ಪಿರಿಯಾಪಟ್ಟಣ [ಸೆ.22]:  ಬಹುಜನ ಸಮಾಜ ಪಾರ್ಟಿಯ ಶಾಸಕ ಎನ್‌. ಮಹೇಶ್‌ ಅವರನ್ನು ವಿನಾಕಾರಣ ಪಕ್ಷದಿಂದ ಉಚ್ಛಾಟಿಸಿರುವುದನ್ನು ಖಂಡಿಸಿ ತಾಲೂಕು ಬಿಎಸ್ಪಿ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ತಾಲೂಕು ಅಧ್ಯಕ್ಷ ವಕೀಲ ಲೋಕೇಶ್ ನಂದಿಪುರ ಮಾತನಾಡಿ, ಸರಿ ಸುಮಾರು 20 ವರ್ಷಗಳಿಂದ ಎನ್‌. ಮಹೇಶ್‌ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟಗಳ ಮುಖಾಂತರ ಬಿಎಸ್ಪಿ ಪಕ್ಷವನ್ನು ಸಂಘಟಿಸಿ ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಎಸ್ಪಿ ಪಕ್ಷದ ಶಾಸಕರಾಗಿ ಎನ್‌. ಮಹೇಶ್‌ ಅವರು ಆಯ್ಕೆಯಾಗಿದ್ದರು, ದಸಂಸ ಸಂಘಟನೆಗಳು ಬಿಎಸ್ಪಿ ಜೊತೆಗಿದ್ದರೂ ಈ ಹಿಂದೆ ಪಕ್ಷಕ್ಕೆ ನಿರೀಕ್ಷಿತ ಮತಗಳು ಬರುತ್ತಿರಲಿಲ್ಲ, ಎನ್‌. ಮಹೇಶ್‌ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರದ ದಿನಗಳಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟಿಸಿ ಹಿಂದುಳಿದ ವರ್ಗದವರ ದನಿಯಾಗಿತ್ತು, ಆದರೆ ಏಕಾಏಕಿ ಶಾಸಕ ಎನ್‌. ಮಹೇಶ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಿರುವುದು ನಮಗೆಲ್ಲ ನೋವುಂಟು ಮಾಡಿದ್ದು ಪಕ್ಷ ನಮಗೆ ನೀಡಿದ್ದ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾ ಸಮಿತಿ ಸದಸ್ಯ ಈರಾಜು ಬಹುಜನ್‌, ತಾಲೂಕು ಉಸ್ತುವಾರಿ ಮಂಜು ಆಯಿತನಹಳ್ಳಿ ಮಾತನಾಡಿ, ರಾಜ್ಯದಲ್ಲಿ ಬಿಎಸ್ಪಿಯ ಎನ್‌. ಮಹೇಶ್‌ ಅವರ ನೇತೃತ್ವದಲ್ಲಿ 2004 ರಿಂದ 2019 ರವರೆಗೆ ವಿವಿಧ ಚುನಾವಣೆಗಳಲ್ಲಿ ಮತಗಳಿಕೆಯಲ್ಲಿ ಗಣನೀಯ ಪ್ರಮಾಣದ ಸಾಧನೆ ತೋರಿದೆ, ಇವರ ಏಳಿಗೆಯನ್ನು ಸಹಿಸದ ಕೆಲ ಕಿಡಿಗೇಡಿಗಳ ಪಿತೂರಿಯಿಂದ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ, ಪ್ರಸ್ತುತ ರಾಜ್ಯ ಕಮಿಟಿಯ ನಿರ್ಧಾರವನ್ನು ನಾವೆಲ್ಲರೂ ವಿರೋಧಿಸುತ್ತಿದ್ದು ಅವರನ್ನು ಬೆಂಬಲಿಸಿ ರಾಜೀನಾಮೆ ನೀಡುತ್ತಿದ್ದೇವೆ ಮುಂದೆ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿದ್ದೇವೆ ಎಂದರು.

ಇದೇ ವೇಳೆ ತಾಲೂಕಿನ ಸೆಕ್ಟರ್‌ ಹಾಗೂ ಬೂತ್‌ ಕಮಿಟಿಗಳನ್ನು ವಿಸರ್ಜಿಸಲಾಯಿತು. ಪ್ರಧಾನ ಕಾರ್ಯದರ್ಶಿ ಡಿ.ಕೆ. ಚಂದ್ರು, ಕಾರ್ಯದರ್ಶಿ ದೇವೇಂದ್ರ, ಮುಖಂಡರಾದ ರಾಜಪ್ಪ, ಕಾರ್ತಿಕ್‌, ಚಾಮರಾಯನಕೋಟೆ ಪ್ರದೀಪ್‌, ಮಂಜು, ರಮೇಶ್‌, ಕುಮಾರ್‌, ನಿತಿನ್‌, ಮಹೇಶ್‌ ಇದ್ದರು.