- ಬೀದರ್ ರೈಲ್ವೇ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಹಾವಳಿ - ಕೇಂದ್ರ ಸರ್ಕಾರದ ಕಚೇರಿಗಳಿಗೂ ಇಲ್ಲ ಕಾಳಜಿ, ಪ್ಲಾಸ್ಟಿಕ್ ನಿಷೇಧ ಬರಿ ಮಾತಿಗಾ?- ರೈಲ್ವೆ ಕೆಳಸೇತುವೆಗಳ ಮೇಲೆ ಫ್ಲೆಕ್ಸ್, ಆದಾಯ ಗಳಿಕೆಗೆ ಮಾತ್ರ ಕಿವಿಗೊಟ್ಟಿರುವ ರೈಲ್ವೆ

ಬೀದರ್ (ಆ. 10): ರಾಜ್ಯ ಸರ್ಕಾರದ ಶಕ್ತಿ ಕೇಂದ್ರ ಜಿಲ್ಲಾಡಳಿತ, ನಗರಾಡಳಿತದ ಚುಕ್ಕಾಣಿ ಹಿಡಿದಿರುವ ನಗರಸಭೆ ಪ್ಲಾಸ್ಟಿಕ್ ಫ್ಲೆಕ್ಸ್‌ಗಳಿಂದ ಮುಕ್ತವಾಗಿಲ್ಲವಾದರೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೆ ನಿಲ್ದಾಣದಲ್ಲಿಯೂ ಇದೇ ದುರಾವಸ್ಥೆ. ಖಾಸಗಿ ಏಜೆನ್ಸಿಗಳು ನೀಡುವ ಶುಲ್ಕಕ್ಕಾಗಿ ಬಾಯಿ ತೆರೆದು ನಿಂತಂತೆ ತನ್ನ ಆವರಣದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್‌ಗಳಿಗೆ ಅವಕಾಶ ನೀಡಿದೆ ರೈಲ್ವೆ ಇಲಾಖೆ.

ನಗರಸಭೆಯಿಂದ ತುಸು ದೂರ ಸಾಗಿದ್ರೆ ರೈಲ್ವೆ ನಿಲ್ದಾಣ. ಅದರ ಸುತ್ತಮುತ್ತಲೂ ಪ್ಲಾಸಿಕ್ ಫ್ಲೆಕ್ಸ್‌ಗಳು ರಾರಾಜಿಸುವದನ್ನು ಕಾಣಬಹುದು. ಇಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯದ ಆತಂಕವಾಗಲಿ ಅನಾರೋಗ್ಯದ ವಿಚಾರವಾಗಲಿ ರೈಲ್ವೆ ಇಲಾಖೆ ಅಧಿಕಾರಿಗಳೇ ಇಲ್ಲವೇನೋ ಎಂಬಂತಿದೆ.

ಕೇಂದ್ರ ಸರ್ಕಾರದ ಇಲಾಖೆಗಳು ಸರ್ಕಾರದ ಕಾನೂನುಗಳನ್ನು ಪಾಲಿಸುವಲ್ಲಿ ಮತ್ತು ಅದನ್ನು ಪಾಲಿಸುವಂತೆ ಸಂಬಂಧಿಸಿದವರಿಗೆ ಕಟ್ಟುನಿಟ್ಟಾಗಿ ಸೂಚಿಸುವಲ್ಲಿ ತುಸು ಮುಂದು ಎಂಬ ಮಾತುಗಳಿವೆಯಾದರೆ ಇಲ್ಲಿ ಅದಕ್ಕೆ ಕಿಮ್ಮತ್ತೇ ಇಲ್ಲದಂತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧದ ಆರಂಭ ಕೇಂದ್ರ ರೈಲ್ವೆ ಇಲಾಖೆ ಈ ಹಿಂದೆ ಗಮನಾರ್ಹವಾಗಿ ಜಾರಿಗೆ ತಂದು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಚಹಾ ಕಪ್‌ಗಳನ್ನು ನಿಷೇಧಿಸಿ ಮಣ್ಣಿನ ಕಪ್‌ಗಳನ್ನು ಜಾರಿಗೆ ತಂದಿದ್ದಿದೆ. ಆದರೆ ಬೀದರ್ ರೈಲ್ವೆ ನಿಲ್ದಾಣದ ವಿಚಾರವಾಗಿ ಹೇಳೋದಾದ್ರೆ ಇಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್‌ಗಳ ಹಾವಳಿಗೆ ಕೊನೆಇಲ್ಲದಂತಿದೆ.

ಜನರ ಜೀವಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಸಿರುವ ಫ್ಲೆಕ್ಸ್‌ಗಳು ರೈಲ್ವೆ ನಿಲ್ದಾಣವನ್ನು ಆವರಿಸಿವೆ. ಈ ಬಗ್ಗೆ ವಿಚಾರಿಸಿದರೆ ಮೇಲಿನವರ ಆದೇಶವಿದೆ ಎಂದೆನ್ನಲಾಗುತ್ತದೆ. ನಗರದ ಭಗತಸಿಂಗ್ ವೃತ್ತ ಹಾಗೂ ಬೊಮ್ಮಗೊಂಡೇಶ್ವರ
ವೃತ್ತದ ಮಧ್ಯದಲ್ಲಿರುವ ರೈಲ್ವೆ ಕೆಳಸೇತುವೆಗೆ ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ ಹೀಗೆಯೇ ಇನ್ನಿತರ ರೈಲ್ವೆ ನಿಲ್ದಾಣವೇಕೆ ರೈಲ್ವೆ ಕೆಳಸೇತುವೆ, ಮೇಲ್ಸೇತುವೆಗಳಿಗೂ ಪ್ಲಾಸ್ಟಿಕ್ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಇದಕ್ಕೆ ಕಡಿವಾಣ ಹಾಕಬೇಕಾದ ರೈಲ್ವೆ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದು ಇಲ್ಲಿಯೂ ಅಕ್ರಮದ ವಾಸನೆ ಏಳುವಂತೆ ಮಾಡಿದೆ. ಪ್ಲಾಸ್ಟಿಕ್ ಫ್ಲೆಕ್ಸ್‌ಗಳತ್ತ ರೈಲ್ವೆ ಇಲಾಖೆ ಗಮನಹರಿಸಿ ಅವುಗಳನ್ನು ತೆರೆವುಗೊಳಿಸುವತ್ತ ಮುಂದಾಗಿ ಸಂಬಂಧಿತರಿಗೆ ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಸೂಚಿಸುವದು ಸೂಕ್ತ.

-ಅಪ್ಪಾರಾವ್ ಸೌದಿ