ಪಿರಿಯಾಪಟ್ಟಣ [ಸೆ.13]:  ಶಿಥಿಲಗೊಂಡ ಕಣಿವೆ ತೂಗು ಸೇತುವೆ ಮೇಲಿನ ಸಂಚಾರವನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಬಂಧಿಸಲಾಗಿದೆ ಎಂದು ತಹಸೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಹೇಳಿದರು.

ತಕ್ಷಣ ಎಚ್ಚೆತ್ತ ತಹಸೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಅಧಿಕಾರಿಗಳೊಂದಿಗೆ ಸೆ.12 ರ ಮಧ್ಯಾಹ್ನ ಸಮಯ ಭೇಟಿ ನೀಡಿ ಶಿಥಿಲಗೊಂಡಿರುವ ತೂಗು ಸೇತುವೆ ಪರಿಶೀಲಿಸಿ ಸಂಚಾರಕ್ಕೆ ಯೋಗ್ಯವಲ್ಲದ ಬಗ್ಗೆ ತಿಳಿದು ಮುನ್ನೆಚ್ಚರಿಕೆ ಕ್ರಮವಾಗಿ ತೂಗು ಸೇತುವೆಯ ಎರಡೂ ಬದಿಗಳಲ್ಲಿ ಸಂಚಾರ ನಿರ್ಬಂಧಿಸಿರುವ ಭಿತ್ತಿಪತ್ರ ಅಂಟಿಸಿ ತೂಗು ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಿದ್ದಾರೆ.

ಪತ್ರಿಕೆಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಕೆಲದಿನಗಳ ಹಿಂದೆ ಬಿದ್ದ ಭಾರಿ ಮಳೆಯ ಸಂದರ್ಭ ತೂಗು ಸೇತುವೆ ಶಿಥಿಲಗೊಂಡಿರುವ ಬಗ್ಗೆ ವಿಷಯ ಅರಿತು ಶಾಸಕ ಕೆ. ಮಹದೇವ್‌ ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು, ಪತ್ರಿಕೆಗಳಲ್ಲಿ ವರದಿ ಬಂದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಎಂದರು.

ತೂಗು ಸೇತುವೆಯ ಒಂದು ಬದಿ ಮೈಸೂರು ಜಿಲ್ಲೆಗೆ ಸೇರಿದರೆ ಮತ್ತೊಂದು ಬದಿ ಕೊಡಗು ಜಿಲ್ಲೆಗೆ ಸೇರುತ್ತದೆ, ಸೋಮವಾರಪೇಟೆ ತಹಸೀಲ್ದಾರ್‌ ಗೋವಿಂದರಾಜು ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ, ಸಂಚಾರ ನಿರ್ಬಂಧಿಸಿರುವ ಮಾಹಿತಿ ನೀಡಿದ್ದೇನೆ, ಸ್ಥಳದಲ್ಲಿ ಬಂದೋಬಸ್‌್ತ ಏರ್ಪಡಿಸುವಂತೆ ಕೋರಲಾಗಿದ್ದು, ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶೀಘ್ರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ತೂಗು ಸೇತುವೆ ದುರಸ್ತಿಪಡಿಸಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

ಶಾಸಕ ಕೆ. ಮಹದೇವ್‌ ಪ್ರತಿಕ್ರಿಯಿಸಿ ನೆರೆ ಹಾವಳಿ ಸಂದರ್ಭ ತೂಗು ಸೇತುವೆ ಶಿಥಿಲಗೊಂಡಿರುವ ವಿಷಯ ತಿಳಿದು ಅಂದೇ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ದುರಸ್ತಿಪಡಿಸುವಂತೆ ಮಾಹಿತಿ ನೀಡಿದ್ದೇನೆ, ಈ ಸಂಬಂಧ ಕೊಡಗಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.