ಮೋಹನ ಹಂಡ್ರಂಗಿ

ಬೆಂಗಳೂರು [ಡಿ.04]:  ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರಕ್ಕಾಗಿ ನಗರದ ‘ಕೆ.ಆರ್‌.ಪುರಂನ ಟಿನ್‌ಫ್ಯಾಕ್ಟರಿ- ಸೆಂಟ್ರಲ್‌ ಸಿಲ್ಕ್ ಬೋರ್ಡ್‌’ ವರೆಗೆ ನಿರ್ಮಿಸುತ್ತಿರುವ ‘ಪ್ರತ್ಯೇಕ ಬಸ್‌ ಪಥ’ದಲ್ಲಿ ಖಾಸಗಿ ವಾಹನಗಳ ನಿಯಂತ್ರಣ ಸವಾಲಾಗಿದೆ. ಹೀಗಾಗಿ ಅಂತಿಮವಾಗಿ ಮಾರ್ಗದುದ್ದಕ್ಕೂ ‘ಪ್ಲಾಸ್ಟಿಕ್‌ ಡಿವೈಡರ್‌’ ಅಳವಡಿಸಲು ತೀರ್ಮಾನಿಸಲಾಗಿದೆ.

ಬಿಬಿಎಂಪಿ, ಬಿಎಂಟಿಸಿ, ನಗರ ಸಂಚಾರ ಪೊಲೀಸ್‌, ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ 20 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಪ್ರತ್ಯೇಕ ಬಸ್‌ ಪಥ ನಿರ್ಮಿಸಲಾಗುತ್ತಿದೆ. 3.5 ಮೀಟರ್‌ ಅಗಲದ ಈ ಪ್ರತ್ಯೇಕ ಪಥವನ್ನು ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಮೀಸಲು ಮಾಡಲಾಗಿದೆ. ಇತರೆ ವಾಹನಗಳು ಈ ಪಥ ಪ್ರವೇಶಿಸದಂತೆ ಬಿಎಂಟಿಸಿ ಸಿಬ್ಬಂದಿ, ಸಂಚಾರ ಪೊಲೀಸರು, ಪಾಲಿಕೆಯ ಮಾರ್ಷಲ್‌ಗಳು ಅರಿವು ಮೂಡಿಸುತ್ತಿದ್ದಾರೆ, ಆದರೆ ಚಾಲಕಿ ಸವಾರರು, ಸಿಬ್ಬಂದಿ ಇದ್ದಾಗ ರಸ್ತೆಯಲ್ಲಿ ಸಂಚರಿಸಿ ಬಳಿಕ ಮುಂದೆ ಹೋಗಿ ಮತ್ತೆ ಪ್ರತ್ಯೇಕ ಪಥ ಪ್ರವೇಶಿಸುತ್ತಿದ್ದಾರೆ. ಇದರಿಂದ ಪ್ರತ್ಯೇಕ ಪಥದಲ್ಲಿ ಖಾಸಗಿ ವಾಹನಗಳ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ.

ಹಾಗಾಗಿ ಸದರಿ ಮಾರ್ಗದಲ್ಲಿ ಬಸ್‌ ನಿಲ್ದಾಣ, ರಸ್ತೆಗಳು ಕೂಡುವ ಜಂಕ್ಷನ್‌ ಹೊರತುಪಡಿಸಿ ಮಾರ್ಗದುದ್ದಕ್ಕೂ ಪ್ಲಾಸ್ಟಿಕ್‌ ಡಿವೈಡರ್‌ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ಖಾಸಗಿ ವಾಹನಗಳು ಪ್ರತ್ಯೇಕ ಪಥ ಪ್ರವೇಶಿಸಲು ಅವಕಾಶವಿರುವುದಿಲ್ಲ. ಇನ್ನು ಮಾರ್ಗದ ಬಸ್‌ ನಿಲ್ದಾಣಗಳು, ರಸ್ತೆಗಳು ಕೂಡುವ ಜಂಕ್ಷನ್‌, ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಡೆ ಮಾತ್ರ ಬೊಲ್ಲಾರ್ಡ್‌ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೊಲ್ಲಾರ್ಡ್‌ ಅಪಘಾತ:  ಬಿಬಿಎಂಪಿ ಆರಂಭದಲ್ಲಿ ಇತರೆ ವಾಹನಗಳು ಪ್ರತ್ಯೇಕ ಪಥ ಪ್ರವೇಶಿಸದಂತೆ ಕಬ್ಬಿಣದ ಬೊಲ್ಲಾರ್ಡ್‌ ಅಳವಡಿಕೆಗೆ ಮುಂದಾಗಿತ್ತು. ದ್ವಿಚಕ್ರವಾಹನ ಸವಾರರು ಈ ಬೊಲ್ಲಾರ್ಡ್‌ಗಳ ನಡುವೆ ಪ್ರತ್ಯೇಕ ಪಥ ಪ್ರವೇಶಿಸುವಾಗ ಗುದ್ದಿಕೊಂಡು ರಸ್ತೆಗೆ ಬೀಳುತ್ತಿದ್ದರು. ಒಂದು ವಾರದಲ್ಲಿ ಹತ್ತಾರು ಅಪಘಾತಗಳು ಸಂಭವಿಸಿದ ಪರಿಣಾಮ ಕಬ್ಬಿಣದ ಬೊಲ್ಲಾರ್ಡ್‌ ಅಳವಡಿಕೆ ಕೈಬಿಡಲಾಗಿತ್ತು. ನಂತರ ಕಬ್ಬಿಣದ ಬದಲು ಪ್ಲಾಸ್ಟಿಕ್‌ ಬೊಲ್ಲಾರ್ಡ್‌ ಅಳವಡಿಕೆಗೆ ತೀರ್ಮಾನಿಸಿತ್ತು. ಆಗಲೂ ದ್ವಿಚಕ್ರವಾಹನ, ಆಟೋ ರಿಕ್ಷಾಗಳು ಪ್ರತ್ಯೇಕ ಪಥದಲ್ಲಿ ನುಸುಳುವುದು ಹೆಚ್ಚಾಗಿತ್ತು. ಹಾಗಾಗಿ ಈ ಬೊಲ್ಲಾರ್ಡ್‌ ಅಳವಡಿಕೆ ನಿಲ್ಲಿಸಲಾಗಿದೆ. ಇದೀಗ ಖಾಸಗಿ ವಾಹನ ನಿಯಂತ್ರಿಸಲು ಡಿವೈಡರ್‌ ಮೊರೆ ಹೋಗಲು ನಿರ್ಧರಿಸಲಾಗಿದೆ.

ದಂಡ ಕಷ್ಟ:  ಪ್ರತ್ಯೇಕ ಪಥದಲ್ಲಿ ಇತರೆ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಲು ಅವಕಾಶವಿದೆ. ಆದರೆ, ವಾಸ್ತವದಲ್ಲಿ ಸಂಚಾರ ಪೊಲೀಸರು 20 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ತಪಾಸಣೆ ನಡೆಸುವುದು ಕಷ್ಟ. ವಾಹನ ಸವಾರರು ಸಹ ಪೊಲೀಸರು ಇರುವ ಸ್ಥಳದಲ್ಲಿ ರಸ್ತೆಯಲ್ಲೇ ಸಂಚರಿಸಿ ನಂತರ ಮುಂದೆ ಸಾಗಿ ಬಸ್‌ ಪಥ ಪ್ರವೇಶಿಸುವ ಸಾಧ್ಯತೆಗಳಿವೆ. ಪ್ರಸ್ತುತ ಸಂಚಾರ ಪೊಲೀಸರು ಕೆಲ ಸ್ಥಳಗಳಲ್ಲೇ ಮೊಕ್ಕಾಂ ಹೂಡಿದ್ದರೂ ಖಾಸಗಿ ವಾಹನ ನಿಯಂತ್ರಣ ಕಷ್ಟವಾಗಿದೆ. ಹಾಗಾಗಿ ಇತರೆ ವಾಹನಗಳು ಬಸ್‌ ಪಥ ಪ್ರವೇಶಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ತರಾತುರಿ ಘೋಷಣೆ

ರಾಜ್ಯ ಸರ್ಕಾರ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರದ 12 ಕಾರಿಡಾರ್‌ಗಳಲ್ಲಿ ಪ್ರತ್ಯೇಕ ಬಸ್‌ ಪಥ ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ, ಪೂರ್ವಸಿದ್ಧತೆ ಇಲ್ಲದೆ ಅನುಷ್ಠಾನಕ್ಕೆ ಮುಂದಾಗಿದ್ದರಿಂದ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಸಮೂಹ ಸಾರಿಗೆ ಉತ್ತೇಜಿಸಲು ಹಾಗೂ ಪ್ರಯಾಣದ ಸಮಯ ಉಳಿತಾಯಕ್ಕೆ ಪ್ರತ್ಯೇಕ ಬಸ್‌ ಪಥ ಯೋಜನೆ ಅತ್ಯುತ್ತಮವಾಗಿದೆ. ಆದರೆ ತರಾತುರಿಯಲ್ಲಿ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಎದುರಾಗುತ್ತಿರುವ ಒಂದೊಂದು ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸಿಕೊಂಡು ಮುಂದಡಿ ಇಡಬೇಕಿದೆ. ಹಾಗಾಗಿ ನಿಗದಿತ ಅವಧಿಯೊಳಗೆ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಬಿಎಂಟಿಸಿಯ ಅಧಿಕಾರಿಯೊಬ್ಬರು ಹೇಳಿದರು.