ಕಾರವಾರ [ಡಿ.08] : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ತಹಶೀಲ್ದಾರ್ ವಾಹನ ಚಾಲಕ ಕುಡಿದ ಮತ್ತಿನಲ್ಲಿ ಯದ್ವಾತದ್ವಾ ವಾಹನ ಚಲಾಯಿಸಿದ್ದನ್ನು ತಡೆದ ಸಾರ್ವಜನಿಕರು ಆತನನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. 

ಈ ಘಟನೆ ಯಲ್ಲಾಪುರ ನಗರದಲ್ಲಿ ನಡೆದಿದ್ದು,‌ ತಹಶೀಲ್ದಾರ್ ವಾಹನ ಚಾಲಕನನ್ನು ಕುಮಾರ್ ಎಂದು‌ ಗುರುತಿಸಲಾಗಿದೆ. ಮದ್ಯ  ಸೇವಿಸಿದ್ದ  ಕುಮಾರ್, ಅತೀ ವೇಗದಲ್ಲಿ ಯದ್ವಾತದ್ವಾ ವಾಹನ ಚಲಾಯಿಸಲು ಆರಂಭಿಸಿದ್ದ.‌  ವಾಹನ ರಿವರ್ಸ್ ತೆಗೆದುಕೊಳ್ಳುವ ಭರದಲ್ಲಿ ಸಾರ್ವಜನಿಕರು ಅಪಘಾತಕ್ಕೀಡಾಗುವುದು ಕೊಂಚದಲ್ಲಿ ಮಿಸ್ ಆಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದನ್ನು ಪ್ರಶ್ನಿಸಿದಾಗ ಪ್ರಾರಂಭದಲ್ಲಿ ಸಿಟ್ಟಿನಿಂದಲೇ ಮಾತನಾಡಿದ್ದ ಕುಮಾರ್, ತನ್ನ ವಾಹನದ ಸುತ್ತಲೂ  ಜನ ಹೆಚ್ಚಾಗುತ್ತಿದ್ದಂತೆ ಥಂಡಾ ಆಗಿದ್ದಾನೆ.     ಮದ್ಯದ ಅಮಲು ಇಳಿಯುತ್ತಿದ್ದಂತೆ ಸಾರ್ವಜನಿಕರಲ್ಲಿ ಕ್ಷಮೆ ಕೇಳಿ ಸ್ಥಳದಿಂದ ತೆರಳಿದ್ದಾನೆ. ಘಟನೆ ಸಂಬಂಧ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಚಾಲಕ‌ ಕುಮಾರ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.