ಶೇಷಮೂರ್ತಿ ಅವಧಾನಿ

ಕಲಬುರಗಿ(ಏ.26): ಕೊರೋನಾ ಹೆಮ್ಮಾರಿಗೆ ಇಡೀ ದೇಶದಲ್ಲೇ ಮೊದಲ ಸಾವು ತಮ್ಮೂರಾಗೆ ಆಯ್ತೆಂದು ಎದೆಯೊಡೆದುಕೊಂಡಿರೋ ಇಲ್ಲಿನ ಮಂದಿ ಪೊಲೀಸರು, ಜಿಲ್ಲಾಡಳಿತ, ಪಾಲಿಕೆಯವರು ಬಂದು ರಸ್ತೆ ಬ್ಲಾಕ್‌ ಮಾಡಲೆಂದ ಕೂಡಲೇ ತಾವೇ ದಿಗ್ಭಂಧನ ಹಾಕಿಕೊಂಡಿದ್ದಾರೆ, ಆ ಮೂಲಕ ತಮಗರಿವಿಲ್ಲದಂತೆಯೇ ಮನೆ, ಬಡಾವಣೆ, ವಾರ್ಡ್‌ ಸುತ್ತಮುತ್ತ ಚಕ್ರವ್ಯೂಹ ಸೃಷ್ಟಿಸಿಕೊಂಡು ಬಿಟ್ಟಿದ್ದಾರೆ.

ಬ್ರಹ್ಮಪುರ, ಲಾಲಗೇರಿ, ಗಂಗಾನಗರ, ಭವಾನಿ ಮಂದಿರ, ಭವಾನಿ ಶಂಕರ ಗುಡಿ ಪ್ರದೇಶ, ಚವಡೇಶ್ವರಿ ಕಾಲೋನಿ, ಮಾಣಿಕೇಶ್ವರಿ ಕಾಲೋನಿ, ಕೋರಿಮಠ, ಸಮತಾ ಕಾಲೋನಿ, ವಾಟರ್‌ ಟ್ಯಾಂಕ್‌, ಶಾ ಹುಸೇನ್‌ ಚಿಲ್ಲಾ ಪ್ರದೇಶ, ವಡ್ಡರಗಲ್ಲಿ, ಬನಶಂಕರಿ ನಗರ, ಕನಕ ನಗರ, ಮಹಾಲಕ್ಷ್ಮೀ ಲೇ ಔಟ್‌, ದೇಶಮುಖ ವಾಡಾ, ನ್ಯೂ ರಾಘವೇಂದ್ರ ಕಾಲೋನಿ, ಲಕ್ಷ್ಮೇ ನರಸಿಂಹ ಟೆಂಪಲ್‌ ಹೀಗೆ ಬ್ರಹ್ಮಪುರ ಒಡಲೊಳಿರುವ ಹದಿನಾಲ್ಕಕ್ಕೂ ಹೆಚ್ಚು ಬಡಾವಣೆಗಳಿಗೆ ಸಂಪರ್ಕಿಸುವ ಬಹುತೇಕ ರಸ್ತೆಗಳು ತಿಂಗಳಾಯ್ತು ಲಾಕ್‌ ಆಗಿ.

'ಕಲಬುರಗಿಯಲ್ಲಿ ಕಾನೂನು ವೈಫಲ್ಯದಿಂದ ಕೊರೋನಾ ವೈರಸ್‌ ಉಲ್ಬಣ'

ಹೆಮ್ಮಾರಿ ಕಟ್ಟಿ ಹಾಕಲು ಚಕ್ರವ್ಯೂಹ:

ಟಿನ್‌ಶೆಡ್‌ ಬಳಸಿ, ಕಟ್ಟಿಗೆ ತುಂಡು ನಿಲ್ಲಿಸಿ, ಸಿಮೆಂಟ್‌ ಕೊಳವೆ ಅಡ್ಡ ಇಟ್ಟು ರಸ್ತೆ ಬಂದ್‌ ಮಾಡಿರುವ ನಿವಾಸಿಗಳದ್ದು ‘ತಮ್ಮ ಗಲ್ಲಿಗಳಲ್ಲಿ ಯಾರೂ ಅನಾವಶ್ಯಕ ಓಡಾಡಬಾರದು’ ಎಂಬುದೇ ಉದ್ದೇಶ. ಕೊರೋನಾತಂಕದ ಕಲಬುರಗಿಯ ಬ್ರಹ್ಮಪುರ ಜನನಿಬಿಡ ಪ್ರದೇಶ ಎಂಬುದರಲ್ಲಿ ದೂಸ್ರಾ ಮಾತಿಲ್ಲ, ನೈರ್ಮಲ್ಯ, ಸ್ವಚ್ಛತೆ ಅಷ್ಟಕ್ಕಷ್ಟೆಇರೋ ಇಲ್ಲಿ ಹೆಮ್ಮಾರಿ ಇಣುಕಿದರೂ ಸಾಕು, ಎಲ್ಲವೂ ಹರೋಹರ, ಇದನ್ನು ಮನಗಂಡೇ ಬಹುಶಃ ಇಲ್ಲಿನ ನಿವಾಸಿಗಳು ಕೊರೋನಾ ಕಾಲದಲ್ಲಿ ‘ಚಕ್ರವ್ಯೂಹ’ ನಿರ್ಮಿಸಿ ಹೆಮ್ಮಾರಿಗೆ ಸವಾಲು ಹಾಕಿದ್ದಾರೆ.

ಗಂಗಾನಗರನಲ್ಲಿ ಸೀಲ್‌ಡೌನ್‌ ಪರಾಕಾಷ್ಟೆ:

ಬೈಕ್‌ ಸವಾರಿಯಲ್ಲಿ ಗಗಾನಗರ ಹೊಕ್ಕರೆ ತೀರಿತು, ಇಲ್ಲಿ ಅಕ್ಕಪಕ್ಕದ 35ಕ್ಕೂ ಹೆಚ್ಚು ರಸ್ತೆಗಳು ಸೀಲ್‌ಡೌನ್‌, ಈ ರಸ್ತೆ ಓಪನ್‌ ಇದೆ ಎಂದು ಬೈಕ್‌ ಚಲಿಸಿದರೆ ಮುಂದೆ ಮುಳ್ಳುಕಂಟಿಗಳೇ ಸ್ವಾಗತಿಸುತ್ತವೆ, ಅಯ್ಯೋ, ಇದೆನ್‌ ಬಂತಲ್ಲ ಎಂದು ಪಕ್ಕದಲ್ಲೇ ಗಲ್ಲಿ ರಸ್ತೆಯೊಳ್ಗೆ ಟರ್ನ್‌ ಹೊಡದ್ರೆ ಸಾಲುಸಾಲು ಕಲ್ಲಿಟ್ಟು ಮಿನಿ ಕಂಟೌಂಡ್‌ ರಚನೆಯಿಂದಲೇ ಬ್ಲಾಕ್‌ ಆಗಿರೋ ರಸ್ತೆ ಕಾಡುತ್ತದೆ, ಅಯ್ಯೋ ಇದೇನ್‌ ಬಂತಲ್ಲೋ ಎಂತು ಯೂ ಟರ್ನ್‌ ಹೊಡೆದ್ರೆ ಅಲ್ಲೂ ಬ್ಲಾಕ್‌ ಕಟ್ಟಿಟ್ಟಬುತ್ತಿ.

‘ಕನ್ನಡಪ್ರಭ’ ಈ ಪ್ರದೇಶದಲ್ಲಿ ನಡೆಸಿದ ಸಂಚಾರ ಕಾಲದಲ್ಲಿ ಬಡಾವಣೆ, ಗಲ್ಲಿ, ಮನೆಗಳಿಗೆ ಸಂಪರ್ಕಿಸುವ 100ಕ್ಕೂ ಹೆಚ್ಚು ದಾರಿಗಳು ಮುಚ್ಚಿಕೊಂಡಿರೋದು ಕಂಡುಬಂತು!

ಯಾನ್‌ ಮಾಡೋದರಿ, ಮನಿಗ ಹೋಗ್ಲಿಕ್ಕಿ ತ್ರಾಸ್‌ ಆಗ್ತದ, ಆದ್ರ ದೊಡ್ಡರೊಗಕ್ಕೆ ಕರಕೊಂಡು ಬರೋದಕ್ಕಿಂತ ತುಸು ತ್ರಾಸ್‌ ಮಾಡ್ಕೊಂಡು ಮನಿಗೆ ಹೋಗೋದೇ ಚೆಂದ ಅಲ್ಲೇನ್ರಿ? ಅದ್ಕ ನಾವು ತಿಂಗಳಾದರೂ ಹಲ್ಲಾಗ ನಾಲ್ಗಿ ಹಾಕ್ಕೊಂಡೇ ಸುಮ್ಕ ಕುಂತೀವಿ. ಕೊರೋನಾ ಹೆಮ್ಮಾರಿ ಹೋಗೋಗುಂಟಾ ನಾವು ಯಾವ ರಸ್ತಾ ಯಾಕ ಬಂದ್‌ ಮಾಡೀರಿ ಅಂತ ತೆಲಿ ಕೆಡಿಸ್ಗೊಳ್ಲೋದಿಲ್ರಿ ಎಂದು ಗಂಗಾನಗರ ಬಡಾವಣೆ ಗೃಹಿಣಿ ಕಲಾವತಿ ಅವರು ಹೇಳಿದ್ದಾರೆ.