ಮೈಸೂರು (ಫೆ.24): ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಕೈಗಾರಿಕೆ, ವಾಣಿಜ್ಯ, ಮೂಲ ಸೌಕರ್ಯ ಅಭಿವೃದ್ಧಿ, ಗಣಿಗಾರಿಕೆ ಹಾಗೂ ಮನೋರಂಜನೆ ಘಟಕಗಳು ಅಂತರ್ಜಲವನ್ನು ಬಳಸಲು ಹಾಗೂ ಕೊಳವೆ ಬಾವಿ ಕೊರೆಯಲು ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಹಾಗೂ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಇತ್ತೀಚೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂತರ್ಜಲ ಬಳಕೆದಾರರು  2021ರ ಏ. 30ರೊಳಗೆ ಅರ್ಜಿ ಸಲ್ಲಿಸಬಹುದು ಎಂದರು.

ಮೈಸೂರು ಡೀಸಿ ರೋಹಿಣಿ ವಿರುದ್ಧ ಕೇಸ್‌ ...

ಭೂ ವೈಜ್ಞಾನಿಕ ಮತ್ತು ಭೂಭೌತ ಸಮೀಕ್ಷಣೆ ಮೂಲಕ ಕೃಷಿ, ತೋಟಗಾರಿಕೆ, ಕುಡಿಯುವ ನೀರಿನ ಹಾಗೂ ಇತರೆ ಉದ್ದೇಶಗಳಿಗೆ ಕೊಳವೆಬಾವಿ ಸ್ಥಳದ ಆಯ್ಕೆಗಾಗಿ ಆನ್‌ಲೈನ್‌ ಮೂಲಕ ಸೇವಾಸಿಂಧು ಯೋಜನೆಯಡಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ/ ಅಂತರ್ಜಲ ನಿರ್ದೇಶನಾಲಯ/ ಕೊಳವೆಬಾವಿ ಸ್ಥಳ ಆಯ್ಕೆಗಾಗಿ ಉದ್ದೇಶಿಸಿರುವ ಆಯ್ಕೆಯಡಿ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಅಂತರ್ಜಲ ಅಧಿನಿಯಮ 2011 ಹಾಗೂ ನಿಯಮಾವಳಿ 2012ರಂತೆ ರಾಜ್ಯದಲ್ಲಿ ಕೊಳವೆಬಾವಿ ಕೊರೆಯುವ ಕಾರ್ಯ ನಿರ್ವಹಿಸುವ ರಿಗ್‌ಯಂತ್ರಗಳು ಕಡ್ಡಾಯವಾಗಿ ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು ಎಂದು ಹೇಳಿದ್ದಾರೆ.

ಹೊರ ರಾಜ್ಯಗಳಿಂದ ಬಂದಿರುವ ಕೊರೆಯುವ ಯಂತ್ರಗಳು ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿಯಾಗದೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯುತ್ತಿದ್ದಲ್ಲಿ ಸಾರ್ವಜನಿಕರು ಅಥವಾ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಅಥವಾ ಪಿಡಿಒ, ಗ್ರಾಮ ಲೆಕ್ಕಿಗರು ಸ್ಥಳೀಯ ಆರಕ್ಷಕ ಠಾಣೆಯಲ್ಲಿ ದೂರು ಸಲ್ಲಿಸಲು ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ತನಿಖಾ ಠಾಣೆಗಳಲ್ಲಿ ತಪಾಸಣೆ ಮಾಡಿ ಕ್ರಮ ವಹಿಸಲು ಸೂಚಿಸಿದರು.

ಕೊಳವೆಬಾವಿ ಕೊರೆಸಲಿರುವ ಸರ್ಕಾರಿ ಇಲಾಖೆಗಳು ಅಥವಾ ಸ್ಥಳೀಯ ನಗರ ಸಂಸ್ಥೆಗಳು, ನಿಗಮ ಮಂಡಳಿಗೆ ಹಾಗೂ ಇತರೆ ಇಲಾಖೆಗಳು ಅಂತರ್ಜಲ ಪ್ರಾಧಿಕಾರದಡಿ ನೋಂದಣಿಯಾಗಿ 7ಎ ಹೊಂದಿರುವ ರಿಗ್‌ ಯಂತ್ರಗಳ ಮಾಲೀಕರು ಹಾಗೂ ನೊಂದಾಯಿತ ಕೊಳವೆ ಬಾವಿ ಕೊರೆಯುವ ಸಂಸ್ಥೆಗಳು ಮಾತ್ರ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾವಹಿಸುವಂತೆ ಷರತ್ತನ್ನು ಕಡ್ಡಾಯವಾಗಿ ನೀಡಬೇಕು ಎಂದರು.

ಕೊಳವೆಬಾವಿ ಕೊರೆಯಲು 15 ದಿನಗಳ ಮುಂಚಿತವಾಗಿ ನಿವೇಶನ ಅಥವಾ ಜಮೀನಿನ ಮಾಲೀಕರು ಮತ್ತು ಕೊಳವೆಬಾವಿ ಕೊರೆಯುವ ಗುತ್ತಿಗೆದಾರರು ಅಥವಾ ಸರ್ಕಾರಿ ಸ್ವಾಮ್ಯದ ಕೊಳವೆಬಾವಿ ಕೊರೆಸುವ ಸರ್ಕಾರಿ ಇಲಾಖೆಗಳು, ಸ್ಥಳೀಯ ಪ್ರಾಧಿಕಾರದ ಅಧಿಕಾರಿಗೆ/ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿ ಸ್ವೀಕೃತಿ ಪಡೆದು ಅವರಿಂದ ಕೊಳವೆಬಾವಿ ಕೊರೆಯಲು ನಿರಾಕ್ಷೇಪಣಾ ಪತ್ರವನ್ನು ಪಡೆದ ನಂತರ ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಣಿಯಾಗಿ 7ಎ ಹೊಂದಿರುವ ಕೊರೆಯುವ ಯಂತ್ರಗಳಿಂದ ಮಾತ್ರ ಕೊಳವೆಬಾವಿಯನ್ನು ಕೊರೆಯಿಸಬೇಕು ಎಂದರು.

ವಿಫಲವಾದ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಿ ಯಾವುದೇ ಅವಘಡಗಳು ಸಂಭವಿಸದಂತೆ ಕ್ರಮ ವಹಿಸುವುದು. ತಪ್ಪಿದ್ದಲ್ಲಿ ಸಂಭವಿಸುವ ಅಪಘಾತಗಳಿಗೆ ನಿವೇಶನ/ಜಮೀನಿನ ಮಾಲೀಕರು/ಕೊಳವೆಬಾವಿ ಕೊರೆಸುವ ಗುತ್ತಿಗೆದಾರರು/ರಿಗ್‌ ಏಜೆನ್ಸಿಯವರನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೃಷಿ ಚಟುವಟಿಕೆಗಳಲ್ಲಿ ಅಂತರ್ಜಲ ಬಳಕೆಯನ್ನು ನಿಯಂತ್ರಣಗೊಳಿಸಲು ತುಂತುರು ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೈಗಾರಿಕೆ/ ವಾಣಿಜ್ಯ ಮತ್ತು ಮನೋರಂಜನೆ ಘಟಕಗಳು ಮಳೆ ನೀರು ಸಂಗ್ರಹಿಸಿ ಬಳಸಬೇಕು ಹಾಗೂ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡಬೇಕು. ಅಂತರ್ಜಲ ಮರು ಪೂರೈಕೆ ರಚನೆಗಳನ್ನು ನಿರ್ಮಿಸಿ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.