ಹಾವೇರಿ: ಪೊಲೀಸರಿಗೇ ಧಮ್ಕಿ ಹಾಕಿದ ಭೂಪ..!
* ಲಾಠಿ ರುಚಿ ತೋರಿಸಿದ್ದಕ್ಕೆ ನೋಡಿಕೊಳ್ಳುತ್ತೇನೆ ಎಂದು ಅವಾಜ್
* ಹಾವೇರಿ ನಗರದಲ್ಲಿ ನಡೆದ ಘಟನೆ
* ಆತನಿಗೆ ವಿಷಯ ಮನವರಿಕೆ ಮಾಡಲು ಯತ್ನಿಸಿದ ಪೊಲೀಸರು
ಹಾವೇರಿ(ಜೂ.03): ಗೃಹ ಸಚಿವರು ಹೋಗುತ್ತಿದ್ದ ವೇಳೆ ಎಮ್ಮೆ ಹೊಡೆದುಕೊಂಡು ಹೋಗುತ್ತಿದ್ದ ಯುವಕನನ್ನು ತಡೆದು ಲಾಠಿ ರುಚಿ ತೋರಿಸಿದ್ದರಿಂದ ಆಕ್ರೋಶಗೊಂಡ ಆ ಯುವಕನ ಪಾಲಕ ಪೊಲೀಸರಿಗೇ ಧಮ್ಕಿ ಹಾಕಿದ ಘಟನೆ ಬುಧವಾರ ನಗರದ ಸಿದ್ದಪ್ಪ ವೃತ್ತದಲ್ಲಿ ನಡೆಯಿತು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗೃಹ ಹಾಗೂ ಕೃಷಿ ಸಚಿವರ ವಾಹನಗಳು ಸಿದ್ದಪ್ಪ ವೃತ್ತದ ಮೂಲಕ ಹಾಯ್ದು ಹೋಗುವುದಿತ್ತು. ಈ ವೇಳೆ ನಾಲ್ಕು ಎಮ್ಮೆಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಪೊಲೀಸರು ತಡೆದಿದ್ದಾರೆ.
ಲಾಕ್‌ಡೌನ್ ವಿಸ್ತರಣೆ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದು ಹೀಗೆ
ಅಷ್ಟರಲ್ಲಾಗಲೇ ಮೂರು ಎಮ್ಮೆಗಳು ರಸ್ತೆ ದಾಟಿದ್ದವು. ಇನ್ನೊಂದು ಎಮ್ಮೆಯನ್ನೂ ಹೊಡೆದುಕೊಂಡು ಹೋಗುತ್ತೇನೆ ಎಂದು ಯುವಕ ಕೇಳಿಕೊಂಡಿದ್ದಾನೆ. ಅಷ್ಟರಲ್ಲೇ ಗೃಹ ಸಚಿವರ ಕಾರು ಬರುವುದನ್ನು ಕಂಡ ಪೊಲೀಸರು ಯುವಕನಿಗೆ ರಸ್ತೆ ದಾಟಲು ಅವಕಾಶ ನೀಡಲಿಲ್ಲ. ಆದರೂ ಆ ಯುವಕ ಎಮ್ಮೆಗಳನ್ನು ಹೊಡೆದುಕೊಂಡು ರಸ್ತೆ ದಾಟಿದ್ದರಿಂದ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ನಂತರ ಈ ವಿಷಯವನ್ನು ಪಾಲಕರಿಗೆ ತಿಳಿಸಿ ಅವರೊಂದಿಗೆ ಮರಳಿ ಸಿದ್ದಪ್ಪ ವೃತ್ತಕ್ಕೆ ಬಂದ ಯುವಕ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ. ನಿಮಗೆ ಲಾಠಿಯಿಂದ ಹೊಡೆಯಲು ಯಾರು ಹೇಳಿದ್ದಾರೆ, ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಧಮ್ಕಿ ಹಾಕಿದ. ಪೊಲೀಸರು ಸಮಾಧಾನದಿಂದಲೇ ಆತನಿಗೆ ವಿಷಯ ಮನವರಿಕೆ ಮಾಡಲು ಯತ್ನಿಸಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸ್ವಲ್ಪ ದೂರ ಹೋಗಿ ಮತ್ತೆ ವಾಪಸ್ ಬಂದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ನೇಮ್ ಪ್ಲೇಟ್‌ನಲ್ಲಿದ್ದ ಹೆಸರನ್ನು ನೋಡಿಕೊಂಡು, ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತ ತೆರಳಿದ್ದಾನೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona