ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ಬಿಡುವುದಿಲ್ಲ: ಟ್ರಾಫಿಕ್ ತಡೆಗೆ ಡಿಕೆಶಿ ಪ್ಲಾನ್!
ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಇದನ್ನು ಸುಧಾರಿಸಲು ಮೆಟ್ರೋ ಸೇರಿದಂತೆ ಇನ್ನಿತರೆ ಸಾರಿಗೆ ವ್ಯವಸ್ಥೆಗಳ ಸಂಪರ್ಕ ಕೊಂಡಿ ಯೋಜನೆಯ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಅ.08): ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಇದನ್ನು ಸುಧಾರಿಸಲು ಮೆಟ್ರೋ ಸೇರಿದಂತೆ ಇನ್ನಿತರೆ ಸಾರಿಗೆ ವ್ಯವಸ್ಥೆಗಳ ಸಂಪರ್ಕ ಕೊಂಡಿ ಯೋಜನೆಯ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘದ (ಒಆರ್‌ಆರ್ ಸಿಎ) ಸದಸ್ಯರೊಂದಿಗೆ ಕಾಡುಬೀಸನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ಬಿಡುವುದಿಲ್ಲ.
ಬೆಂಗಳೂರಿನ ಐದನೇ ಒಂದು ಭಾಗದಷ್ಟು ಆದಾಯ ಹೊರ ವರ್ತುಲ ರಸ್ತೆಯ ಉದ್ದಿಮೆಗಳಿಂದಲೇ ಬರುತ್ತಿದೆ. ಬೆಂಗಳೂರಿನ ಹಾಗೂ ಹೊರ ವರ್ತುಲ ರಸ್ತೆಯ ಉದ್ದಿಮೆಗಳ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಅರಿವಿದೆ. ನೌಕರರರಿಗೆ, ಆ ಭಾಗದ ನಿವಾಸಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸಮಸ್ಯೆ ನಿವಾರಿಸಲು ಆದ್ಯತೆ ನೀಡುತ್ತೇವೆ ಎಂದರು. ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ 6ರಿಂದ 8 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಚಾರ ದಟ್ಟಣೆಗೆ ಇರುವ ಸಮಸ್ಯೆಗಳನ್ನು ಮೊದಲು ನಿವಾರಿಸಲಾಗುವುದು.
ಉದ್ಯೋಗ ಸೃಷ್ಟಿ ಉದ್ದೇಶದಿಂದ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ: ಡಿಕೆಶಿ
ಮುಂದಿನ ಮೂರು ತಿಂಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿರುವ ಅನಧಿಕೃತ ಅಂಗಡಿ- ಮುಂಗಟ್ಟುಗಳನ್ನು ಗುರುತಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರಿನ ಪೊಲೀಸ್, ಬಿಬಿಎಂಪಿ, ಬಿಡಿಎ, ಮೆಟ್ರೋ ಕಮಿಷನರ್‌ಗಳಿಗೆ ಸಂಚಾರ ದಟ್ಟಣೆ ಬಗ್ಗೆ ಅರಿವಿದೆ, ಅವರೂ ಸಹ ಸರ್ಕಾರದ ಒತ್ತಾಸೆಯಂತೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ನಗರದ ಸಾಮರ್ಥ್ಯಕ್ಕೆ ತಕ್ಕ ತೆರಿಗೆ ಸಂಗ್ರಹ ಆಗುತ್ತಿಲ್ಲ: ಬೆಂಗಳೂರಿನ ಸಾಮರ್ಥ್ಯಕ್ಕೆ ಅನುಗುಣವಾಗಿ ತೆರಿಗೆ ಹಣ ಸಂಗ್ರಹವಾಗುತ್ತಿಲ್ಲ. ಜನರು ಹಾಗೂ ಉದ್ದಿಮೆಗಳು ತಮ್ಮ ಆಸ್ತಿಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕು. ಬೆಂಗಳೂರಿನ ಐಟಿ ಕಂಪನಿಗಳು ಸೇರಿದಂತೆ ಇತರೇ ಉದ್ದಿಮೆಗಳ ಮಾಲೀಕರು ತಮ್ಮ ಸಿಎಸ್ಆರ್ ಹಣವನ್ನು ಗ್ರಾಮೀಣ ಭಾಗದ ಶಿಕ್ಷಣಕ್ಕೆ ಖರ್ಚು ಮಾಡಬೇಕು. ನಗರ ಭಾಗದ ಮಕ್ಕಳಿಗೆ ದೊರೆಯುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೂ ದೊರೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸಂವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಒಆರ್‌ಆರ್‌ಸಿಎ ಸದಸ್ಯರೊಂದಿಗೆ ಸಭೆ ನಡೆಸಿದ್ದೇನೆ. ಅನೇಕ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಬಿಬಿಎಂಪಿ, ಪೊಲೀಸ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಹೊರವರ್ತುಲ ರಸ್ತೆ ಅತ್ಯಂತ ಪ್ರಮುಖ ಪ್ರದೇಶವಾಗಿದೆ. ಇಲ್ಲಿನ ಸಂಸ್ಥೆಗಳು ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿ, ದೇಶ ಹಾಗೂ ರಾಜ್ಯಕ್ಕೆ ಉತ್ತಮ ತೆರಿಗೆ ಪಾವತಿಸುತ್ತಿವೆ. ಹೊರವರ್ತುಲ ರಸ್ತೆಯ ದಟ್ಟಣೆ ಕಡಿಮೆ ಮಾಡಲು ಕೆಲವು ಸ್ಥಳಗಳನ್ನು ಗುರುತಿಸಿದ್ದೇವೆ. ಎಲ್ಲರೂ ಸೇರಿ ಜವಾಬ್ದಾರಿಯಿಂದ ಸಮಸ್ಯೆಗೆ ಪರಿಹಾರ ನೀಡಬೇಕಿದೆ ಎಂದರು.
ಕಾಲುವೆ ಒತ್ತುವರಿ ತೆರವಿಗೆ ಅಧಿಕಾರಿಗಳು ಸ್ವತಂತ್ರರು: ರಾಜಕಾಲುವೆ ತೆರವು ಮಾಡಲು ಸರ್ಕಾರ ಅಧಿಕಾರಿಗಳಿಗೆ ಸಂಪೂರ್ಣ ಜವಾಬ್ದಾರಿ ನೀಡಿದೆ. ರಾಜಕಾಲುವೆಗಳನ್ನು ಎಲ್ಲೂ ಒತ್ತುವರಿ, ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸ್ವತಂತ್ರರು. ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನವೆಂಬರ್ ವೇಳೆಗೆ ರಸ್ತೆ ಗುಂಡಿ ದುರಸ್ತಿ: ರಸ್ತೆಗುಂಡಿಗಳನ್ನು ಮುಂದಿನ ನವೆಂಬರ್ ವೇಳೆಗೆ ಸರಿಪಡಿಸಲು ಸೂಚಿಸಿದ್ದೇನೆ. ರಸ್ತೆಗುಂಡಿ ಎಲ್ಲೆಲ್ಲಿದೆ ಎಂದು ಗುರುತಿಸಿ ಮಾಹಿತಿ ನೀಡಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ನಗರದ ಸಂಚಾರ ದಟ್ಟಣೆ ನಿವಾರಣೆಗೆ ಆದ್ಯತೆ ಮೇರೆಗೆ ಎಲ್ಲ ಯೋಜನೆ ಜಾರಿ ಮಾಡಲಾಗುವುದು. ಪಿಆರ್ ಆರ್ ಯೋಜನೆಗೆ ಕೆಲವು ಕಾನೂನು ತೊಡಕುಗಳಿವೆ. ಹೀಗಾಗಿ ತಡವಾಗಿದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಆರಂಭವಾಗುತ್ತಿತ್ತು. ಕಾನೂನು ಮೀರಿ ಕೆಲಸ ಮಾಡಲು ಆಗುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ
ಪೆರಿಫೆರಲ್ ರಸ್ತೆ ಸಂಪರ್ಕಿಸುವ 45 ಮೀಟರ್ ರಸ್ತೆ ಪರಿಶೀಲನೆ: ಮಹದೇವಪುರ ವಲಯ ಹೊರ ವರ್ತುಲ ರಸ್ತೆಯಿಂದ ಭೋಗನಹಳ್ಳಿ, ಗುಂಜೂರು ಹಾಗೂ ವರ್ತೂರು ಮುಖಾಂತರ ಹೊಸ ಪೆರಿಪೆರಲ್ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸಲು 5.6 ಕಿ.ಮೀ. ಉದ್ದದ 45 ಮೀಟರ್ ಅಗಲದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ 4 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ 1.6 ಕಿ.ಮೀ. ರಸ್ತೆ ಕಾಮಗಾರಿ ಬಾಕಿಯಿದೆ. ಬಾಕಿ ರಸ್ತೆ ಕಾಮಗಾರಿಯಲ್ಲಿ ರೈಲ್ವೆ ಮೇಲು ಸೇತುವೆ ಕಾಮಗಾರಿ ಹಾಗೂ ಅರಣ್ಯ ಇಲಾಖೆಯಿಂದ ಜಾಗ ಪಡೆಯಬೇಕಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡು ಬಾಕಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿಗಳು ಸೂಚಿಸಿದರು.