ಶಿಗ್ಗಾಂವಿ(ಸೆ.07): ಸೀಮೆಎಣ್ಣೆ ಬಿದ್ದು ಬೆಂಕಿ ಹೊತ್ತಿಕೊಂಡು ಪತ್ನಿ ಮೃತಪಟ್ಟ ವಿಷಯ ತಿಳಿದು ಪತಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ತಾಲೂಕಿನ ಹುಲಸೋಗ್ಗಿ ಗ್ರಾಮದಲ್ಲಿ ಜರುಗಿದೆ. ಲಲಿತಾ ಭೀಮಪ್ಪ ಸಿಂದ್ಯೆ (45) ಭೀಮಪ್ಪ ರಾಮಪ್ಪ ಸಿಂದ್ಯೆ (51) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಅಡುಗೆಯ ಮನೆಯಲ್ಲಿಯ ಅಟ್ಟದ ಮೇಲಿರುವ ಸೀಮೆಎಣ್ಣೆಯನ್ನು ಬೆಕ್ಕು ಉರುಳಿಸಿದ ಪರಿಣಾಮ ಸೀಮೆಎಣ್ಣೆ ತಾಗಿ ಬೆಂಕಿ ಹೊತ್ತಿಕೊಂಡಿತು. ಘಟನೆಯಲ್ಲಿ ಪತಿ-ಪತ್ನಿ ಹಾಗೂ ಪುತ್ರಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದರು. ಆದರೆ ಪತ್ನಿ ಮೃತಪಟ್ಟರು. ಈ ವಿಷಯ ತಿಳಿದು ಪತಿಗೂ ಹೃದಯಾಘಾತವಾಯಿತು.

ಹಿರೇಕೆರೂರು: ಕಾಲು ಮುರಿದ ಕುದುರೆ ಆರೈಕೆ ಮಾಡಿ ಮಾನವೀಯತೆ ಮೆರೆದ ಪೊಲೀಸ್‌

ಘಟನೆ ವಿವರ:

ಆ. 25ರಂದು ಮನೆಯಲ್ಲಿಯ ಅಟ್ಟದ ಮೇಲಿಟ್ಟಿರುವ ಸೀಮೆಎಣ್ಣೆಯ ಕ್ಯಾನೊಂದನ್ನು ಬೆಕ್ಕು ಕೆಡವಿತು. ಒಲೆಯಲ್ಲೇ ಬಿದ್ದು ಬೆಂಕಿ ಹೊತ್ತಿಕೊಂಡಿತು. ಒಲೆಯ ಸಮೀಪದಲ್ಲಿರುವ ಲಲಿತಾ ಹಾಗೂ ಭೀಮಪ್ಪ, ಮಗಳು ಅಪೇಕ್ಷಾ ಮೇಲೆಯೂ ಸೀಮೆಎಣ್ಣೆ ಬಿದ್ದಿತ್ತು. ಹೀಗಾಗಿ ಬೆಂಕಿ ತಗುಲಿತು. ತೀವ್ರ ಗಾಯಗೊಂಡು ಅವರನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭೀಮಪ್ಪ ಹಾಗೂ ಅಪೇಕ್ಷಾ ಗುಣಮುಖರಾಗಿ ಹೊರಬಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಲಲಿತಾ ಮೃತಪಟ್ಟರು. ಈ ವಿಷಯ ತಿಳಿದು ಲಲಿತಾ ಅವರ ಪತಿ ಭೀಮಪ್ಪ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತು ತಡಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಮಂಜಪ್ಪ ತನಿಖೆ ಕೈಗೊಂಡಿದ್ದಾರೆ.