ಬೆಂಗಳೂರು [ಜು.2] :  ಹನ್ನೆರಡು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಳೆದುಕೊಂಡ ಎಸ್ಸೆಸ್ಸೆಲ್ಸಿ ಹಾಗೂ ಡಿಪ್ಲೋಮಾ ವಿದ್ಯಾಭ್ಯಾಸದ ಅಂಕಪಟ್ಟಿಯನ್ನು ಮತ್ತೊಬ್ಬ ಬಳಸಿಕೊಂಡು ಕೆಲಸ ಪಡೆದಿದ್ದಲ್ಲದೆ, ಅವರ ಹೆಸರಿನಲ್ಲಿಯೇ ಬ್ಯಾಂಕ್‌ವೊಂದರಲ್ಲಿ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಮಳವಳ್ಳಿಯ ಶಿಂಶಾಪುರದ ಅವಲಹಳ್ಳಿ ನಿವಾಸಿ ಕೆಪಿಟಿಸಿಎಲ್‌ನಲ್ಲಿ (ವಿದ್ಯುತ್‌ ಸರಬರಾಜು ಮಂಡಳಿ) ಜೂನಿಯರ್‌ ಎಂಜಿನಿಯರ್‌ ಆಗಿರುವ ಎಸ್‌.ಎನ್‌.ಕಿರಣ್‌ ಎಂಬುವವರು ಪೀಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಚಾಲಾಕಿ ವಂಚಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

2007ರ ಆ.24ರಂದು ಕಿರಣ್‌ ಅವರು ಹೆಬ್ಬುಗೋಡಿಯಿಂದ ಚಂದಾಪುರಕ್ಕೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ತಮ್ಮ ಬಳಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಡಿಪ್ಲೋಮಾ ವಿದ್ಯಾಭ್ಯಾಸದ ಅಂಕಪಟ್ಟಿಯನ್ನು ಕಳೆದುಕೊಂಡಿದ್ದರು. ಅಂಕಪಟ್ಟಿಕಳೆದು ಹೋದ ಬಗ್ಗೆ ಅಂದೇ ಹೆಬ್ಬುಗೋಡಿ ಠಾಣೆಗೆ ದೂರು ನೀಡಿ ಕಿರಣ್‌ ಸ್ವೀಕೃತಿಯನ್ನು ಕೂಡ ಪಡೆದಿದ್ದರು. ಪ್ರಸ್ತುತ ಕಿರಣ್‌ ಅವರು ಕೆಪಿಎಸ್‌ಎಲ್‌ನಲ್ಲಿ ಜೂನಿಯರ್‌ ಎಂಜಿನಿಯರ್‌ ಆಗಿದ್ದು, ವೇತನ ಪಡೆಯುವ ಸಲುವಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರದ ಎಸ್‌ಬಿಐ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದರು.

ಕಳೆದ ಏ.14ರಂದು ಕಿರಣ್‌ ಅವರ ವೇತನ ತಡೆ ಹಿಡಿದಿರುವ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿದೆ. ಕಿರಣ್‌ ಎಸ್‌ಬಿಐ ಶಾಖೆಗೆ ತೆರಳಿ ವಿಚಾರಿಸಿದಾಗ ಬೆಂಗಳೂರಿನ ಪೀಣ್ಯ (ಎಸ್‌ಎಂಇ) ಶಾಖೆಯಲ್ಲಿ ಹಣವನ್ನು ತಡೆ ಹಿಡಿದಿರುವುದಾಗಿ ತಿಳಿಸಿದ್ದರು. ಎಸ್‌ಎಂಇ ಶಾಖೆಗೆ ಬಂದು ವಿಚಾರ ಮಾಡಿದಾಗ ಅಪರಿಚಿತ ವ್ಯಕ್ತಿ ಕಿರಣ್‌ ಅವರ ಹೆಸರಿನಲ್ಲಿ ನಕಲಿ ಚುನಾವಣಾ ಗುರುತಿನ ಚೀಟಿ ಮತ್ತು ನಕಲಿ ಪಾನ್‌ ಕಾರ್ಡ್‌ ದಾಖಲೆ ಸೃಷ್ಟಿಸಿ, ಬ್ಯಾಂಕ್‌ಗೆ ನೀಡಿ, ಬ್ಯಾಂಕ್‌ನಲ್ಲಿ ಕೆವೈಸಿ ಸೃಷ್ಟಿಸಿ ಖಾತೆಯನ್ನು ತೆರೆದಿದ್ದಾನೆ.

ಇದೇ ಖಾತೆಗೆ ಆತ ಸೇರಿದ್ದ ಕಂಪನಿ ಕೂಡ ವೇತನ ಜಮೆ ಮಾಡುತ್ತಿದ್ದು, ಆರೋಪಿ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದ. ಅಲ್ಲದೆ, ಇದೇ ಅಂಕಪಟ್ಟಿನೀಡಿ ‘ಔಮಾ ಇಂಡಿಯಾ ಪ್ರೈ.ಲಿ’ ಕಂಪನಿಯಲ್ಲಿ ಕೆಲಸ ಕೂಡ ಗಿಟ್ಟಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪಾನ್‌ಕಾರ್ಡ್‌ ನೀಡಿದ ಸುಳಿವು!

ಮೂಲ ಅಂಕಪಟ್ಟಿಹೊಂದಿರುವ ಕಿರಣ್‌ ಅವರು ವಿದ್ಯಾಭ್ಯಾಸ ಹಾಗೂ ಜನ್ಮ ದಿನಾಂಕ ನೀಡಿ ಪಾನ್‌ಕಾರ್ಡ್‌ ಪಡೆದಿದ್ದಾರೆ. ಆರೋಪಿಯೂ ಕೂಡ ಇದೇ ಅಂಕಪಟ್ಟಿಹಾಗೂ ಅದರಲ್ಲಿನ ಜನ್ಮ ದಿನಾಂಕ ಹಾಗೂ ಪೋಷಕರ ಹೆಸರು ನೀಡಿ ಪಾನ್‌ ಕಾರ್ಡ್‌ ಪಡೆದಿದ್ದಾನೆ. ಇತ್ತೀಚೆಗೆ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸುವಾಗ ಒಂದೇ ಮಾಹಿತಿಯ ಎರಡು ಪಾನ್‌ಕಾರ್ಡ್‌ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಣಕಾಸಿನ ವ್ಯವಹಾರವನ್ನು ತಡೆ ಹಿಡಿದಾಗ ಮೂಲ ವಾರಸುದಾರರಿಗೆ ಈ ವಂಚನೆ ತಿಳಿದಿದೆ. ಹಳೆಯ ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿಗಳ ಫೋಟೋ ಇರುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಆರೋಪಿಯು ವಂಚನೆ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.