ಮಂಡ್ಯ  ( ಆ.18) : ಫೋನ್ ಟ್ಯಾಪಿಂಗ್ ಬಗ್ಗೆ ಲೋಕಸಭಾ ಚುನಾವಣೆ ವೇಳೆಯೇ ನಮಗೆ ಅನುಮಾನ ಇತ್ತು.  ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಅನುಮಾನದ ಕಾರಣ ನಾವು ಈ ಬಗ್ಗೆ ದೂರು ನೀಡಿದ್ದೆವು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.  

ಆಗ ನಮ್ಮದು ಆರೋಪ, ದೂರು, ಪಿತೂರಿ ಎಂದು ಹೇಳುತ್ತಿದ್ದರು. ಈಗ ಒಂದೊಂದೇ ಸತ್ಯ ಬೆಳಕಿಗೆ ಬರುತ್ತಿದೆ. ಫೋನ್ ಟ್ಯಾಪಿಂಗ್ ಆಗಿತ್ತೋ ಆಗಿಲ್ಲವೋ ಅಂತಾ ನನಗೆ ಗೊತ್ತಿಲ್ಲ. ಈಗ ಫೋನ್ ಟ್ರಾಪ್ ಪ್ರಕರಣವನ್ನು ಮುಖ್ಯಮಂತ್ರಿ ಯಡಿಯೂರಪ್ಪ  ಸಿಬಿಐಗೆ ನೀಡಿದ್ದಾರೆ. ಇದು ಒಳ್ಳೆಯ ಕೆಲಸ ಎಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಹೇಳಿದರು. 

ಮಂಡ್ಯ ಲೋಕಸಭೆ ಚುನಾವಣೆ ವೇಳೆ ಇಬ್ಬರು ಸ್ಟಾರ್ ನಟರ ಫೋನ್ ಕದ್ದಾಲಿಕೆ?

ಸಿಬಿಐಗೆ ವಹಿಸಿರುವುದರಿಂದ ಇದರ ಹಿಂದೆ ಯಾರಿದ್ದಾರೆ ಎನ್ನುವುದು ಬೆಳಕಿಗೆ ಬರಲಿದೆ. ಬೇರೆಯವರ ಫೋನ್ ಕದ್ದಾಲಿಕೆ ಮಾಡುವುದು ಕ್ರಿಮಿನಲ್ ಅಪರಾಧ ಎಂದರು. 

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದ ವೇಳೆ  ಆಡಳಿತ ಯಂತ್ರ ಎಷ್ಟು ದುರುಪಯೋಗವಾಗಲು ಸಾಧ್ಯವೋ ಅಷ್ಟು ದುರುಪಯೋಗವಾಗಿದೆ ಎಂದು ಸುಮಲತಾ ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  ಅಲ್ಲದೇ ಈಗಿನ ಸರ್ಕಾರ ಪ್ರಕರಣವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುತ್ತದೆ ಎನ್ನುವುದು ನೋಡಬೇಕು ಎಂದರು.