ತುಮಕೂರು [ಸೆ.13]:  ನಗರದಲ್ಲಿ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಸಿಗ್ನಲ್‌ ಫ್ರೀ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸಲು ಸ್ಮಾರ್ಟ್‌ ಸಿಟಿ ಮುಂದಾಗಿದೆ.

ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನಲ್ಲಿ ದಿನೇ ದಿನೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಗ್ನಲ್‌ ಫ್ರೀ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸಲಾಗುವುದು.

ಬೆಂಗಳೂರಿನ ನಂತರ ಅತೀ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ತುಮಕೂರಿನ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹಾಗೂ ಜಿಲ್ಲಾದ್ಯಂತ ಕೈಗಾರಿಕಾ ವಲಯದ ಅಭಿವೃದ್ಧಿಯಿಂದ ನಗರದ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಇದನ್ನು ಮನಗಂಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ನಗರದಲ್ಲಿ ವಾಹನ ದಟ್ಟಣೆ ಪ್ರಮಾಣವನ್ನು ತಗ್ಗಿಸಿ ಸುಗಮ ಸಂಚಾರವನ್ನು ಕಲ್ಪಿಸುವ ಸಲುವಾಗಿ ಸಿಗ್ನಲ್‌ ಫ್ರೀ ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌)ನಿರ್ಮಿಸಲು ಮುಂದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಚತುಷ್ಪಥ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಈ ಪಿಆರ್‌ಆರ್‌ ನಿರ್ಮಿಸಲು ಯೋಜಿಸಲಾಗಿದೆ. ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣದಿಂದ ಹೊರ ರಾಜ್ಯಗಳ ಭಾರಿ ವಾಹನಗಳು ಈ ರಸ್ತೆ ಮೂಲಕ ಸಾಗಲಿವೆ. ಇದರಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಮೇಲಿನ ಸಂಚಾರ ಒತ್ತಡ ಕಡಿಮೆಯಾಗಲಿದೆ.

85 ಕೋಟಿ ವೆಚ್ಚದಲ್ಲಿ ಪಿಆರ್‌ಆರ್‌:

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಅಧ್ಯಕ್ಷೆ ಡಾ.ಶಾಲಿನಿ ರಜನೀಶ್‌ ಅವರ ಮಾರ್ಗದರ್ಶನದಲ್ಲಿ ಯೋಜನಾ ನಿರ್ವಹಣ ಸಲಹೆದಾರ ಸಂಸ್ಥೆಯಾದ ಐಪಿಇ ಗ್ಲೋಬಲ್‌ ಲಿಮಿಟೆಡ್‌ ಈಗಾಗಲೇ ಪಿಆರ್‌ಆರ್‌ ಕಾಮಗಾರಿ ಕೈಗೊಂಡಿದ್ದು, ಪ್ರಗತಿಯಲ್ಲಿದೆ. ನಗರದ ಹೊರವಲಯದ ಕ್ಯಾತಸಂದ್ರದಿಂದ ಗುಬ್ಬಿ ಗೇಟ್‌ವರೆಗೆ ಸುಮಾರು 85 ಕೋಟಿ ರೂ. ವೆಚ್ಚದಲ್ಲಿ 10.5 ಕಿ.ಮೀ ಉದ್ದದ ಈ ಸಿಗ್ನಲ್‌ ಫ್ರೀ ಪೆರಿಫೆರಲ್‌ ರಿಂಗ್‌ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದಲ್ಲದೆ ನಗರವನ್ನು ಕಾಡುತ್ತಿರುವ ವಾಯುಮಾಲಿನ್ಯ ಪ್ರಮಾಣವೂ ತಗ್ಗುತ್ತದೆ. ಪ್ರಸ್ತುತ ಉತ್ತರ-ದಕ್ಷಿಣ ರಾಜ್ಯಗಳಿಗೆ ಸೇರಿದ ಸರಕು ಸಾಗಣೆ ವಾಹನಗಳು ತುಮಕೂರು ಮೂಲಕವೇ ಹಾದು ಹೋಗುತ್ತಿದ್ದು, ಪೆರಿಫೆರಲ್‌ ರಸ್ತೆ ಪೂರ್ಣಗೊಂಡ ನಂತರ ಶೇ.25ರಷ್ಟುಸಂಚಾರ ಒತ್ತರ ಕಡಿಮೆಯಾಗಲಿದೆ.

ರೈಲು ಸಂಚಾರಕ್ಕೂ ಅವಕಾಶ:

ಹಾಲಿ ಕೈಗೊಂಡಿರುವ ವರ್ತುಲ ರಸ್ತೆಯು ಎರಡೂ ದಿಕ್ಕಿನಲ್ಲಿ ಎರಡು ಲೇನ್‌ ಹಾಗೂ ಸರ್ವಿಸ್‌ ರಸ್ತೆ(ಕೆಲವೆಡೆ ಹೊರತುಪಡಿಸಿ)ಯನ್ನೂ ಹೊಂದಿದೆ. ಪಿಆರ್‌ ರಸ್ತೆಯು 75 ಮೀ. ಅಗಲ ಹೊಂದಿರುವ ಈ ಚತುಷ್ಪಥ ರಸ್ತೆಯು ಕಾರಿಡಾರ್‌ ಮಾದರಿಯಲ್ಲಿರುತ್ತದೆ. ಜೊತೆಗೆ ಎರಡೂ ಬದಿ ಸರ್ವಿಸ್‌ ರಸ್ತೆಯನ್ನೂ ನಿರ್ಮಿಸಲಾಗುವುದು ಹಾಗೂ ವಿಶಾಲ ಪಾದಚಾರಿ ಮಾರ್ಗದೊಂದಿಗೆ ನೀರಿನ ಕೊಳವೆ, ಕೇಬಲ್‌ ಸಹಿತ ನಾನಾ ಯುಟಿಲಿಟಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಈ ಹೊಸ ಮಾರ್ಗದಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಂಚರಿಸಬಹುದು. ಇದಲ್ಲದೆ ಭವಿಷ್ಯದಲ್ಲಿ ರೈಲು ಸಂಚರಿಸಲು ಸ್ಥಳಾವಕಾಶವನ್ನು ಕಾಯ್ದಿರಿಸಲಾಗುತ್ತದೆ.

ಈ ನಾಲ್ಕು ಪಥಗಳ ಸೌಲಭ್ಯದಿಂದ ಕೈಗಾರಿಕೆ, ಉದ್ಯಮ, ಪ್ರವಾಸೋದ್ಯಮ, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೊಳ್ಳಲಿದೆ. ರಸ್ತೆಯನ್ನು ಸುಧಾರಿಸುವ ಮೂಲಕ ವಾಹನಗಳ ನಿರ್ವಹಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಬಹುದು. ಕಡಿಮೆ ಸಮಯದಲ್ಲಿ ನಿರೀಕ್ಷಿತ ಸ್ಥಳಕ್ಕೆ ತಲುಪಿಸುವ ಈ ರಸ್ತೆಯು ಅಗಲವಿರುವುದರಿಂದ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅನುವಾಗಲಿದ್ದು, ರಸ್ತೆ ಅಪಘಾತಗಳ ಸಂಖ್ಯೆ ತಗ್ಗಲಿದೆ.

- ಭೂಬಾಲನ್‌ ವ್ಯವಸ್ಥಾಪಕ ನಿರ್ದೇಶಕ ಸ್ಮಾರ್ಟ್‌ಸಿಟಿ