ಬೆಂಗಳೂರು[ಮಾ.02]: ಕಾರಿನಲ್ಲಿದ್ದ ಮಹಿಳೆಯರ ಜೊತೆ ಅನುಚಿತ ವರ್ತನೆ ತೋರಿದ್ದ ಆರೋಪಿಯೊಬ್ಬನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುರುನರೇಶ್‌ (25) ಬಂಧಿತ ಆರೋಪಿ. ಗುರುನರೇಶ್‌ ಮೂಲತಃ ಆಂಧ್ರಪ್ರದೇಶದವನಾಗಿದ್ದು, ಕೆಲ ವರ್ಷಗಳಿಂದ ಹೆಬ್ಬಾಳದ ಚೋಳ ನಗರದಲ್ಲಿ ನೆಲೆಸಿದ್ದ. ಆರೋಪಿ ಮೆಡಿಕಲ್‌ ರೆಪ್ರೆಸೆಂಟೇಟಿವ್‌ ಆಗಿ ಕೆಲಸ ಮಾಡುತ್ತಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುನರೇಶ್‌ ತನ್ನ ಸ್ನೇಹಿತರ ಜತೆ ಜ.26ರಂದು ರಾತ್ರಿ 1.30ರ ಸುಮಾರಿಗೆ ನಾಗೇನಹಳ್ಳಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ. ಈ ವೇಳೆ ಅಲ್ಲಿಯೇ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿ ಯುವಕರನ್ನು ಪ್ರಶ್ನಿಸಲು ಮುಂದಾಗುತ್ತಾರೆ. ಈ ವೇಳೆ ಆರೋಪಿಗಳು ಹೊಯ್ಸಳ ಸಿಬ್ಬಂದಿ ಮೇಲೆ ದ್ವಿಚಕ್ರ ವಾಹನ ಗುದ್ದಿಸಲು ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅಲ್ಲಿಯೇ ಮುಂದೆ ಹೋಗುತ್ತಿದ್ದ ಕಾರೊಂದಕ್ಕೆ ಆರೋಪಿಗಳು ದ್ವಿಚಕ್ರ ವಾಹನ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದರು. 

ಈ ವೇಳೆ ಆರೋಪಿಗಳು ಕಾರಿನೊಳಗಿದ್ದ ಮಹಿಳೆಯರನ್ನು ಮುಟ್ಟಿ, ಬಟ್ಟೆ ಎಳೆದಾಡಿ ಅಸಭ್ಯ ವರ್ತನೆ ತೋರಿ, ಅಶ್ಲೀಲ ಪದಗಳಿಂದ ನಿಂದಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಗುರುನರೇಶ್‌ ಹಾಗೂ ಆತನ ಸ್ನೇಹಿತರು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿತ್ತು. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.