Asianet Suvarna News Asianet Suvarna News

ನೂರಾರು ಜನರ ಬಲಿ ಪಡೆದ ಮಹಾಮಾರಿ: ತಿಪಟೂರಿನಲ್ಲಿದೆ ಪ್ಲೇಗಮ್ಮ ದೇವಸ್ಥಾನ..!

ಗುಳೆಗೆ ಕಾರಣವಾಗಿದ್ದ ಪ್ಲೇಗ್‌ ಮಾಹಾಮಾರಿ ಹೆಸರಿನಲ್ಲೊಂದು ದೇವಸ್ಥಾನ| ಪ್ಲೇಗಿನಮ್ಮನಿಗೊಂದು ದೇವಸ್ಥಾನ| ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿರುವ ಪ್ಲೇಗಮ್ಮ ದೇವಸ್ಥಾನ|

Plegamma Temple is There in Tipatur in Tumakur District
Author
Bengaluru, First Published Apr 20, 2020, 1:47 PM IST

ತುಮಕೂರು(ಏ.20): ಹಲವಾರು ದಶಕಗಳ ಹಿಂದೆ ನೂರಾರು ಜನರ ಸಾವು ಹಾಗೂ ಗುಳೆಗೆ ಕಾರಣವಾಗಿದ್ದ ಪ್ಲೇಗ್‌ ಎಂಬ ಮಾಹಾಮಾರಿ ಹೆಸರಿನಲ್ಲೊಂದು ದೇವಸ್ಥಾನ ಇರುವುದನ್ನು ಕೇಳಿದ್ದೀರಾ?

ಜಿಲ್ಲೆಯ ತಿಪಟೂರು ತಾಲೂಕು ಹಾಲ್ಕುರಿಕೆ ಗ್ರಾಮದಲ್ಲಿ ಪ್ಲೇಗಮ್ಮ ಎಂಬ ದೇವಸ್ಥಾನವಿದೆ. ಹಲವಾರು ದಶಕಗಳ ಹಿಂದೆ ಪ್ಲೇಗ್‌ ಎಂಬ ಮಹಾಮಾರಿಗೆ ಈ ಗ್ರಾಮದ ಸುತ್ತಮುತ್ತ ನೂರಾರು ಜನ ಅಸುನೀಗಿದ್ದರೆ ಮತ್ತೆ ಕೆಲವರು ಈ ರೋಗಕ್ಕೆ ಹೆದರಿ ಗ್ರಾಮದಿಂದ ಗುಳೆ ಹೊರಟಿದ್ದರು. ಆಗ ಯಾರೋ ಪ್ಲೇಗಿನಮ್ಮನನ್ನು ಪ್ರತಿಷ್ಠಾಪಿಸಿದರೆ ರೋಗ ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರಿಂದ ಆಗ ಆ ಗ್ರಾಮದವರೆಲ್ಲಾ ಸೇರಿ ಗ್ರಾಮದ ಹೊರಗಿದ್ದ ಬೇವಿನ ಮರದ ಬುಡದಲ್ಲಿ ಪ್ಲೇಗಿನಮ್ಮ ಎಂಬ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಆಗ ಬೇವಿನ ಮರದ ಕೆಳಗೆ ಇಟ್ಟಿದ್ದ ಪ್ಲೇಗಿನಮ್ಮನಿಗೆ ಈಗ ದೇವಸ್ಥಾನ ಕೂಡ ನಿರ್ಮಾಣವಾಗಿದೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಈ ದೇವಸ್ಥಾನ ತೆಗೆದರೆ ರಾತ್ರಿ 7 ಗಂಟೆಗೆ ಮುಚ್ಚುತ್ತಾರೆ. ಅದರಲ್ಲೂ ಪ್ಲೇಗಿನಮ್ಮನ ವಾರವಾದ ಮಂಗಳವಾರ ಹಾಗೂ ಶುಕ್ರವಾರ ಈ ದೇವರಿಗೆ ವಿಶೇಷ ಪೂಜೆಗಳು ನೆರವೇರುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದ ಈ ಎರಡೂ ದಿವಸ ವಿಶೇಷವಾಗಿ ಜನ ಬರುತ್ತಾರೆ.

ರಾಜ್ಯದಲ್ಲಿವೆ ಪ್ಲೇಗಮ್ಮ, ಸಿಡುಬಮ್ಮ, ಏಡ್ಸಮ್ಮ ಗುಡಿ: ಈಗ ‘ಕೊರೋನಮ್ಮ’ ಹೆಸರಲ್ಲೂ ಪೂಜೆ!

ಪ್ರತಿ ಯುಗಾದಿ ಹಬ್ಬವಾದ ನಾಲ್ಕು ದಿವಸಕ್ಕೆ ದೊಡ್ಡ ಜಾತ್ರೆ ನಡೆಯುತ್ತದೆ. ಕೇವಲ ಹಾಲ್ಕುರಿಕೆ ಸುತ್ತಮುತ್ತಲಿನ ಗ್ರಾಮದವರಷ್ಟೆಅಲ್ಲ ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಅವತ್ತು ಪ್ಲೇಗಿನಿಂದ ಕಂಗಾಲಾಗಿ ಪ್ಲೇಗ್‌ ಅನ್ನು ಒದ್ದೋಡಿಸುವಂತೆ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅದೇ ಮೂರ್ತಿ ಈಗ ಭಕ್ತರ ಬೇಡಿಕೆ ಈಡೇರಿಸುವ ದೇವರಾಗಿದೆ ಎಂಬುದು ಈ ದೇವರಿಗೆ ನಡೆದುಕೊಳ್ಳುವ ಭಕ್ತರ ಆಂಬೋಣವಾಗಿದೆ.

Plegamma Temple is There in Tipatur in Tumakur District

ಮಕ್ಕಳಾಗದಿದ್ದರೆ, ಕಾಯಿಲೆ ಗುಣವಾಗದಿದ್ದರೆ ಮನೆ ಕಟ್ಟಬೇಕೆಂದರೆ, ಉದ್ಯೋಗ ಸಿಗಬೇಕೆಂದರೆ, ಮದುವೆ ತಡವಾಗಿದ್ದಕ್ಕೆ ಭಕ್ತರೆಲ್ಲರೂ ಮೊರೆ ಹೋಗುವುದು ಈ ದೇವರಿಗೆ. ಕಾರ್ತಿಕ ಮಾಸ ಹಾಗೂ ಶ್ರಾವಣದಲ್ಲಿ ಪ್ರತಿ ನಿತ್ಯ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯುತ್ತದೆ. ಒಟ್ಟಾರೆಯಾಗಿ ಈ ಪ್ಲೇಗಿನಮ್ಮ ತುಮಕೂರು ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಯ ಭಕ್ತರಿಗೆ ಸಕಲಾರ್ಥವನ್ನು ನೀಡುವ ದೇವರಾಗಿದೆ.
 

Follow Us:
Download App:
  • android
  • ios