ಆನೆ ಕಾಣುತ್ತಿದ್ದಂತೆ ಬೈಕನ್ನು ನಿಲ್ಲಿಸಿ ಓಡುವಾಗ ಬಿದ್ದ ರವಿ ಅವರನ್ನು ತುಳಿದ ಆನೆ| ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗಡಿಭಾಗವಾದ ಬೆಟ್ಟಗಳಲೆ ಸಮೀಪ ನಡೆದ ಘಟನೆ| ಮೃತನ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಪತ್ನಿ ಆಶಾರಾಣಿ|
ಅರಕಲಗೂಡು(ಜ.29): ತಾಲೂಕಿನ ಗಡಿಭಾಗವಾದ ಬೆಟ್ಟಗಳಲೆ ಸಮೀಪ ಆನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ತಾಲೂಕಿನ ಕೊಣನೂರು ಹೋಬಳಿ ಚಿಕ್ಕಬೊಮ್ಮನಹಳ್ಳಿ ಗ್ರಾಮದ ರವಿ(38) ಮೃತ ವ್ಯಕ್ತಿ. ರವಿ ಮತ್ತು ಅದೇ ಗ್ರಾಮದ ದಿನೇಶ್(ಕಿಂದರಿ ಜೋಗಿ) ಎಂಬುವರು ಸೋಮವಾರಪೇಟೆಯಲ್ಲಿ ಕಾಫಿ ಲೋಡ್ ಮಾಡಿ ವಾಪಸ್ ಬರುತ್ತಿದ್ದಾಗ ಜ.27ರ ರಾತ್ರಿ ಬೆಟ್ಟಗಳಲೆ ಸಮೀಪ ರಸ್ತೆಯಲ್ಲಿ ಬರುವಾಗ ಆನೆ ಕಾಣುತ್ತಿದ್ದಂತೆ ಬೈಕನ್ನು ನಿಲ್ಲಿಸಿ ಓಡುವಾಗ ಬಿದ್ದ ರವಿ ಅವರನ್ನು ಆನೆ ತುಳಿದ ಪರಿಣಾಮ ಮೃತಪಟ್ಟಿದ್ದಾರೆ.
ಮೃತ ರವಿ ಅವರು ಪತ್ನಿ ಸುನೀತಾ, ಮಕ್ಕಳಾದ ಪೂರ್ಣಿಮಾ, ಜೀವನ್‌ರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಕೊಣನೂರು ಪೊಲೀಸ್ ಠಾಣೆಯ ಪಿಎಸ್‌ಐ ಅಜಯ್‌ಕುಮಾರ್ ಮತ್ತು ಸಿಬ್ಬಂದಿ, ಅರಣ್ಯ ಇಲಾಖೆಯ ಪ್ರೊಬೆಷನರಿ ಎಸಿಎಫ್ ಕಾವ್ಯಶ್ರೀ, ಆರ್‌ಎಫ್‌ಒ ಅರುಣ್, ಕೊಣನೂರು ಶಾಖೆಯ ಡಿಆರ್‌ಎಫ್‌ಓ ಗುರುಸ್ವಾಮಿ, ಅರಕಲಗೂಡು ಶಾಖೆಯ ಶಂಕರ್, ಅರಣ್ಯರಕ್ಷರುಗಳಾದ ದೇವೇಂದ್ರ, ರಾಘವೇಂದ್ರ, ರಮೇಶ್, ಶಿವಾನಂದ, ನಾಗೇಶ್, ಶಿವಕುಮಾರ್, ಸೋಮವಾರಪೇಟೆ ವಿಭಾಗದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತರ ಶವವನ್ನು ಕೊಣನೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಹೊಳೆನರಸೀಪುರದಲ್ಲಿ ಮಾತ್ರ ಸ್ಪರ್ಧಿಸಲ್ಲ, ಹಾಸನದಿಂದ ನಿಲ್ತೀನಿ : ಕೈ ನಾಯಕ
ಗುರುವಾರ ಬೆಳಿಗ್ಗೆ ಆಸ್ಪತ್ರೆ ಬಳಿಗೆ ಸಕಲೇಶಪುರ ಉಪವಿಭಾಗದ ಎಸಿಎಫ್ ಲಿಂಗರಾಜು, ಡಿವೈಎಸ್‌ಪಿ ಬಿ.ಬಿ. ಲಕ್ಷ್ಮೇಗೌಡ, ಸಿಪಿಐ ಸತ್ಯನಾರಾಯಣ್, ಶಾಸಕ ಎ.ಟಿ. ರಾಮಸ್ವಾಮಿರವರ ಪತ್ನಿ ಆಶಾರಾಣಿ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಅರಣ್ಯ ಇಲಾಖೆಯಿಂದ ಪರಿಹಾರದ ಮೊತ್ತವಾಗಿ 2 ಲಕ್ಷ ರು.ಗಳನ್ನು ಮೃತನ ಪತ್ನಿ ಸುನೀತಾರಿಗೆ ನೀಡಿದರು.
ಮೃತ ಕುಟುಂಬಕ್ಕೆ ಈಗ 2 ಲಕ್ಷ ರುಗಳ ಚೆಕ್ಕನ್ನು ವಿತರಿಸಲಾಗಿದೆ. ಮೃತರ ಪತ್ನಿಗೆ ಪ್ರತಿ ತಿಂಗಳು ಎರಡು ಸಾವಿರ ರು. ಪಿಂಚಣಿಯನ್ನು ಐದು ವರ್ಷಗಳವರೆಗೆ ನೀಡಲಾಗುವುದು. ಮೃತರ ಕುಟುಂಬದವರ ದಾಖಲಾತಿಗಳನ್ನು ತೆಗೆದುಕೊಂಡು ಉಳಿಕೆ 5.5 ಲಕ್ಷ ರುಗಳ ಪರಿಹಾರದ ಹಣವನ್ನು ಶೀಘ್ರದಲ್ಲಿ ಕೊಡಿಸಲಾಗುವುದು ಎಂದರು.
