಂದಿಗೂ ಮುಂದುವರಿಸಿದ್ದು, ಇತ್ತೀಚಿನ ತಲೆಮಾರಿನವರು ಬಿದಿರಿನ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಂತಾಗಿ ಕುಲಕಸುಬು ತೊರೆಯುತ್ತಿದ್ದಾರೆ. ಹೀಗಾಗಿ ಗೌರಿ ಮೇದಾರ ಮೊರೆಯನ್ನು ಗೌರಿ ಬಿಟ್ಟಾರೆ ಕೇಳುವವರಾರ‍ಯರು ಎನ್ನು್ನವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.